ADVERTISEMENT

ಮಹಿಳಾ ಏಕದಿನ ವಿಶ್ವಕಪ್: ಭಾರತ–ಪಾಕ್ ವನಿತೆಯರ ಹಣಾಹಣಿ ನಾಳೆ

ಲಯಕ್ಕೆ ಮರಳುವ ಛಲದಲ್ಲಿ ಸ್ಮೃತಿ, ಹರ್ಮನ್: ದೀಪ್ತಿ, ಅಮನ್ಜೋತ್‌ ಮೇಲೆ ಭರವಸೆ

ಪಿಟಿಐ
Published 4 ಅಕ್ಟೋಬರ್ 2025, 14:47 IST
Last Updated 4 ಅಕ್ಟೋಬರ್ 2025, 14:47 IST
ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ  
ಪಾಕಿಸ್ತಾನ ತಂಡದ ನಾಯಕಿ ಫಾತಿಮಾ ಸನಾ     

ಕೊಲಂಬೊ: ಬದ್ಧ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ಭಾನುವಾರ ಮಹಿಳಾ ಏಕದಿನ ವಿಶ್ವಕಪ್  ಟೂರ್ನಿಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. 

ಕಳೆದ ಮೂರು ಭಾನುವಾರಗಳಲ್ಲಿಯೂ ಪುರುಷರ ತಂಡಗಳು ಏಷ್ಯಾ ಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿದ್ದವು. ಇದೀಗ ಮಹಿಳೆಯರ ಸರದಿ. ಒಟ್ಟಾರೆ ಸತತ ನಾಲ್ಕನೇ ಆದಿತ್ಯವಾರವೂ ಉಭಯ ದೇಶಗಳ ಕ್ರಿಕೆಟ್ ಪೈಪೋಟಿ ನಡೆಯಲಿದೆ. ಮಹಿಳಾ ತಂಡಗಳು ತಟಸ್ಥ ಸ್ಥಳದಲ್ಲಿ ಮುಖಾಮುಖಿಯಾಗುತ್ತಿವೆ.

ಅಂತರರಾಷ್ಟ್ರೀಯ ವೇದಿಕೆಯಲ್ಲಿ ಉಭಯ ತಂಡಗಳು ಒಟ್ಟು 27 ‍ಪಂದ್ಯಗಳಲ್ಲಿ ಹಣಾಹಣಿ ನಡೆಸಿವೆ. ಅದರಲ್ಲಿ ಭಾರತ 24–3ರಿಂದ ಮುನ್ನಡೆಯಲ್ಲಿದೆ. ಟಿ20 ಮಾದರಿಯಲ್ಲಿ ಪಾಕ್ 3 ಪಂದ್ಯಗಳನ್ನು ಗೆದ್ದಿದೆ. ಆದರೆ ಏಕದಿನ ಪಂದ್ಯಗಳಲ್ಲಿ ಭಾರತದ್ದೇ ಪಾರಮ್ಯ. ಪಾಕ್ ಇದುವರೆಗೆ ಗೆಲುವಿನ ಖಾತೆ ತೆರೆದಿಲ್ಲ. ಮುಖಾಮುಖಿಯಾಗಿರುವ ಎಲ್ಲ ಹನ್ನೊಂದು ಪಂದ್ಯಗಳಲ್ಲಿಯೂ ಭಾರತ ಜಯಿಸಿದೆ. 

ADVERTISEMENT

ಭಾರತ ತಂಡವು ಸದ್ಯ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆದ್ದರಿಂದ ಹರ್ಮನ್‌ಪ್ರೀತ್ ಕೌರ್ ಬಳಗವು ಗೆಲುವಿನ ಜೊತೆಗೆ ನೆಟ್‌ ರನ್‌ ರೇಟ್ ಹೆಚ್ಚಿಸಿಕೊಳ್ಳುವತ್ತಲೂ ಚಿತ್ತ ನೆಟ್ಟಿದೆ. 

ಲಂಕಾ ಎದುರಿನ ಪಂದ್ಯದಲ್ಲಿ ಭಾರತದ ಸ್ಮೃತಿ ಮಂದಾನ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿರಲಿಲ್ಲ. ಅದರಿಂದಾಗಿ ಉತ್ತಮ ಆರಂಭ ಒದಗಿರಲಿಲ್ಲ. ಅಲ್ಲದೇ 124 ರನ್‌ಗಳಿಗೆ 6 ವಿಕೆಟ್‌ ಕಳೆದುಕೊಂಡಿತ್ತು. 

ಆ ಹಂತದಲ್ಲಿ ದೀಪ್ತಿ ಶರ್ಮಾ ಮತ್ತು ಅಮನ್ಜೋತ್ ಕೌರ್ ಅವರ ಅರ್ಧಶತಕಗಳು ತಂಡಕ್ಕೆ ಜೀವ ತುಂಬಿದ್ದವು.  ಹರ್ಲಿನ್ ಡಿಯೊಲ್ ಹಾಗೂ ಸ್ನೇಹ ರಾಣಾ ಅವರ ಉಪಯುಕ್ತ ಕಾಣಿಕೆಗಳಿಂದಾಗಿ ತಂಡವು ಹೋರಾಟದ ಮೊತ್ತ ಗಳಿಸಿತ್ತು.  ದೀಪ್ತಿ ಮತ್ತು ಸ್ನೇಹ ಅವರು ಬೌಲಿಂಗ್‌ನಲ್ಲಿಯೂ ಮಿಂಚಿದ್ದರು. ಕ್ರಮವಾಗಿ ಮೂರು ಮತ್ತು ಎರಡು ವಿಕೆಟ್ ಗಳಿಸಿದ್ದರು. ಶ್ರೀಚರಣಿ ಕೂಡ ಉತ್ತಮ ಜೊತೆ ನೀಡಿದ್ದರು. 

ಪಾಕ್ ತಂಡವು ಬಾಂಗ್ಲಾದೇಶಕ್ಕೆ ಸುಲಭದ ತುತ್ತಾಗಿತ್ತು. ಕೇವಲ 129 ರನ್‌ಗಳ ಗುರಿಯೊಡ್ಡಿ ಸೋತಿತ್ತು. ಮೇಲ್ನೋಟಕ್ಕೆ ಭಾರತ ತಂಡವೇ ಪಾಕ್ ಬಳಗಕ್ಕಿಂತ ಹೆಚ್ಚು ಬಲಶಾಲಿಯಾಗಿದೆ. ಆದ್ದರಿಂದ ಗೆಲುವಿನ ನೆಚ್ಚಿನ ತಂಡವೂ ಆಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 3

ನೇರಪ್ರಸಾರ:

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.