ADVERTISEMENT

19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್: ಕ್ವಾರ್ಟರ್‌ಫೈನಲ್‌ಗೆ ಭಾರತ ತಂಡ

ಕೋವಿಡ್‌ಗೆ ಸೆಡ್ಡು ಹೊಡೆದ ಹುಡುಗರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2022, 17:57 IST
Last Updated 20 ಜನವರಿ 2022, 17:57 IST
ಯಶ್‌ ಧುಳ್‌
ಯಶ್‌ ಧುಳ್‌   

ತರೌಬಾ, ಟ್ರಿನಿಡಾಡ್:ಕೋವಿಡ್‌ನಿಂದ ಬಳಲಿದ ನಾಯಕ ಯಶ್ ಧುಳ್ ಮತ್ತು ನಾಲ್ವರು ಆಟಗಾರರ ಗೈರುಹಾಜರಿಯಿಂದಾಗಿ ಒತ್ತಡದಲ್ಲಿದ್ದ ಭಾರತ ತಂಡವು 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಐರ್ಲೆಂಡ್ ಎದುರು ಕೆಚ್ಚೆದೆಯ ಆಟವಾಡಿತು.

ಬುಧವಾರ ತಡರಾತ್ರಿ ಮುಗಿದ ಪಂದ್ಯದಲ್ಲಿ ಭಾರತ ತಂಡವು 174 ರನ್‌ಗಳಿಂದ ಐರ್ಲೆಂಡ್ ತಂಡವನ್ನು ಮಣಿಸಿ, ಕ್ವಾರ್ಟರ್‌ಫೈನಲ್‌ಗೆ ಲಗ್ಗೆ ಇಟ್ಟಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು ಅಂಗಕ್ರಿಷ್ ರಘುವಂಶಿ (79; 79ಎ, 4X10, 6X2) ಮತ್ತು ಹರ್ನೂರ್ ಸಿಂಗ್ (88; 101ಎ, 4X12) ನೀಡಿದ ಅಮೋಘ ಆರಂಭದ ಬಲದಿಂದ 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 307 ರನ್ ಗಳಿಸಿತು. ಅದಕ್ಕುತ್ತರವಾಗಿ ಐರ್ಲೆಂಡ್ ತಂಡವು 39 ಓವರ್‌ಗಳಲ್ಲಿ 133 ರನ್ ಗಳಿಸಿ ಆಲೌಟ್ ಆಯಿತು.

ADVERTISEMENT

ಲಕ್ಷ್ಮಣ್ ಮೆಚ್ಚುಗೆ: ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಜೂನಿಯರ್ ಹುಡುಗರು ಅಮೋಘ ಆಟವಾಡಿದ್ದಾರೆ. ದೊಡ್ಡ ಅಂತರದ ಜಯ ಸಾಧಿಸಿದ್ದಾರೆ ಎಂದು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಂದ್ಯಕ್ಕೂ ಮುನ್ನವಷ್ಟೇ; ನಾಯಕ ಯಶ್ ಧುಳ್, ಉಪನಾಯಕ ಶೇಖ್ ರಶೀದ್ ಮತ್ತು ನಾಲ್ವರು ಆಟಗಾರರಿಗೆ ಕೋವಿಡ್ ಖಚಿತವಗಿತ್ತು. ಆದ್ದರಿಂದ ಅವರನ್ನು ಪ್ರತ್ಯೇಕವಾಸಕ್ಕೆ ಕಳುಹಿಸಲಾಯಿತು. ಇಂತಹ ಆಘಾತದ ನಡುವೆಯೂ ತಂಡವು ಅಮೋಘ ಆಟವಾಡಿರುವುದನ್ನು ಲಕ್ಷ್ಮಣ್ ಶ್ಲಾಘಿಸಿದ್ದಾರೆ.

‘ಇಡೀ ಬಳಗದಲ್ಲಿ 11 ಆಟಗಾರರಷ್ಟೇ ಇದ್ದಾರೆ. ಆದರೂ ದೃತಿಗೆಡದೇ, ಗಾಯಗೊಳ್ಳದೇ ಇಡೀ ಪಂದ್ಯದಲ್ಲಿ ತಂಡವು ತೋರಿದ ಸ್ಥೈರ್ಯ ಮತ್ತು ಚಾಕಚಕ್ಯತೆಯ ಆಟ ಅಮೋಘವಾಗಿತ್ತು’ ಎಂದು ಟ್ವೀಟ್ ಮಾಡಿದ್ದಾರೆ.

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 5ಕ್ಕೆ307 (ಅಂಗಕ್ರಿಷ್ ರಘುವಂಶಿ 79, ಹರ್ನೂರ್ ಸಿಂಗ್ 88, ರಾಜ್ ಬಾವಾ 42, ನಿಶಾಂತ್ ಸಿಂಧು 36, ರಾಜವರ್ಧನ್ ಹಂಗರಗೇಕರ್ ಔಟಾಗದೆ 39, ಮುಜಾಮಿಲ್ ಶರ್ಜಾದ್ 79ಕ್ಕೆ3), ಐರ್ಲೆಂಡ್: 39 ಓವರ್‌ಗಳಲ್ಲಿ 133 (ಜೊಶುವಾ ಕಕ್ಸ್ 28, ಸ್ಕಾಟ್ ಮೆಕ್‌ಬೆತ್ 32, ಗರ್ವ್ ಸಂಗ್ವಾನ್ 23ಕ್ಕೆ2, ಅನೀಶ್ವರ್ ಗೌತಮ್ 11ಕ್ಕೆ2, ಕೌಶಲ್ ತಾಂಬೆ 8ಕ್ಕೆ2) ಫಲಿತಾಂಶ: ಭಾರತ ತಂಡಕ್ಕೆ 174 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.