ಅಡಿಲೇಡ್: ಆಸ್ಟ್ರೇಲಿಯಾದ ಸಾಂಪ್ರದಾಯಿಕ ಟೆಸ್ಟ್ ತಾಣಗಳಲ್ಲಿ ಅತಿ ರಮ್ಯವೆನಿಸಿರುವ ಅಡಿಲೇಡ್ ಓವಲ್ ಭಾರತದ ಪಾಲಿಗೆ ಮಿಶ್ರಭಾವನೆಗಳ ಕಣಜ. 2001 ರಿಂದೀಚೆ ಭಾರತ ಇಲ್ಲಿ ಎರಡು ಟೆಸ್ಟ್‌ಗಳನ್ನು ಗೆದ್ದು ಪ್ರವಾಸಿ ತಂಡಗಳ ಪೈಕಿ ಅತಿ ಹೆಚ್ಚು ಯಶಸ್ಸು ಪಡೆದಿದೆ. ಇದೇ ಅಧಿಯಲ್ಲಿ ಆಸ್ಟ್ರೇಲಿಯಾ ಇಲ್ಲಿ ಸೋತಿರುವುದು ಬರೇ ಮೂರು ಪಂದ್ಯಗಳನ್ನು.
ಇದೇ ಕ್ರೀಡಾಂಗಣದಲ್ಲಿ ರಾಹುಲ್ ದ್ರಾವಿಡ್ 2003ರ ಸರಣಿಯಲ್ಲಿ ಅತಿ ಶ್ರೇಷ್ಠ ಇನಿಂಗ್ಸ್ (233) ಕಟ್ಟಿದ್ದರು. ಅದೇ ಪಂದ್ಯದಲ್ಲಿ ಅಜೇಯ 72 ರನ್‌ಗಳೊಂದಿಗೆ ಭಾರತ ಗುರಿಯನ್ನು ಬೆಂಬತ್ತುವಲ್ಲೂ ಅವರು ಪಾತ್ರ ಪ್ರಮುಖವಾಗಿತ್ತು. ವಿರಾಟ್ ಕೊಹ್ಲಿ ಇಲ್ಲಿ ಗಳಿಸಿದ್ದ ಶತಕಗಳು (115 ಮತ್ತು 141) ಭಾರತವನ್ನು ಬಹುತೇಕ ಗೆಲುವಿನ ಹಳಿಗೆ ತಲುಪಿಸಿದ್ದವು. ಆದರೆ ಇದೇ ಕ್ರೀಡಾಂಗಣದ ಹಗಲು ರಾತ್ರಿ ಟೆಸ್ಟ್‌ನಲ್ಲಿ ಭಾರತ ಹಿಂದೆಂದೂ ಅನುಭವಿಸಿದ ಮುಖಭಂಗ ಕಾಣಬೇಕಾಯಿತು. ಟೆಸ್ಟ್ ಇತಿಹಾಸದಲ್ಲೇ ತನ್ನ ಅತಿ ಕಡಿಮೆ ಮೊತ್ತವಾದ 36 ದಾಖಲಾಗಿದ್ದು ಇಲ್ಲಿಯೇ. ಆ ಟೆಸ್ಟ್ ನಂತರ ಭಾರತ ಅಮೋಘವಾಗಿ ತಿರುಗಿಬಿದ್ದು ಸರಣಿ ಗೆದ್ದಿದ್ದು ಇತಿಹಾಸ.
ಭಾರತ ತಂಡ ಶುಕ್ರವಾರ ಇದೇ ಕ್ರೀಡಾಂಗಣದಲ್ಲಿ ಬಾರ್ಡರ್– ಗಾವಸ್ಕರ್ ಟ್ರೋಫಿ ಸರಣಿಯ ಎರಡನೇ (ಪಿಂಕ್‌ಬಾಲ್) ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಈಗ ತಂಡದ ಮುಂದಿರುವ ಸವಾಲು 2020ರ ಆ ಟೆಸ್ಟ್ ದುಃಸ್ವಪ್ನದಿಂದ ಸಂಪೂರ್ಣವಾಗಿ ಹೊರಬರುವುದು. ಮೊದಲ ದಿನ ಮಳೆಯಾಗುವ ನಿರೀಕ್ಷೆಯಿದೆ. ಆದರೆ ಹಗಲು–ರಾತ್ರಿ ಟೆಸ್ಟ್‌ಗಳ ದಾಖಲೆಗಳನ್ನು ಗಮನಿಸಿದರೆ, ಫಲಿತಾಂಶಕ್ಕೆ ನಾಲ್ಕು ದಿನಗಳ ಅವಧಿ ಧಾರಾಳ ಎನಿಸುತ್ತದೆ.
