
ದುಬೈ: ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಆಟದ ಉತ್ತುಂಗದಲ್ಲಿರುವಂತೆ ಕಾಣಿಸಿ ಕೇವಲ 95 ಎಸೆತಗಳಲ್ಲಿ 171 ರನ್ ಸಿಡಿಸಿದರು. ಭಾರತ ತಂಡ 19 ವರ್ಷದೊಳಗಿನವರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಶುಕ್ರವಾರ ಯುಎಇ ತಂಡದ ಮೇಲೆ 234 ರನ್‌ಗಳ ಭಾರಿ ಜಯ ದಾಖಲಿಸಿತು.
ಬಿಹಾರದ ಸಮಷ್ಟಿಪುರದ 14 ವರ್ಷ ವಯಸ್ಸಿನ ಸ್ಫೋಟಕ ಹೊಡೆತಗಳ ಆಟಗಾರ 14 ಸಿಕ್ಸರ್‌ಗಳನ್ನು ಬಾರಿಸಿ ಪರಾಕ್ರಮ ಮೆರೆದರು. ಇದು 19 ವರ್ಷದೊಳಗಿನವರ ಮಟ್ಟದಲ್ಲಿ ಇಷ್ಟೊಂದು ಸಿಕ್ಸರ್ ಯಾರೂ ಹೊಡೆದಿರಲಿಲ್ಲ. ಜೊತೆಗೆ 9 ಬೌಂಡರಿಗಳನ್ನೂ ಬಾರಿಸಿದರು.
ವಿಹಾನ್ ಮಲ್ಹೋತ್ರಾ (69) ಮತ್ತು ಆರನ್ ಜಾರ್ಜ್ (69) ಅವರೂ ಅರ್ಧ ಶತಕಗಳನ್ನು ಹೊಡೆದ ಪರಿಣಾಮ ಭಾರತ 50 ಓವರುಗಳಲ್ಲಿ 6 ವಿಕೆಟ್‌ಗೆ 433 ರನ್ ಪೇರಿಸಿತು. ಇದು 19 ವರ್ಷದೊಳಗಿನವರ ಕ್ರಿಕೆಟ್‌ನಲ್ಲಿ ಭಾರತದ ಅತ್ಯಧಿಕ ಮೊತ್ತ ಮತ್ತು ಏಷ್ಯಾ ಕಪ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತವೆನಿಸಿತು.
ಈ ಹಿಮಾಲಯದ ಮೊತ್ತದೆದುರು, ಯುಎಇ ತಂಡ ಯಾವುದೇ ಹಂತದಲ್ಲಿ ಹೋರಾಟ ತೋರುವಂತೆ ಕಾಣಲಿಲ್ಲ. ಪ್ರಥ್ವಿ ಮಧು (50) ಮತ್ತು ಉದ್ದಿಶ್ ಸೂರಿ (ಅಜೇಯ 78) ಅವರ ಹೋರಾಟದ ಅರ್ಧ ಶತಕಗಳ ಹೊರತಾಗಿಯೂ ತಂಡ 7 ವಿಕೆಟ್‌ಗೆ 199 ರನ್ ಗಳಿಸಿ 50 ಓವರುಗಳನ್ನು ಮುಗಿಸಿತು.
ಸೂರ್ಯವಂಶಿ ಗಳಿಸಿದ ಮೊತ್ತವು ಯುವ ಏಕದಿನ ಪಂದ್ಯದಲ್ಲಿ ಭಾರತದ ಆಟಗಾರನೊಬ್ಬನ ಎರಡನೇ ಅತ್ಯಧಿಕ ಮೊತ್ತ ಎನಿಸಿತು. ಈ ಹಿಂದೆ 2002ರಲ್ಲಿ ಇಂಗ್ಲೆಂಡ್ ವಿರುದ್ಧ ಅಂಬಟಿ ರಾಯುಡು ಔಟಾಗದೇ 177 ರನ್ ಗಳಿಸಿದ್ದರು. ಇದು ಒಟ್ಟಾರೆ ಪುರುಷರ 19 ವರ್ಷದೊಳಗಿನ ಕ್ರಿಕೆಟ್‌ನಲ್ಲಿ 9ನೇ ಅತಿ ದೊಡ್ಡ ಶತಕ ಎನಿಸಿತು.
