ADVERTISEMENT

ಭಾರತ–ಇಂಗ್ಲೆಂಡ್ ಅಭ್ಯಾಸ ಪಂದ್ಯ: ರಾಹುಲ್–ಇಶಾನ್ ಪೈಪೋಟಿ

ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್:

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 18:56 IST
Last Updated 17 ಅಕ್ಟೋಬರ್ 2021, 18:56 IST
ಭಾರತ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿ (ಮೆಂಟರ್) ನೇಮಕವಾಗಿರುವ ಮಹೇಂದ್ರಸಿಂಗ್ ಧೋನಿ ಭಾನುವಾರ ದುಬೈನಲ್ಲಿ ತಂಡವನ್ನು ಸೇರಿಕೊಂಡರು. ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರೊಂದಿಗೆ ಸಮಾಲೋಚನೆ ನಡೆಸಿದರು –ಬಿಸಿಸಿಐ ಚಿತ್ರ
ಭಾರತ ಕ್ರಿಕೆಟ್ ತಂಡದ ಮಾರ್ಗದರ್ಶಕರಾಗಿ (ಮೆಂಟರ್) ನೇಮಕವಾಗಿರುವ ಮಹೇಂದ್ರಸಿಂಗ್ ಧೋನಿ ಭಾನುವಾರ ದುಬೈನಲ್ಲಿ ತಂಡವನ್ನು ಸೇರಿಕೊಂಡರು. ಮುಖ್ಯ ಕೋಚ್ ರವಿಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರೊಂದಿಗೆ ಸಮಾಲೋಚನೆ ನಡೆಸಿದರು –ಬಿಸಿಸಿಐ ಚಿತ್ರ   

ದುಬೈ (ಪಿಟಿಐ): ಸೋಮವಾರ ಇಂಗ್ಲೆಂಡ್ ವಿರುದ್ಧದ ಟ್ವೆಂಟಿ–20 ವಿಶ್ವ ಕಪ್ ಟೂರ್ನಿಯ ಅಭ್ಯಾಸ ಪಂದ್ಯ ದಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡದಲ್ಲಿ ರೋಹಿತ್ ಶರ್ಮಾ ಜೊತೆ ಕೆ.ಎಲ್. ರಾಹುಲ್ ಅಥವಾ ಇಶಾನ್ ಕಿಶನ್ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಇದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡಿರುವ ಎಲ್ಲ ಆಟಗಾರರು ತಂಡ ಸೇರಿಕೊಂಡಿದ್ದಾರೆ. ಆದ್ದರಿಂದ ಟೂರ್ನಿಗಾಗಿ ಬಹಳಷ್ಟು ಅಭ್ಯಾಸ ಲಭಿಸಿದಂತಾಗಿದೆ. ಆದರೆ, ಕಣಕ್ಕಿಳಿಯುವ ಹನ್ನೊಂದರ ಬಳಗದ ಆಯ್ಕೆಯ ಬಗ್ಗೆ ನಾಯಕ ವಿರಾಟ್ ಹೆಚ್ಚು ಯೋಚನೆ ಮಾಡಬೇಕಿದೆ.

ಅಕ್ಟೋಬರ್‌ 24ರಂದು ಪಾಕಿ ಸ್ತಾನದ ಎದುರು ತನ್ನ ಅಭಿಯಾನ ಆರಂಭಿಸಲಿರುವ ಭಾರತ ತಂಡವು ಹನ್ನೊಂದರ ಬಳಗವನ್ನು ನಿರ್ಧರಿಸಬೇಕಿದೆ. ಬುಧವಾರ ಆಸ್ಟ್ರೇಲಿಯಾ ವಿರುದ್ಧವೂ ಒಂದು ಅಭ್ಯಾಸ ಪಂದ್ಯವನ್ನು ಭಾರತ ಆಡಲಿದೆ. ಎರಡು ಪಂದ್ಯಗಳಲ್ಲಿ ಉತ್ತಮವಾಗಿ ಆಡುವವರಿಗೆ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚು.

ADVERTISEMENT

ಉಪನಾಯಕ ರೋಹಿತ್ ಶರ್ಮಾ ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಆದರೆ ಅವರೊಂದಿಗೆ ರಾಹುಲ್ ಅಥವಾ ಇಶಾನ್ ಕಿಶನ್ ಅವರಲ್ಲಿ ಒಬ್ಬರು ಸ್ಥಾನ ಪಡೆಯಬಹುದು. ಐಪಿಎಲ್‌ನಲ್ಲಿ ರಾಹುಲ್ ಉತ್ತಮವಾಗಿ ಆಡಿದ್ದರು. 626 ರನ್‌ಗಳನ್ನು ಪೇರಿಸಿ ದ್ದರು. ಅಲ್ಲದೇ ಇಶಾನ್‌ಗಿಂತ ಹೆಚ್ಚು ಅನುಭವಿಯೂ ಆಗಿರುವ ಕನ್ನಡಿಗನಿಗೆ ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ.

ಕಳೆದ ಕೆಲವು ಪಂದ್ಯಗಳಲ್ಲಿ ಮತ್ತು ಐಪಿಎಲ್‌ನಲ್ಲಿ ಲಯ ಕಳೆದುಕೊಂಡಿದ್ದ ಹಾರ್ದಿಕ್ ಪಾಂಡ್ಯ ಅವರಿಗೆ ಈ ಪಂದ್ಯ ಪರೀಕ್ಷಾ ಕಣವಾಗಬಹುದು. ರವೀಂದ್ರ ಜಡೇಜ ಮತ್ತು ವರುಣ್ ಚಕ್ರವರ್ತಿ ಕೂಡ ಸ್ಥಾನಕ್ಕಾಗಿ ಪೈಪೋಟಿ ನಡೆಸಬೇಕಾಗಬಹುದು.

ಮೂರನೇ ಸ್ಪಿನ್ನರ್‌ ಆಗಿ ಆರ್. ಅಶ್ವಿನ್ ಮತ್ತು ರಾಹುಲ್ ಚಾಹರ್ ಅವರಲ್ಲಿ ಒಬ್ಬರಿಗೆ ಅವಕಾಶ ಲಭಿಸಬಹುದು. ಜಸ್‌ಪ್ರೀತ್ ಬೂಮ್ರಾ ಜೊತೆಗೆ ಭುವನೇಶ್ವರ್ ಆಡುವ ಸಾಧ್ಯತೆ ಹೆಚ್ಚಿದೆ. ಶಾರ್ದೂಲ್ ಠಾಕೂರ್ ಇರುವು ದರಿಂದ ಬೌಲಿಂಗ್ ಬಲ ಹೆಚ್ಚಿದೆ.

ಐಪಿಎಲ್‌ನಲ್ಲಿ ರನ್ನರ್ಸ್ ಆಪ್‌ ಆದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಏಯಾನ್ ಮಾರ್ಗನ್ ಇಂಗ್ಲೆಂಡ್ ಬಳಗವನ್ನು ಮುನ್ನಡೆಸಲಿದ್ದಾರೆ. ಬೆನ್ ಸ್ಟೋಕ್ಸ್‌ ಅಲಭ್ಯತೆಯು ತಂಡವನ್ನು ಕಾಡಬಹುದು. ಡೇವಿಡ್ ಮಲಾನ್, ಜೇಸನ್ ರಾಯ್ ತಮ್ಮ ಲಯಕ್ಕೆ ಮರಳಿದರೆ ಭಾರತದ ಬೌಲಿಂಗ್‌ ಪಡೆಗೆ ಕಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.