ADVERTISEMENT

ಭಾರತಕ್ಕೆ ಸರಣಿ ಗೆಲುವಿನ ಹಂಬಲ: ಹರ್ಮನ್‌ಪ್ರೀತ್ ಬಳಗಕ್ಕೆ ಇಂಗ್ಲೆಂಡ್ ಸವಾಲು

ಮೂರನೇ ಟಿ20

ಪಿಟಿಐ
Published 13 ಜುಲೈ 2021, 11:46 IST
Last Updated 13 ಜುಲೈ 2021, 11:46 IST
ದೀಪ್ತಿ ಶರ್ಮಾ– ರಾಯಿಟರ್ಸ್ ಚಿತ್ರ
ದೀಪ್ತಿ ಶರ್ಮಾ– ರಾಯಿಟರ್ಸ್ ಚಿತ್ರ   

ಚೆಮ್ಸ್‌ಫೋರ್ಡ್: ಎರಡು ವರ್ಷಗಳ ಬಳಿಕ ಟಿ20 ಸರಣಿ ಗೆಲುವಿನ ಸಿಹಿ ಸಜ್ಜಾಗಿರುವ ಭಾರತ ಮಹಿಳಾ ತಂಡವು ಮೂರನೇ ಮತ್ತು ಅಂತಿಮ ಟ್ವೆಂಟಿ–20 ಪಂದ್ಯದಲ್ಲಿ ಬುಧವಾರ ಇಂಗ್ಲೆಂಡ್ ತಂಡದ ಸವಾಲು ಎದುರಿಸಲಿದೆ.

ಎರಡನೇ ಟಿ–20 ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡ ಭಾನುವಾರ ಆತಿಥೇಯ ತಂಡಕ್ಕೆ ಸೋಲುಣಿಸಿತ್ತು. ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತ್ತು. ಅದ್ಭುತ ಫೀಲ್ಡಿಂಗ್ ಮತ್ತು ಡೆತ್‌ ಓವರ್‌ಗಳಲ್ಲಿ ಸ್ಪಿನ್ನರ್‌ಗಳಾದ ಪೂನಂ ಯಾದವ್‌ ಮತ್ತು ದೀಪ್ತಿ ಶರ್ಮಾ ಅವರ ಬಿಗು ಬೌಲಿಂಗ್ ದಾಳಿ ಈ ಜಯಕ್ಕೆ ಪ್ರಮುಖ ಕಾರಣವಾಗಿದ್ದವು.

ಭಾರತ ಕೊನೆಯ ಬಾರಿ ಟಿ20 ಸರಣಿ ಜಯಿಸಿದ್ದು 2019ರಲ್ಲಿ. ಹರ್ಮನ್‌ಪ್ರೀತ್ ಬಳಗವು ಆಗ ವೆಸ್ಟ್ ಇಂಡೀಸ್ ತಂಡವನ್ನು ಅದರ ನೆಲದಲ್ಲೇ ಪರಾಭವಗೊಳಿಸಿತ್ತು.

ADVERTISEMENT

ಬ್ಯಾಟಿಂಗ್‌ನ ಅಗ್ರಕ್ರಮಾಂಕದಲ್ಲಿ ಶಫಾಲಿ ವರ್ಮಾ ಪರಿಣಾಮಕಾರಿಯಾಗಿದ್ದಾರೆ. ಸ್ಪಿನ್ನರ್‌ಗಳು ಎದುರಾಳಿಗಳ ರನ್‌ ಗಳಿಕೆಗೆ ಕಡಿವಾಣ ಹಾಕುತ್ತಿದ್ದಾರೆ. ಇದೇ ರೀತಿಯ ಸಾಮರ್ಥ್ಯವು ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಮತ್ತು ವೇಗದ ಬೌಲರ್‌ಗಳಿಂದ ಹೊಮ್ಮಬೇಕಿದೆ.

ಮೂರನೇ ಕ್ರಮಾಂಕಕ್ಕೆ ಬಡ್ತಿ ಪಡೆದು ಬ್ಯಾಟಿಂಗ್‌ಗೆ ಇಳಿಯುತ್ತಿರುವ ಹರ್ಮನ್‌ಪ್ರೀತ್‌ ಅಗತ್ಯ ರನ್‌ಗಳನ್ನು ಗಳಿಸಿಕೊಡುತ್ತಿದ್ದಾರೆ. ವಿಕೆಟ್‌ಗಳು ಕೈಯಲ್ಲಿದ್ದರೂ ಭಾರತದ ಬ್ಯಾಟರ್‌ಗಳು ವೇಗದ ಆಟಕ್ಕೆ ಒತ್ತು ಕೊಡುತ್ತಿಲ್ಲ ಎಂಬುದು ಕಳವಳಕ್ಕೆ ಕಾರಣವಾಗಿದೆ.

