ADVERTISEMENT

ಭಾರತ–ಆಸ್ಟ್ರೇಲಿಯಾ ‘ಬಾಕ್ಸಿಂಗ್‌ ಡೇ’ ಟೆಸ್ಟ್ ನಾಳೆಯಿಂದ

ಮೆಲ್ಬರ್ನ್‌ನಲ್ಲಿ ಬುಧವಾರದಿಂದ ಮೂರನೇ ಟೆಸ್ಟ್ ಪಂದ್ಯ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2018, 19:48 IST
Last Updated 24 ಡಿಸೆಂಬರ್ 2018, 19:48 IST
ಆಸ್ಟ್ರೇಲಿಯಾದ ವೇಗಿ ಮಿಷೆಲ್ ಸ್ಟಾರ್ಕ್‌ (ಎಡ) ಮತ್ತು ಕೋಚ್‌ ಜಸ್ಟಿನ್ ಲ್ಯಾಂಗರ್‌ ಸೋಮವಾರ ಅಭ್ಯಾಸದ ವೇಳೆ ಮಾತುಕತೆಯಲ್ಲಿ ತೊಡಗಿದ್ದರು. –ಎಎಫ್‌ಪಿ ಚಿತ್ರ
ಆಸ್ಟ್ರೇಲಿಯಾದ ವೇಗಿ ಮಿಷೆಲ್ ಸ್ಟಾರ್ಕ್‌ (ಎಡ) ಮತ್ತು ಕೋಚ್‌ ಜಸ್ಟಿನ್ ಲ್ಯಾಂಗರ್‌ ಸೋಮವಾರ ಅಭ್ಯಾಸದ ವೇಳೆ ಮಾತುಕತೆಯಲ್ಲಿ ತೊಡಗಿದ್ದರು. –ಎಎಫ್‌ಪಿ ಚಿತ್ರ   

ಮೆಲ್ಬರ್ನ್‌: ಮಾತಿನ ಚಕಮಕಿ, ಭಾವಾವೇಶದ ಸಂಭ್ರಮ, ಟೀಕೆ–ಮರು ಟೀಕೆಗಳ ಮೂಲಕ ಆಟಕ್ಕಿಂತ ಹೆಚ್ಚು ಸುದ್ದಿಯಾಗಿತ್ತು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಕ್ರಿಕೆಟ್ ಟೆಸ್ಟ್‌ ಪಂದ್ಯ. ಈಗ ಎರಡೂ ತಂಡಗಳು ಮತ್ತೊಂದು ‘ಬಾಕ್ಸಿಂಗ್‌’ಗೆ ಸಜ್ಜಾಗಿವೆ.

26ರಂದು ಆರಂಭವಾಗಲಿರುವ ಸಾಂಪ್ರದಾಯಿಕ ‘ಬಾಕ್ಸಿಂಗ್‌ ಡೇ’ ಟೆಸ್ಟ್ ಪಂದ್ಯದಲ್ಲಿ ಗೆದ್ದು ಮುನ್ನಡೆ ಸಾಧಿಸುವ ಗುರಿಯೊಂದಿಗೆ ಉಭಯ ತಂಡಗಳು ಕಣಕ್ಕೆ ಇಳಿಯಲಿವೆ. ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಎರಡೂ ತಂಡಗಳು ಒಂದೊಂದು ಜಯ ಗಳಿಸಿವೆ. ಆದ್ದರಿಂದ ಮೂರನೇ ಪಂದ್ಯ ಕುತೂಹಲ ಕೆರಳಿಸಿದ್ದು ಕ್ರಿಕೆಟ್ ಜಗತ್ತು ಮೆಲ್ಬರ್ನ್‌ ಕ್ರಿಕೆಟ್ ಅಂಗಳದತ್ತ ದೃಷ್ಟಿ ನೆಟ್ಟಿದೆ.

ಅಡಿಲೇಡ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ 31 ರನ್‌ಗಳಿಂದ ಗೆದ್ದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿಯೊಂದರ ಮೊದಲ ಪಂದ್ಯವನ್ನು ಗೆದ್ದ ಸಾಧನೆ ಮಾಡಿ ಸಂಭ್ರಮಿಸಿತ್ತು. ಆದರೆ ಪರ್ತ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ತಿರುಗೇಟು ನೀಡಿದ ಆಸ್ಟ್ರೇಲಿಯಾ 146 ರನ್‌ಗಳಿಂದ ಜಯಿಸಿತ್ತು. ಈ ಪಂದ್ಯದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಆತಿಥೇಯ ತಂಡದ ನಾಯಕ ಟಿಮ್ ಪೇನ್‌ ನಡುವಿನ ಮಾತಿನ ಚಕಮಕಿ ಭಾರಿ ಸುದ್ದಿ ಹಾಗೂ ಸದ್ದು ಮಾಡಿತ್ತು.

