ADVERTISEMENT

Champions Trophy: ಬೂಮ್ರಾ ಅನುಪಸ್ಥಿತಿ ಭಾರತವನ್ನು ಕಾಡಲಿದೆ; ಧವನ್

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2025, 11:12 IST
Last Updated 18 ಫೆಬ್ರುವರಿ 2025, 11:12 IST
ಶಿಖರ್ ಧವನ್ 
ಶಿಖರ್ ಧವನ್    

ದುಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ವೇಗಿ ಜಸ್‌ಪ್ರೀತ್ ಬೂಮ್ರಾ ಅನುಪಸ್ಥಿಯು ಭಾರತವನ್ನು ಬಲವಾಗಿ ಕಾಡಲಿದೆ ಎಂದು ಮಾಜಿ ಕ್ರಿಕೆಟಿಗ ಶಿಖರ್ ಧವನ್ ಹೇಳಿದ್ದಾರೆ. ಆದರೂ ಈಗಿನ ಫಾರ್ಮ್ ಗಮನಿಸಿದರೆ ಭಾರತಕ್ಕೆ ಟ್ರೋಫಿ ಗೆಲ್ಲುವ ಅವಕಾಶವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ನಾಳೆಯಿಂದ ಪಾಕಿಸ್ತಾನದ ಆತಿಥ್ಯದಲ್ಲಿ ಪಂದ್ಯಾವಳಿ ಆರಂಭವಾಗಲಿದ್ದು, ಗುರುವಾರ(ಫೆ.20) ದುಬೈನಲ್ಲಿ ನೆರೆಯ ಬಾಂಗ್ಲಾದೇಶದ ವಿರುದ್ಧ ಮೊದಲ ಪಂದ್ಯ ಆಡುವ ಮೂಲಕ ಭಾರತ ತಂಡ ತನ್ನ ಅಭಿಯಾನ ಆರಂಭಿಸಲಿದೆ.

ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಿದ್ದ ಬೂಮ್ರಾ ಬೆನ್ನಿನ ಗಾಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ADVERTISEMENT

‘ಜಸ್‌ಪ್ರೀತ್ ಬೂಮ್ರಾ ಭಾರತ ತಂಡದಲ್ಲಿ ಇಲ್ಲದಿರುವುದು ನನ್ನ ಕಳವಳವಾಗಿದೆ. ಅದೊಂದು ದೊಡ್ಡ ಪರಿಣಾಮ ಬೀರಲಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಅದು ತಂಡಕ್ಕೆ ಬಹಳ ದೊಡ್ಡದಾಗಿ ಅನುಭವಕ್ಕೆ ಬರಲಿದೆ’ ಎಂದು ಐಸಿಸಿ ಅಂಕಣದಲ್ಲಿ ಧವನ್ ಬರೆದುಕೊಂಡಿದ್ದಾರೆ.

'ನನ್ನ ಪ್ರಕಾರ, ಬೂಮ್ರಾ ವಿಶ್ವದ ಅತ್ಯುತ್ತಮ ಬೌಲರ್. ಅವರ ನಿಖರ ಬೌಲಿಂಗ್ ದಾಳಿಗೆ ಪರ್ಯಾಯ ಹುಡುಕುವುದು ಕಷ್ಟ. ಅತ್ಯಂತ ಶಾಂತ ಸ್ವಭಾವದವರಾಗಿರುವ ಅವರು ಐಸಿಸಿ ಪಂದ್ಯಾವಳಿಯಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಬಲ್ಲವರಾಗಿದ್ದಾರೆ’ಎಂದೂ ಹೇಳಿದ್ದಾರೆ.

‘ಇದೇ ಸಮಯದಲ್ಲಿ, ಹರ್ಷಿತ್ ರಾಣಾ ತಂಡಕ್ಕೆ ಬಂದಿರುವುದು ರೋಮಾಂಚನಕಾರಿ ಎಂದು ನಾನು ಭಾವಿಸುತ್ತೇನೆ. ಅವರ ಆಟದ ಮೇಲೆ ಗಮನ ಕೇಂದ್ರೀಕರಿಸಿದ್ದೇನೆ. ಅತ್ಯುತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದೇನೆ’ ಎಂದಿದ್ದಾರೆ.

‘ಮೈದಾನದಲ್ಲಿ ಹರ್ಷಿತ್ ನಡೆದುಕೊಳ್ಳುವ ರೀತಿ ನನಗೆ ಇಷ್ಟ. ಅವರು ಗೋ-ಗೆಟರ್ ರೀತಿ ಇದ್ದು, ಯಾವುದಕ್ಕೂ ಹೆದರುವುದಿಲ್ಲ. ಯಾವುದೇ ಸವಾಲುಗಳನ್ನು ಸ್ವೀಕರಿಸುತ್ತಾರೆ. ಅತ್ಯುತ್ತಮ ಫಾರ್ಮ್‌ನಲ್ಲಿರುವುದನ್ನು ಇಂಗ್ಲೆಂಡ್ ಸರಣಿಯಲ್ಲಿ ನೋಡಿದ್ದೇವೆ. ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಹಾಗೆ ನೋಡಿದರೆ ರಾಣಾ ಭಾರತಕ್ಕೆ ನಿಜವಾದ ಎಕ್ಸ್-ಫ್ಯಾಕ್ಟರ್ ಅನ್ನು ಒದಗಿಸಬಹುದು ಎಂದು ನನಗೆ ಖಾತ್ರಿಯಿದೆ’ ಎಂದು ಧವನ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಫಾರ್ಮ್ ಮತ್ತು ತಂಡದ ಬಲವನ್ನು ಗಮನಿಸಿದರೆ, ಭಾರತ ಚಾಂಪಿಯನ್ ಆಗುವ ಆಶಾವಾದ ಇಟ್ಟುಕೊಳ್ಳಬಹುದು. ಬ್ಯಾಟಿಂಗ್ ವಿಭಾಗದಲ್ಲಿ ಸಮತೋಲನ ಇದೆ. ಯುವಕರು ಮತ್ತು ಅನುಭವಿಗಳಿಂದ ತಂಡ ಸಮ್ಮಿಳಿತವಾಗಿದೆ. ಶುಭಮನ್ ಗಿಲ್ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿದ್ದು, ಈ ಪಂದ್ಯಾವಳಿಯಲ್ಲಿ ಅತ್ಯಂತ ದೊಡ್ಡ ಪಾತ್ರ ನಿರ್ವಹಿಸಲಿದ್ದಾರೆ’ ಎಂದು ಧವನ್ ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.