ADVERTISEMENT

ಭಾರತಕ್ಕೆ ಕಠಿಣ ಸವಾಲೊಡ್ಡುವ ವಿಶ್ವಾಸ: ಲೀಚ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 18:57 IST
Last Updated 1 ಆಗಸ್ಟ್ 2021, 18:57 IST
ಜ್ಯಾಕ್ ಲೀಚ್
ಜ್ಯಾಕ್ ಲೀಚ್   

ಲಂಡನ್: ಭಾರತದ ವಿರುದ್ಧ ನಡೆಯಲಿರುವ ಐದು ಟೆಸ್ಟ್‌ಗಳ ಸರಣಿಯಲ್ಲಿ ತಮ್ಮ ತಂಡವು ಅಮೋಘ ಆಟವಾಡಲಿದೆ ಎಂದು ಇಂಗ್ಲೆಂಡ್ ತಂಡದ ಸ್ಪಿನ್ನರ್ ಜ್ಯಾಕ್ ಲೀಚ್ ಹೇಳಿದ್ದಾರೆ.

ಹೋದ ಫೆಬ್ರುವರಿ–ಮಾರ್ಚ್‌ನಲ್ಲಿ ಇಂಗ್ಲೆಂಡ್ ತಂಡವು ಭಾರತದಲ್ಲಿ ಪ್ರವಾಸ ಮಾಡಿದಾಗ ಲೀಚ್ ಒಟ್ಟು 18 ವಿಕೆಟ್‌ಗಳನ್ನು ಗಳಿಸಿದ್ದರು.

‘ಭಾರತದಲ್ಲಿ ಮಾಡಿರುವ ಸಾಧನೆಯು ನನ್ನಲ್ಲಿ ಅಪಾರ ಆತ್ಮವಿಶ್ವಾಸ ಮೂಡಿಸಿದೆ. ಭಾರತದ ಆಟಗಾರರ ಎದುರು ಚೆನ್ನಾಗಿ ಬೌಲಿಂಗ್ ಮಾಡಬಲ್ಲೆ’ಎಂದು ಲೀಚ್ ಸುದ್ದಿಗಾರರ ಮುಂದೆ ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಪಿಚ್ ಸ್ವಲ್ಪ ನೆರವು ಕೊಡುವಂತಿದ್ದರೆ, ನಮ್ಮ ಕೌಶಲಕ್ಕೆ ಸ್ವಲ್ಪ ಮಟ್ಟಿಗಾದರೂ ಹೊಂದಿಕೊಳ್ಳುವಂತಿದ್ದರೆ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವುದು ಸುಲಭವಾಗಲಿದೆ’ ಎಂದರು.

‘ಭಾರತದಂತಹ ಬಲಿಷ್ಠ ಕ್ರಿಕೆಟ್ ತಂಡದ ಎದುರು ಐದು ಟೆಸ್ಟ್‌ ಪಂದ್ಯಗಳನ್ನು ಆಡುವುದು ದೊಡ್ಡ ಸವಾಲಿನ ಕೆಲಸ. ನಮ್ಮ ಸಾಮರ್ಥ್ಯದ ಅರಿವು ಈ ಸರಣಿಯಲ್ಲಿ ನಮಗೇ ಆಗಲಿದೆ’ ಎಂದರು.

‘ತಂಡದಲ್ಲಿ ನಿರಂತರ ಸ್ಥಾನ ಕಾಯ್ದುಕೊಳ್ಳಲು ಸ್ಥಿರ ಪ್ರದರ್ಶನ ತೋರುವತ್ತ ನನ್ನ ಚಿತ್ತವಿದೆ. ಅದಕ್ಕಾಗಿ ಬಹಳಷ್ಟು ಪರಿಶ್ರಮದೊಂದಿಗೆ ಹೊಸ ತಂತ್ರಗಳನ್ನು ಕಲಿತು ಅಭ್ಯಾಸ ಮಾಡುತ್ತಿದ್ದೇನೆ‘ ಎಂದರು.

ಮಾನಸಿಕ ಒತ್ತಡ ನಿರ್ವಹಣೆಯ ಕುರಿತು ಮಾತನಾಡಿದ ಅವರು, ‘ ಚಿಕ್ಕ ಚಿಕ್ಕ ಕೆಲಸಗಳನ್ನು ಗಮನವಿಟ್ಟು ಸಂಪೂರ್ಣ ಏಕಾಗ್ರತೆಯೊಂದಿಗೆ ಮಾಡುತ್ತೇನೆ. ಸದ್ಯ ಭಾರತದ ಸರಣಿಯ ಮೇಲೆ ಹೆಚ್ಚು ಗಮನ ಹರಿಸಿದ್ದೇನೆ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.