ADVERTISEMENT

ಹಳೆಯದನ್ನು ಮರೆತು ಮೂರನೇ ಪಂದ್ಯದಲ್ಲಿ ಜಯ ಗಳಿಸುವತ್ತ ಈ ಇಬ್ಬರು ಈಗ ಚಿತ್ತ ನೆಟ್ಟಿದ್ದಾರೆ. ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೇನ್‌ ಭಾರತದ ನಾಯಕನನ್ನು ಮುಕ್ತ ಕಂಠದಿಂದ ಹೊಗಳಿದ್ದಾರೆ. ‘ಕೊಹ್ಲಿ ಅವರಿಗೆ ಸೋಲುವುದು ಇಷ್ಟವಿಲ್ಲ. ಆದ್ದರಿಂದ ಕಳೆದ ಪಂದ್ಯದ ನಂತರ ಕೈಕುಲುಕುವ ಸಂದರ್ಭದಲ್ಲಿ ನಿರಾಸೆಗೆ ಒಳಗಾಗಿದ್ದರು’ ಎಂದು ಪೇನ್ ಹೇಳಿದ್ದಾರೆ.

‘ಕೆಲವು ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಸಂದರ್ಭದಲ್ಲಿ ನಾನು ಕೊಹ್ಲಿ ಆಟವನ್ನು ಗಮನವಿಟ್ಟು ವೀಕ್ಷಿಸುತ್ತಿದ್ದೆ. ಅವರೊಬ್ಬ ಉತ್ತಮ ಕ್ರಿಕೆಟಿಗ. ಹೀಗಾಗಿ ದ್ವೇಷ ಮರೆತು ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಉತ್ತಮ ಆಟದ ಕಡೆಗೆ ಗಮನ ಹರಿಸಲಾಗುವುದು’ ಎಂದು ಅವರು ಹೇಳಿದರು.

ಆಸ್ಟ್ರೇಲಿಯಾ ಪಾರಮ್ಯ: ಮೆಲ್ಬರ್ನ್ ಕ್ರಿಕೆಟ್ ಅಂಗಣದಲ್ಲಿ ಆತಿಥೇಯರು ಈ ವರೆಗೆ ಉತ್ತಮ ಸಾಧನೆ ಮಾಡಿದ್ದಾರೆ. ಆಡಿದ ಎಲ್ಲ ತಂಡಗಳ ಮೇಲೆಯೂ ಆಧಿಪತ್ಯ ಸ್ಥಾಪಿಸಿದೆ. ಆದ್ದರಿಂದ ಬಾಕ್ಸಿಂಗ್ ಡೇ ಪಂದ್ಯದಲ್ಲೂ ಗೆಲ್ಲುವ ಭರವಸೆಯಲ್ಲಿದೆ.

ಮೊದಲ ಪಂದ್ಯದಲ್ಲಿ ಪ್ರಬಲ ದಾಳಿ ಸಂಘಟಿಸಿದ್ದ ಭಾರತದ ಬೌಲರ್‌ಗಳಿಗೆ ಪರ್ತ್‌ನಲ್ಲಿ ಪೇನ್ ಬಳಗವನ್ನು ಕಾಡಲು ಆಗಲಿಲ್ಲ. ಆರಂಭಿಕ ಜೋಡಿಯ ನಿರಂತರ ವೈಫಲ್ಯ ಭಾರತ ತಂಡವನ್ನು ಕಾಡುತ್ತಿದೆ. ತಂಡಕ್ಕೆ ಕರ್ನಾಟಕದ ಮಯಂಕ್ ಅಗರವಾಲ್ ಅವರನ್ನು ಕರೆಸಿಕೊಳ್ಳಲಾಗಿದ್ದು ಅವರಿಗೆ ಅವಕಾಶ ಸಿಗುವುದು ಖಚಿತ ಎನ್ನಲಾಗಿದೆ.