ಭಾರತ ಪಿಂಕ್‌ಬಾಲ್ ಟೆಸ್ಟ್‌ಗಳಲ್ಲಿ ಆಡಿದ ನಾಲ್ಕರಲ್ಲಿ ಮೂರು ಗೆದ್ದು ಉತ್ತಮ ಸಾಧನೆ ದಾಖಲಿಸಿದೆ. ಆದರೆ ಆಸ್ಟ್ರೇಲಿಯಾದ ದಾಖಲೆಯೂ ಅದಕ್ಕಿಂತ ಉತ್ತಮವಾಗಿದೆ. ಅದು 12 ಅಹರ್ನಿಶಿ ಟೆಸ್ಟ್ ಪಂದ್ಯಗಳಲ್ಲಿ 11 ಗೆದ್ದಿದೆ! ಆ ಏಕೈಕ ಸೋಲನ್ನು ಈ ವರ್ಷದ ಜನವರಿಯಲ್ಲಿ ವೆಸ್ಟ್ ಇಂಡೀಸ್ ಎದುರು ಅನುಭವಿಸಿತ್ತು. ಭಾರತಕ್ಕೆ ಸ್ವಲ್ಪ ಚಿಂತೆಯ ವಿಷಯವೆಂದರೆ ಅಡಿಲೇಡ್‌ನಲ್ಲಿ ಆಡಿರುವ ಪಿಂಕ್‌ಬಾಲ್ ಟೆಸ್ಟ್‌ಗಳಲ್ಲಿ ಆತಿಥೇಯರು ಎಲ್ಲವನ್ನೂ ಗೆದ್ದಿದ್ದಾರೆ.
ಆಸ್ಟ್ರೇಲಿಯಾಕ್ಕೆ ಈ ವಿಷಯದಲ್ಲಿ ಮಾನಸಿಕ ಮೇಲುಗೈ ಇದೆ ನಿಜ. ಆದರೆ ಭಾರತದ ದಾಖಲೆಯೂ ಕಳಪೆಯೇನಿಲ್ಲ. ಮೊದಲ (ಪರ್ತ್) ಟೆಸ್ಟ್ ಪಂದ್ಯದಲ್ಲಿ 295 ರನ್‌ಗಳ ಭಾರಿ ಗೆಲುವು ತಂಡಕ್ಕೆ ಬೇಕಾದ ಆತ್ಮವಿಶ್ವಾಸ ಒದಗಿಸಿದೆ.
ಆ ಪಂದ್ಯದಲ್ಲಿ ಎಂಟು ವಿಕೆಟ್ ಪಡೆದಿದ್ದ ಹಂಗಾಮಿ ನಾಯಕ ಜಸ್‌ಪ್ರೀತ್ ಬೂಮ್ರಾ, ಆಸ್ಟ್ರೇಲಿಯಾದ ಬ್ಯಾಟರ್‌ಗಳಲ್ಲಿ ಸಾಕಷ್ಟು ಅಳುಕು ಮೂಡಿಸಿದ್ದಾರೆ. ಪಾಡ್‌ಕಾಸ್ಟ್‌ಗಳಲ್ಲಿ ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಇದನ್ನು (ಬ್ಯಾಟರ್‌ಗಳ ದೌರ್ಬಲ್ಯ) ಪದೇ ಪದೇ ಉಲ್ಲೇಖಿಸಲಾಗಿದೆ. ಅದರ ಬ್ಯಾಟಿಂಗ್ ಸಮಸ್ಯೆಗಳು ಎದ್ದುಕಂಡಿವೆ. ಹೊಸ ಆರಂಭ ಆಟಗಾರರು ಇನ್ನೂ ಕುದುರಿಕೊಂಡಿಲ್ಲ. ಮಧ್ಯಮ ಕ್ರಮಾಂಕ ಕೂಡ ಅಲುಗಾಡುತ್ತಿದೆ. ಅನುಭವಿಗಳಾದ ಸ್ಟೀವ್ ಸ್ಮಿತ್ ಮತ್ತು ಮಾರ್ನಸ್ ಲಾಬುಷೇನ್ ಉತ್ತಮ ಲಯದಲ್ಲಿಲ್ಲ. ಭಾರತದ ಪಾಲಿಗೆ ಹಿಂದೆಯೂ ತಲೆನೋವಾಗಿರುವ ಟ್ರಾವಿಸ್ ಹೆಡ್ ಮಾತ್ರ ವಿಶ್ವಾಸದಿಂದ ಆಡಿದ್ದಾರೆ.
