ADVERTISEMENT

ಭಾರತಕ್ಕೆ ವೀರೋಚಿತ ಸೋಲು

ಎಸಿಸಿ ಎಮರ್ಜಿಂಗ್‌ ಟೀಮ್ಸ್ ಕಪ್‌: ಪಾಕಿಸ್ತಾನ ಫೈನಲ್‌ಗೆ

ಪಿಟಿಐ
Published 20 ನವೆಂಬರ್ 2019, 19:34 IST
Last Updated 20 ನವೆಂಬರ್ 2019, 19:34 IST

ಢಾಕಾ: ಭಾರತ ತಂಡ ಎಸಿಸಿ ಎಮರ್ಜಿಂಗ್‌ ಟೀಮ್ಸ್ ಕಪ್‌ (23 ವರ್ಷದೊಳಗಿನವರು) ಕ್ರಿಕೆಟ್‌ ಟೂರ್ನಿಯಿಂದ ನಿರ್ಗಮಿಸಿತು. ಬುಧವಾರ ಸೆಮಿಫೈನಲ್‌ ಹಣಾಹಣಿಯಲ್ಲಿ ಬಿ.ಆರ್‌.ಶರತ್‌ ಬಳಗ ಪಾಕಿಸ್ತಾನ ವಿರುದ್ಧ ಮೂರು ರನ್‌ಗಳ ವೀರೋಚಿತ ಸೋಲು ಕಂಡಿತು.

ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ 7 ವಿಕೆಟ್‌ ಕಳೆದುಕೊಂಡು 267 ರನ್‌ ಕಲೆಹಾಕಿತು. ಭಾರತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 264 ರನ್ ಗಳಿಸಲಷ್ಟೇ ಶಕ್ತವಾಯಿತು.

ಪಾಕ್‌ ಪರ ಆರಂಭಿಕರಾದ ಒಮೈರ್‌ ಯೂಸುಫ್‌ ಅರ್ಧಶತಕ (66, 97 ಎಸೆತ) ಹಾಗೂ ಹೈದರ್‌ ಅಲಿ (43, 60 ಎಸೆತ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 90 ರನ್‌ ಗಳಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಸೈಯದ್‌ ಬಾದರ್‌ (47) ಹಾಗೂ ನಾಯಕ ರೊಹೈಲ್‌ ನಜೀರ್‌ (35)ಉಪಯುಕ್ತ ಕೊಡುಗೆ ನೀಡಿದರು.

ADVERTISEMENT

ಭಾರತದ ವೇಗಿಶಿವಂ ಮಾವಿ (53ಕ್ಕೆ 2), ಆಫ್‌ ಸ್ಪಿನ್ನರ್‌ ಹೃತಿಕ್‌ ಶೊಕೀನ್‌ (59ಕ್ಕೆ 2) ಹಾಗೂ ಸೌರಭ್‌ ದುಬೆ (60ಕ್ಕೆ 2) ತಲಾ ಎರಡು ವಿಕೆಟ್‌ ಕಿತ್ತರು.

ಬ್ಯಾಟಿಂಗ್‌ಗೆ ಇಳಿದ ಭಾರತಕ್ಕೆ ಶರತ್‌ (47, 43 ಎಸೆತ) ಹಾಗೂ ಆರ್ಯನ್‌ ಜುಯಲ್‌ (17) ಮೊದಲ ವಿಕೆಟ್‌ಗೆ 43 ರನ್‌ ಸೇರಿಸಿದರು. ಜುಯಲ್‌ ವಿಕೆಟ್‌ ಪತನದ ನಂತರ ಶರತ್‌ ಹಾಗೂ ಸಾನ್ವೀರ್‌ ಸಿಂಗ್‌ (76, 90 ಎಸೆತ) ಅರ್ಧಶತಕದ ಜೊತೆಯಾಟ ತಂಡದ ಆಸೆ ಚಿಗುರುವಂತೆ ಮಾಡಿತು. ಆದರೆ ಈ ಜೋಡಿಯು ಬೇರ್ಪಟ್ಟ ನಂತರ ಭಾರತದ ರನ್‌ ಗಳಿಕೆಗೆ ಕಡಿವಾಣ ಬಿತ್ತು. ಆರ್ಮಾನ್‌ ಜಾಫರ್‌ (46) ಹಾಗೂ ಚಿನ್ಮಯ್‌ ಭಟ್‌ (ಔಟಾಗದೆ 28) ಉತ್ತಮ ಆಟವಾಡಿದರೂ ತಂಡವನ್ನು ಗೆಲುವಿನ ದಡ ಸೇರಿಸಲಾಗಲಿಲ್ಲ.

ಕೊನೆಯ ಓವರ್‌ನಲ್ಲಿ ಭಾರತದ ಗೆಲುವಿಗೆ ಏಳು ರನ್‌ಗಳು ಬೇಕಿತ್ತು. ಎದುರಾಳಿ ತಂಡದ ವೇಗಿ ಅಮಾದ್‌ ಭಟ್‌ ಕೇವಲ ನಾಲ್ಕು ರನ್‌ ನೀಡಿ, ಒಂದು ವಿಕೆಟ್‌ ಕೂಡ ಕಿತ್ತು ಗೆಲುವು ಕಸಿದರು.

ಸಂಕ್ಷಿ‍ಪ್ತ ಸ್ಕೋರು: ಪಾಕಿಸ್ತಾನ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 267 (ಒಮೈರ್‌ ಯೂಸುಫ್‌ 66, ಸೈಯದ್‌ ಬಾದರ್‌ 47, ಹೈದರ್‌ ಅಲಿ 43; ಶಿವಂ ಮಾವಿ 53ಕ್ಕೆ 2, ಹೃತಿಕ್‌ ಶೊಕೀನ್‌ 59ಕ್ಕೆ 2, ಸೌರಭ್‌ ದುಬೆ 60ಕ್ಕೆ 2) ಭಾರತ: 50 ಓವರ್‌ಗಳಲ್ಲಿ 8 ವಿಕೆಟ್‌ಗೆ 264 (ಸಾನ್ವೀರ್‌ ಸಿಂಗ್‌ 76, ಶರತ್‌ 47, ಅರ್ಮಾನ್‌ ಜಾಫರ್‌ 46; ಸೈಫ್‌ ಬಾದರ್‌ 57ಕ್ಕೆ 2) ಫಲಿತಾಂಶ: ಪಾಕಿಸ್ತಾನಕ್ಕೆ 3 ರನ್‌ಗಳ ಜಯ, ಫೈನಲ್‌ ಪ್ರವೇಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.