ADVERTISEMENT

ಭಾರತ–ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್: ವಿಶ್ವಕಪ್‌ಗೆ ‘ಪೂರ್ವಾಭ್ಯಾಸ’ದ ವೇದಿಕೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 22:25 IST
Last Updated 27 ಸೆಪ್ಟೆಂಬರ್ 2022, 22:25 IST
ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ –ಪಿಟಿಐ ಚಿತ್ರ
ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವುಮಾ –ಪಿಟಿಐ ಚಿತ್ರ   

ತಿರುವನಂತಪುರ: ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಜಯ ಸಾಧಿಸಿದರೂ ಭಾರತ ತಂಡಕ್ಕೆ ಇನ್ನೂ ಒಂದು ಕೊರಗು ಉಳಿದುಕೊಂಡಿದೆ.

ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ರನ್‌ಗಳನ್ನು ನಿಯಂತ್ರಿಸುವಲ್ಲಿ ಬೌಲರ್‌ಗಳು ಇನ್ನೂ ಸಿದ್ಧರಾಗದಿರುವುದು ನಾಯಕ ರೋಹಿತ್ ಶರ್ಮಾ ಅವರ ಚಿಂತೆ ಹೆಚ್ಚಿಸಿದೆ. ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಟೂರ್ನಿಗೆ ಮುನ್ನ ಈ ದೌರ್ಬಲ್ಯಕ್ಕೆ ಪರಿಹಾರ ಕಂಡುಕೊಳ್ಳಲು ಉಳಿದಿರುವುದು ಒಂದೇ ದಾರಿ. ಅದು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟಿ20 ಸರಣಿ.

ಬುಧವಾರ ಮೊದಲ ಪಂದ್ಯ ನಡೆಯಲಿದೆ. ಮಧ್ಯಮವೇಗಿ ಭುವನೇಶ್ವರ್ ಕುಮಾರ್ ಹಾಗೂ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಹಾರ್ದಿಕ್ ಯಶಸ್ವಿಯಾಗಿದ್ದರು. ಆದರೆ ಭುವನೇಶ್ವರ್ ಬೌಲಿಂಗ್‌ ಲಯ ಕಂಡುಕೊಳ್ಳುವಲ್ಲಿ ಸಫಲರಾಗಿರಲಿಲ್ಲ. ಅದರಲ್ಲೂ ಇನಿಂಗ್ಸ್‌ನ ಕೊನೆಯ ಹಂತದ ಓವರ್‌ಗಳಲ್ಲಿ ಹೆಚ್ಚು ದಂಡನೆಗೆ ಒಳಗಾಗಿದ್ದರು.

ADVERTISEMENT

ದಕ್ಷಿಣ ಆಫ್ರಿಕಾ ಎದುರಿನ ಸರಣಿಯು ಬೌಲರ್‌ಗಳಾದ ಆರ್ಷದೀಪ್ ಸಿಂಗ್, ಅನುಭವಿ ಬೂಮ್ರಾ, ದೀಪಕ್ ಚಾಹರ್ ಅವರಿಗೆ ಪರೀಕ್ಷೆಯ ಕಣವಾಗಲಿದೆ. ಬ್ಯಾಟಿಂಗ್‌ನಲ್ಲಿ ಆರಂಭಿಕ ಕೆ.ಎಲ್. ರಾಹುಲ್ ಲಯ ಕಂಡುಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ. ವಿರಾಟ್ ಫಾರ್ಮ್‌ಗೆ ಮರಳಿ ರುವುದು, ಸೂರ್ಯಕುಮಾರ್ ಅಬ್ಬರಿ ಸುತ್ತಿರುವುದು, ರೋಹಿತ್ ಕೂಡ ಸಿಕ್ಸರ್‌ಗಳನ್ನು ಸಿಡಿಸುತ್ತಿರುವುದು ಸಮಾಧಾನದ ವಿಷಯ. ಆದರೆ ಈ ಸರಣಿಯಲ್ಲಿ ಹಾರ್ದಿಕ್ ಅನುಪ ಸ್ಥಿತಿಯಲ್ಲಿ ರಿಷಭ್ ಅಥವಾ ದಿನೇಶ್ ಅವರು ಮಧ್ಯಮಕ್ರಮಾಂಕಕ್ಕೆ ಬಲ ತುಂಬಬೇಕು.

ತೆಂಬಾ ಬವುಮಾ ನಾಯಕತ್ವದ ಪ್ರವಾಸಿ ಬಳಗದ ಬೌಲರ್‌ಗಳಾದ ಎನ್ರಿಚ್, ಲುಂಗಿ ಹಾಗೂ ರಬಾಡ ಅವರ ಚಾಣಾಕ್ಷ ದಾಳಿ ಎದುರಿಸುವುದು ಆತಿಥೇಯರಿಗೆ ಪ್ರಮುಖ ಸವಾಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.