ಆಸ್ಟ್ರೇಲಿಯಾ ತಂಡ ಪಂದ್ಯಕ್ಕೆ ಮೊದಲೇ ದೊಡ್ಡ ಹಿನ್ನಡೆಯೆಂಬಂತೆ ವೇಗಿ ಜೋಶ್ ಹ್ಯಾಜಲ್‌ವುಡ್ ಅವರನ್ನು ಕಳೆದುಕೊಂಡಿದೆ. ಅವರು ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ. ಸ್ಕಾಟ್ ಬೋಲ್ಯಾಂಡ್ ಆ ಸ್ಥಾನಕ್ಕೆ ಬಂದಿದ್ದಾರೆ. ಆತಿಥೇಯರಿಗೆ ಸಮಾಧಾನದ ವಿಷಯವೆಂದರೆ ಮಿಚೆಲ್ ಮಾರ್ಷ್ ಬೌಲಿಂಗ್ ಮಾಡಲು ಫಿಟ್ ಆಗಿರುವುದು.
ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಪರಿಣಾಮಕಾರಿ ಬೌಲಿಂಗ್ ಹಾಗೂ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಭಾರತದ ಪಾಳೆಯದಲ್ಲಿ ನವೋಲ್ಲಾಸ ತುಂಬಿದೆ. ತಂಡದಲ್ಲಿ ಎರಡು ನಿರೀಕ್ಷಿತ ಬದಲಾವಣೆಗಳಾಗಿದೆ. ಬೆರಳ ಗಾಯದಿಂದ ಚೇತರಿಸಿರುವ ಶುಭಮನ್ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿದಗ್ದಾರೆ. ದೇವದತ್ತ ಪಡಿಕ್ಕಲ್ ಮತ್ತು ಧ್ರುವ್ ಜುರೇಲ್ ಸ್ಥಾನ ತೆರವು ಮಾಡಿದ್ದಾರೆ.
ಮೊದಲ ಟೆಸ್ಟ್‌ನಲ್ಲಿ ಇನಿಂಗ್ಸ್ ಆರಂಭಿಸಿ ಉತ್ತಮ ಆಟವಾಡಿದ ಕೆ.ಎಲ್.ರಾಹುಲ್ ಅವರೇ ಮತ್ತೆ ಆ ಹೊಣೆ ವಹಿಸುವರು ಎಂದು ರೋಹಿತ್ ಶರ್ಮಾ ಬಹಿರಂಗಪಡಿಸಿದ್ದಾರೆ. 36 ವರ್ಷದ ನಾಯಕ ತಾವು ‘ಮಧ್ಯಮ ಕ್ರಮಾಂಕದ ಯಾವುದಾದರೂ ಸ್ಥಾನದಲ್ಲಿ ಆಡುವುದಾಗಿ’ ತಿಳಿಸಿದ್ದಾರೆ.
ವೇಗದ ಬೌಲಿಂಗ್ ಆಲ್‌ರೌಂಡರ್ ನಿತೀಶ್ ರೆಡ್ಡಿ ಅವರಿಂದಾಗಿ ಬ್ಯಾಟಿಂಗ್ ವಿಭಾಗದ ಬಲವರ್ಧನೆಯಾಗಿದೆ. ಹರ್ಷಿತ್ ರಾಣಾ ಕೂಡ ತಮ್ಮ ಸ್ಥಾನ ಉಳಿಸಿಕೊಳ್ಳುವರು. ಆಫ್ ಸ್ಪಿನ್ ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆ ಇರುವುದರಿಂದ ಹಿರಿಯಣ್ಣರಾದ ಆರ್.ಅಶ್ವಿನ್ ಮತ್ತು ರವೀಂದ್ರ ಜಡೇಜ ಅವರಿಗೆ 11ರ ಬಳಗದಲ್ಲಿ ಅವಕಾಶ ಕಷ್ಟ. ಭಾರತದ ಪಾಳೆಯಲ್ಲಿ ಮೂಡಿರುವ ವಿಶ್ವಾಸ ಸ್ಪಷ್ಟ ನಿರ್ಧಾರ ಸುಲಭವಾಗಿಸಿದೆ.
ತಂಡಗಳು:
ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಉಸ್ಮಾನ್ ಖ್ವಾಜಾ, ನಥಾನ್ ಮೆಕ್‌ಸ್ವೀನಿ, ಟ್ರಾವಿಸ್ ಹೆಡ್, ಸ್ವೀವ್ ಸ್ಮಿತ್, ಮಾರ್ನಸ್ ಲಾಬುಷೇನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್, ನಥಾನ್ ಲಯನ್.
ಭಾರತ (ಸಂಭಾವ್ಯ): ರೋಹಿತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ (ಉಪ ನಾಯಕ), ಯಶಸ್ವಿ ಜೈಸ್ವಾಲ್, ಕೆ.ಎಲ್.ರಾಹುಲ್, ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ, ಮೊಹಮ್ಮದ್ ಸಿರಾಜ್, ಹರ್ಷಿತ್ ರಾಣಾ.
ಪಂದ್ಯ ಆರಂಭ: ಬೆಳಿಗ್ಗೆ 9.30.
ನೇರ ಪ್ರಸಾರ:
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.