ಬರ್ಮಿಂಗ್‌ಹ್ಯಾಮ್: ವಿಶ್ವ ಲೆಜೆಂಡ್ಸ್ ಚಾಂಪಿಯನ್‌ಶಿಪ್ (WCL) ಟೂರ್ನಿಯಲ್ಲಿ ಭಾನುವಾರ ನಡೆಯಬೇಕಿದ್ದ ಭಾರತ-ಪಾಕಿಸ್ತಾನ ನಡುವಿನ ಪಂದ್ಯವನ್ನು ಅಧಿಕೃತವಾಗಿ ರದ್ದುಗೊಳಿಸಲಾಗಿದೆ.
ಈ ಬಗ್ಗೆ ಡಬ್ಲ್ಯೂಸಿಎಲ್ ಆಯೋಜಕರು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಭಾರತ ಲೆಜೆಂಡ್ಸ್ ತಂಡದ ಹಲವು ಆಟಗಾರರು ಪಾಕಿಸ್ತಾನದ ಜೊತೆಗೆ ಆಡಲು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಆಯೋಜಕರು ಹೇಳಿದ್ದಾರೆ.
ಅಭಿಮಾನಿಗಳ ಭಾವನೆಗಳಿಗೆ ನೋವುಂಟು ಮಾಡಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ಅಭಿಮಾನಿಗಳಿಗೆ ಕೆಲವು ಸಂತೋಷದ ಕ್ಷಣಗಳನ್ನು ನೀಡುವ ಉದ್ದೇಶ ನಮ್ಮದಾಗಿತ್ತು, ಅದನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇವೆ. ನಾವು ಭಾರತ ಹಾಗೂ ಪಾಕಿಸ್ತಾನ ಪಂದ್ಯವನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ಡಬ್ಲ್ಯೂಸಿಎಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಭಾರತದ ಪರವಾಗಿ ಯುವರಾಜ್ ಸಿಂಗ್, ಪಠಾಣ್ ಸಹೋದರರು, ಶಿಖರ್ ಧವನ್, ಹರಭಜನ್ ಸಿಂಗ್, ಸುರೇಶ್ ರೈನಾ, ರಾಬಿನ್ ಉತ್ತಪ್ಪ ಸೇರಿ ಹಲವರ ಆಡುತ್ತಿದ್ದಾರೆ.
ಪಾಕಿಸ್ತಾನ ತಂಡದಲ್ಲಿ ಆಫ್ರಿದಿ, ಕರ್ಮಾನ್ ಅಕ್ಮಲ್, ಶೋಯಬ್ ಮಲಿಕ್, ಮೊಹಮ್ಮದ್ ಹಫೀಜ್ ಸೇರಿ ಹಲವರು ಆಡುತ್ತಿದ್ದಾರೆ.
ಪಹಲ್ಗಾಮ್ ದಾಳಿ ಹಾಗೂ ಇತ್ತೀಚಿಗೆ ಉಭಯ ದೇಶಗಳ ನಡುವೆ ಬಿಕ್ಕಟ್ಟು ಉಂಟಾಗಿರುವ ಹಿನ್ನೆಲೆಯಲ್ಲಿ ಭಾರತೀಯ ಆಟಗಾರರು ಪಾಕ್ ಜೊತೆ ಪಂದ್ಯವಾಡಲು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.