ADVERTISEMENT

ಭಾರತ–ಇಂಗ್ಲೆಂಡ್ 3ನೇ ಏಕದಿನ ಪಂದ್ಯ: ಸರಣಿ ಜಯಕ್ಕಾಗಿ ರೋಹಿತ್–ಬಟ್ಲರ್ ಹಣಾಹಣಿ

ಉಭಯ ತಂಡಗಳಿಗೂ ಬ್ಯಾಟಿಂಗ್‌ ಚಿಂತೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2022, 19:31 IST
Last Updated 16 ಜುಲೈ 2022, 19:31 IST
ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ  –ಪಿಟಿಐ ಚಿತ್ರ
ರೋಹಿತ್ ಶರ್ಮಾ ಮತ್ತು ಜಸ್‌ಪ್ರೀತ್ ಬೂಮ್ರಾ  –ಪಿಟಿಐ ಚಿತ್ರ   

ಮ್ಯಾಂಚೆಸ್ಟರ್ (ಪಿಟಿಐ): ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಮತ್ತು ಎರಡನೇ ಪಂದ್ಯದಲ್ಲಿ ಹೀನಾಯ ಸೋಲುಂಡಿರುವ ಭಾರತ ತಂಡಕ್ಕೆ ಮತ್ತೊಂದು ಕಠಿಣ ಸವಾಲೊಡ್ಡಲು ಆತಿಥೇಯ ಇಂಗ್ಲೆಂಡ್ ಸಿದ್ಧವಾಗಿದೆ.

ಮೂರು ಏಕದಿನ ಪಂದ್ಯಗಳ ಸರಣಿಯ ಕೊನೆಯ ಮತ್ತು ನಿರ್ಣಾಯಕ ಪಂದ್ಯವು ಭಾನುವಾರ ನಡೆಯಲಿದ್ದು ಉಭಯ ತಂಡಗಳ ನಡುವೆ ಜಿದ್ದಾಜಿದ್ದಿ ಪೈಪೋಟಿಯ ನಿರೀಕ್ಷೆ ಗರಿಗೆದರಿದೆ.

ರೋಹಿತ್ ಶರ್ಮಾ ನಾಯಕತ್ವದ ಬಳಗದ ಬ್ಯಾಟರ್‌ಗಳು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದರೆ ಗೆಲುವು ಸಾಧಿಸಲು ಸಾಧ್ಯವಿದೆ. ಏಕೆಂದರೆ ಸರಣಿಯ ಎರಡೂ ಪಂದ್ಯಗಳಲ್ಲಿ ಬೌಲರ್‌ಗಳು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಆಡಿದ್ದಾರೆ. ಆದರೆ, ಲಾರ್ಡ್ಸ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 247 ರನ್‌ಗಳ ಗುರಿಯನ್ನು ತಲುಪಲಾಗದ ಭಾರತ ತಂಡವು 100 ರನ್‌ಗಳ ಸೋಲನುಭವಿಸಿತ್ತು. ಆರಂಭಿಕ ಜೋಡಿ ರೋಹಿತ್, ಶಿಖರ್ ಧವನ್, ಅನುಭವಿ ವಿರಾಟ್ ಕೊಹ್ಲಿ ವೈಫಲ್ಯ ಅನುಭವಿಸಿದ್ದು ದುಬಾರಿಯಾಯಿತು. ಮಧ್ಯಮ ಕ್ರಮಾಂಕದಲ್ಲಿಯೂ ದೊಡ್ಡ ಜೊತೆಯಾಟ ದಾಖಲಾಗಲಿಲ್ಲ.

ADVERTISEMENT

ವಿರಾಟ್, ತಂಡಕ್ಕೆ ಗೆಲುವಿನ ಕಾಣಿಕೆ ನೀಡುವಂತಹ ಇನಿಂಗ್ಸ್ ಆಡುವಲ್ಲಿಯೂ ವಿಫಲರಾಗುತ್ತಿದ್ದಾರೆ. ಅವರು ಲಯಕ್ಕೆ ಮರಳಿದರೆ ಆತಿಥೇಯ ಬೌಲರ್‌ಗಳಿಗೆ ಒತ್ತಡ ಬೀಳಬಹುದು.

ಇನ್ನೊಂದೆಡೆ ಇಂಗ್ಲೆಂಡ್ ತಂಡದ ಸಮಸ್ಯೆಯೂ ಇದೇ ತೆರನಾಗಿದೆ. ಎರಡೂ ಪಂದ್ಯಗಳಲ್ಲಿ ಬ್ಯಾಟರ್‌ಗಳಿಂದ ನಿರೀಕ್ಷಿತ ಆಟ ಮೂಡಿಬಂದಿಲ್ಲ. ಲಾರ್ಡ್ಸ್‌ನಲ್ಲಿ ವೇಗಿ ರೀಸ್ ಟಾಪ್ಲಿ ಅವರ ಅಮೋಘ ಬೌಲಿಂಗ್‌ನಿಂದಾಗಿ ತಂಡ ಜಯಭೇರಿ ಬಾರಿಸಿತ್ತು. ಭಾರತದ ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ, ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರ ಎದುರು ರನ್‌ ಗಳಿಸುವ ತಂತ್ರಗಾರಿಕೆಯೊಂದಿಗೆ ಕಣಕ್ಕಿಳಿಯುವ ಸವಾಲು ಜೊಸ್ ಬಟ್ಲರ್ ಬಳಗದ ಮುಂದಿದೆ.

ನೇರಪ್ರಸಾರ: ಸೋನಿ ನೆಟ್‌ವರ್ಕ್

ಪಂದ್ಯ ಆರಂಭ: ಮಧ್ಯಾಹ್ನ 3.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.