ಆಟವಾಡಲು ಕಳುಹಿಸಲ್ಪಟ್ಟ ಭಾರತ ಆಯುಷ್ ಮ್ಹಾತ್ರೆ ಅವರನ್ನು ಬೇಗ ಕಳೆದುಕೊಂಡಿತು. ಆದರೆ ಮತ್ತೊಂದು ಕಡೆ ಬೀಸಾಟವಾಡುತ್ತಲೇ ಹೋದ ವೈಭವ್ 30 ಎಸೆತಳಲ್ಲಿ 50 ಮತ್ತು 56 ಎಸೆತಗಳಲ್ಲಿ ನೂರರ ಗಡಿ ದಾಟಿದರು. ಎದುರಾಳಿ ದಾಳಿಯನ್ನು ಪುಡಿಗಟ್ಟಿದ ವೈಭವ್ ಮತ್ತು ಜಾರ್ಜ್ ಎರಡನೇ ವಿಕೆಟ್‌ಗೆ 212 ರನ್ ಸೇರಿಸಿದರು. ಕೊನೆಗೂ 33ನೇ ಓವರಿನಲ್ಲಿ ವೈಭವ್ ವಿಕೆಟ್ ಪಡೆದ ಉದ್ದೀಶ್ ಸೂರಿ ಅವರು ಈ ಜೊತೆಯಾಟ ಮುರಿದರು.
ವೇದಾಂತ್ ತ್ರಿವೇದಿ (38), ಅಭಿಗ್ಯಾನ್ ಕುಂದು (ಔಟಾಗದೇ 32, 17ಎ), ಕನಿಷ್ಕ್ ಚೌಹಾನ್ (28, 12ಎ) ಅವರು ಮಿಂಚಿನ ಆಟವಾಡಿ ತಂಡದ ಮೊತ್ತ 400 ದಾಟಲು ನೆರವಾದರು.
23 ರನ್‌ಗಳಾಗುವಷ್ಟರಲ್ಲಿ ಆರಂಭ ಆಟಗಾರರನ್ನು ಕಳೆದುಕೊಂಡ ಮತ್ತು 48 ರನ್‌ಗಳಾಗುವಷ್ಟರಲ್ಲಿ ಅರ್ಧದಷ್ಟು ವಿಕೆಟ್‌ಗಳನ್ನು ಕಳೆದುಕೊಂಡ ಆತಿಥೇಯ ತಂಡ ಯಾವ ಹಂತದಲ್ಲೂ ಹೋರಾಟ ತೋರುವಂತೆ ಕಾಣಲಿಲ್ಲ. ಆದರೆ ಆಲೌಟ್ ಸಹ ಆಗದೇ ಇನಿಂಗ್ಸ್ ಮುಗಿಸಿತು.
ಸಂಕ್ಷಿಪ್ತ ಸ್ಕೋರು:
ಭಾರತ: 50 ಓವರುಗಳಲ್ಲಿ 6 ವಿಕೆಟ್‌ಗೆ 433 (ವೈಭವ ಸೂರ್ಯವಂಶಿ 171, ಆರನ್ ಜಾರ್ಜ್ 69, ವಿಹಾನ್ ಮಲ್ಹೋತ್ರಾ 69); ಯುಎಇ: 50 ಓವರುಗಳಲ್ಲಿ 7 ವಿಕೆಟ್‌ಗೆ 199 (ಪೃಥ್ವಿ ಮಧು 50, ಉದ್ದೀಶ್ ಸೂರಿ ಔಟಾಗದೇ 78, ದೀಪೇಶ್ ದೇವೇಂದ್ರನ್ 21ಕ್ಕೆ2).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.