ಇಲ್ಲಿನ ಪಿಚ್‌ ಸ್ಪರ್ಧಾತ್ಮಕವಾಗಿದ್ದು ಬ್ಯಾಟ್ಸ್‌ಮನ್‌ ಮತ್ತು ಬೌಲರ್‌ಗಳಿಗೆ ಅನುಕೂಲಕರವಾಗಿರಲಿದೆ ಎಂದು ಆಸ್ಟ್ರೇಲಿಯಾದ ಕೋಚ್ ಜಸ್ಟಿನ್ ಲ್ಯಾಂಗರ್ ಅಭಿಪ್ರಾಯಪಟ್ಟಿದ್ದಾರೆ. ಇದೇ ಅಭಿಪ್ರಾಯವನ್ನು ಕ್ಯೂರೇಟರ್ ಮ್ಯಾಥ್ಯೂ ವ್ಯಕ್ತಪಡಿಸಿದ್ದಾರೆ. ಆದರೆ ಈ ಬಾರಿಯ ನಡೆದ ಮೂರು ಪ್ರಥಮ ದರ್ಜೆ ಪಂದ್ಯಗಳ ಪೈಕಿ ಎರಡು ಡ್ರಾಗೊಂಡಿದೆ ಎಂಬುದು ಗಮನಾರ್ಹ ಅಂಶವಾಗಿದೆ.

ಪಂದ್ಯ ಆರಂಭ: ಬುಧವಾರ ಬೆಳಿಗ್ಗೆ 5.00 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ಬಾಕ್ಸಿಂಗ್ ಡೇ ಅಂದರೇನು?

ಬಾಕ್ಸಿಂಗ್ ಡೇ ಪರಿಕಲ್ಪನೆ ಆರಂಭಗೊಂಡದ್ದು ಇಂಗ್ಲೆಂಡ್‌ನಲ್ಲಿ. ಕ್ರಿಸ್‌ಮಸ್‌ನ ಮರುದಿನವನ್ನು ಬಾಕ್ಸಿಂಗ್ ಡೇ ಎಂದು ಕರೆಯುತ್ತಾರೆ. ಐರ್ಲೆಂಡ್‌ ಮತ್ತು ಸ್ಪೇನ್‌ನಲ್ಲಿ ಈ ದಿನವನ್ನು ಸೇಂಟ್ ಸ್ಟೀಫನ್ಸ್‌ ದಿನ ಎಂದೂ ಕರೆಯುತ್ತಾರೆ. ರೊಮೇನಿಯಾ, ಹಂಗರಿ, ಜರ್ಮನಿ, ಪೋಲೆಂಡ್‌ ಮತ್ತು ನೆದರ್ಲೆಂಡ್ಸ್‌ನಲ್ಲಿ ಈ ದಿನವನ್ನು ಎರಡನೇ ಕ್ರಿಸ್‌ಮಸ್ ದಿನ ಎನ್ನಲಾಗುತ್ತದೆ.

ಯುರೋಪ್‌ ರಾಷ್ಟ್ರಗಳಲ್ಲಿ ವರ್ಷದ ಕೊನೆಯ ವಾರ ಚರ್ಚ್‌ಗಳಲ್ಲಿ ಪೊಟ್ಟಣಗಳನ್ನು (ಬಾಕ್ಸ್‌) ಇರಿಸಿ ಹಣ ಮತ್ತು ವಸ್ತು ರೂಪದಲ್ಲಿ ಕಾಣಿಕೆಗಳನ್ನು ಸ್ವೀಕರಿಸಲಾಗುತ್ತದೆ. ಈ ‘ಬಾಕ್ಸ್‌’ಗಳಿಂದಲೇ ಬಾಕ್ಸಿಂಗ್ ಡೇ ಎಂಬ ಹೆಸರು ಬಂದಿರಬೇಕು ಎನ್ನಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ಪ್ರತಿ ವರ್ಷ ಈ ದಿನ ಆರಂಭವಾಗುವಂತೆ ಟೆಸ್ಟ್ ಪಂದ್ಯವನ್ನು ನಿಗದಿ ಮಾಡಲಾಗುತ್ತದೆ.

ಇನ್ನೂರು ಗಳಿಸಬಲ್ಲೆ

ಭಾರತದ ಉಪನಾಯಕ ಅಜಿಂಕ್ಯ ರಹಾನೆ ‘ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶತಕ ಗಳಿಸುವ ಸಾಮರ್ಥ್ಯ ನನಗಿದೆ. ಎಲ್ಲವೂ ಕೂಡಿ ಬಂದರೆ 200 ರನ್‌ ಗಳಿಸಬಲ್ಲೆ’ ಎಂದಿದ್ದಾರೆ.

ಮೊದಲ ಎರಡು ಟೆಸ್ಟ್‌ಗಳಲ್ಲಿ ಒಟ್ಟು 164 ರನ್‌ ಗಳಿಸಿರುವ ರಹಾನೆ ಎರಡು ಅರ್ಧಶತಕ ಗಳಿಸಿದ್ದಾರೆ. ಕಳೆದ ವರ್ಷ ಶ್ರೀಲಂಕಾ ಎದುರು ಗಳಿಸಿದ ಶತ ಕದ ನಂತರ ಅವರು ಈ ವರೆಗೆ ಮೂರಂಕಿ ಮೊತ್ತ ದಾಟಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.