ಶಿಖಾ ಪಾಂಡೆ ಮತ್ತು ಅರುಂಧತಿ ರೆಡ್ಡಿ ನಿಖರ ಬೌಲಿಂಗ್ ದಾಳಿ ಸಂಘಟಿಸಬೇಕಿದೆ.

ಆದರೆ ಇದಕ್ಕೆ ತದ್ವಿರುದ್ಧವಾಗಿರುವ ಹೀದರ್ ನೈಟ್ ನಾಯಕತ್ವದ ಇಂಗ್ಲೆಂಡ್‌, ಸತತ ವಿಕೆಟ್‌ ಕಳೆದುಕೊಳ್ಳುವ ಹಂತದಲ್ಲಿಯೂ ವೇಗದ ಆಟ ಬಿಟ್ಟುಕೊಟ್ಟಿರಲಿಲ್ಲ.

ಮೊದಲ ಪಂದ್ಯದಲ್ಲಿ ಜಯಿಸಿ ಎರಡನೇಯದರಲ್ಲಿ ನಿರಾಸೆ ಅನುಭವಿಸಿರುವ ಆ ತಂಡವು ಅಂತಿಮ ಹಣಾಹಣಿಯಲ್ಲಿ ತಿರುಗೇಟು ನೀಡುವ ಛಲದಲ್ಲಿದೆ. ಹೀಗಾಗಿ ಪಂದ್ಯ ಕುತೂಹಲ ಕೆರಳಿಸಿದೆ.

ತಂಡಗಳು: ಭಾರತ: ಹರ್ಮನ್‌ಪ್ರೀತ್ ಕೌರ್‌ (ನಾಯಕಿ), ಸ್ಮೃತಿ ಮಂದಾನ, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್‌, ಶಫಾಲಿ ವರ್ಮಾ, ರಿಚಾ ಘೋಷ್‌, ಹರ್ಲಿನ್ ಡಿಯೊಲ್‌, ಸ್ನೇಹ್ ರಾಣಾ, ತಾನಿಯಾ ಭಾಟಿಯಾ, ಇಂದ್ರಾಣಿ ರಾಯ್‌, ಶಿಖಾ ಪಾಂಡೆ, ಪೂಜಾ ವಸ್ತ್ರಕರ್‌, ಅರುಂಧತಿ ರೆಡ್ಡಿ, ಪೂನಂ ಯಾದವ್‌, ಏಕ್ತಾ ಬಿಷ್ಟ್‌, ರಾಧಾ ಯಾದವ್‌, ಸಿಮ್ರಾನ್ ದಿಲ್ ಬಹದ್ದೂರ್‌.

ಇಂಗ್ಲೆಂಡ್‌: ಹೀದರ್ ನೈಟ್‌ (ನಾಯಕಿ), ಟ್ಯಾಮಿ ಬೇಮೌಂಟ್‌, ಕ್ಯಾಥರೀನ್ ಬ್ರಂಟ್‌, ಫ್ರೆಯಾ ಡೇವಿಸ್‌, ಸೋಫಿ ಎಕ್ಲೆಸ್ಟೋನ್‌, ಸೋಫಿಯಾ ಡಂಕ್ಲಿ, ತಾಷ್‌ ಫ್ಯಾರಂಟ್‌, ಸಾರಾ ಗ್ಲೆನ್‌, ಆ್ಯಮಿ ಜೋನ್ಸ್, ನತಾಲಿ ಸಿವರ್‌, ಅನ್ಯಾ ಶ್ರಬ್‌ಸೋಲ್‌, ಮ್ಯಾಡಿ ವಿಲಿಯರ್ಸ್‌, ಫ್ರಾನ್ ವಿಲ್ಸನ್‌ ಮತ್ತು ಡ್ಯಾನಿ ವ್ಯಾಟ್‌.

ಪಂದ್ಯ ಆರಂಭ: ರಾತ್ರಿ 11.00 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.