ADVERTISEMENT

ಬ್ಲಾಸ್ಟರ್ಸ್ ಸವಾಲಿಗೆ ನಾರ್ತ್‌ ಈಸ್ಟ್‌ ಸಜ್ಜು

ಪಿಟಿಐ
Published 25 ನವೆಂಬರ್ 2020, 14:01 IST
Last Updated 25 ನವೆಂಬರ್ 2020, 14:01 IST
ಕೇರಳ ಬ್ಲಾಸ್ಟರ್ಸ್ ಆಟಗಾರರ ಅಭ್ಯಾಸ ನಡೆಸಿದರು –ಐಎಸ್‌ಎಲ್‌ ಮೀಡಿಯಾ ಚಿತ್ರ
ಕೇರಳ ಬ್ಲಾಸ್ಟರ್ಸ್ ಆಟಗಾರರ ಅಭ್ಯಾಸ ನಡೆಸಿದರು –ಐಎಸ್‌ಎಲ್‌ ಮೀಡಿಯಾ ಚಿತ್ರ   

ಬ್ಯಾಂಬೊಲಿಮ್: ಮೊದಲ ಪಂದ್ಯದಲ್ಲಿ ಬಲಿಷ್ಠ ಮುಂಬೈ ಸಿಟಿ ಎಫ್‌ಸಿ ತಂಡವನ್ನು ಮಣಿಸಿ ಆತ್ಮವಿಶ್ವಾಸದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಏಳನೇ ಆವೃತ್ತಿಯ ಎರಡನೇ ಪಂದ್ಯದಲ್ಲಿ ಗುರುವಾರ ಕೇರಳ ಬ್ಲಾಸ್ಟರ್ಸ್ ವಿರುದ್ಧ ಸೆಣಸಲಿದೆ.

ಮೊದಲ ಪಂದ್ಯದಲ್ಲಿ ರಕ್ಷಣಾತ್ಮಕ ಆಟವಾಡಿ ಗಮನ ಸೆಳೆದಿದ್ದ ನಾರ್ತ್ ಈಸ್ಟ್ ಯುನೈಟೆಡ್ ತಂಡ ಮುಂಬೈ ಸಿಟಿ ಎಫ್‌ಸಿಯನ್ನು ಏಕೈಕ ಗೋಲಿನಿಂದ ಮಣಿಸಿತ್ತು. ಅದೇ ಲಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ ಕಣಕ್ಕೆ ಇಳಿಯಲು ತಂಡ ಪ್ರಯತ್ನಿಸಲಿದೆ. ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ವಿರುದ್ಧ ಬ್ಲಾಸ್ಟರ್ಸ್ 0–1 ಅಂತರದಲ್ಲಿ ಸೋತಿತ್ತು. ಆ ಪಂದ್ಯದಲ್ಲಿ ಗುರಿಯತ್ತ ಒಮ್ಮೆಯೂ ಚೆಂಡನ್ನು ಅಟ್ಟಲು ಬ್ಲಾಸ್ಟರ್ಸ್‌ಗೆ ಸಾಧ್ಯವಾಗಲಿಲ್ಲ. ಆದ್ದರಿಂದ ನಾರ್ತ್ ಈಸ್ಟ್ ತಂಡದ ಬಲಿಷ್ಠ ರಕ್ಷಣಾ ಗೋಡೆಯನ್ನು ಕೆಡಹುವುದು ತಂಡಕ್ಕೆ ಸವಾಲಾಗಬಹುದು.

ಕೇರಳ ವಿರುದ್ಧದ ಹಿಂದಿನ ನಾಲ್ಕು ಪಂದ್ಯಗಳಲ್ಲಿ ನಾರ್ತ್ ಈಸ್ಟ್ ಸೋಲು ಕಂಡಿಲ್ಲ. ಈ ಪೈಕಿ ಎರಡು ಪಂದ್ಯಗಳು ಗೋಲುರಹಿತ ಡ್ರಾದಲ್ಲಿ ಮುಕ್ತಾಯಗೊಂಡಿದ್ದರೆ ಒಂದು ಪಂದ್ಯದಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲು ಗಳಿಸಿದ್ದವು. ಮತ್ತೊಂದರಲ್ಲಿ ನಾರ್ತ್ ಈಸ್ಟ್‌ 2–1ರ ಜಯ ಗಳಿಸಿತ್ತು.

ADVERTISEMENT

ಆದರೂ ನಾರ್ತ್ ಈಸ್ಟ್ ತಂಡದ ಕೋಚ್ ಜೆರಾಲ್ಡ್ ನೂಸ್ ಅವರು ಗುರುವಾರ ಪ್ರಬಲ ಸ್ಪರ್ಧೆ ನಡೆಯುವ ನಿರೀಕ್ಷೆಯಲ್ಲಿದ್ದಾರೆ. ‘ಐಎಸ್‌ಎಲ್‌ನಲ್ಲಿ ಆಡುತ್ತಿರುವ ಅತ್ಯುತ್ತಮ ತಂಡಗಳಲ್ಲಿ ಒಂದು ಕೇರಳ ಬ್ಲಾಸ್ಟರ್ಸ್‌. ಆ ತಂಡದ ವಿರುದ್ಧ ಆಡುವುದು ಸವಾಲೇ ಸರಿ. ಗೋಲು ಗಳಿಸುವ ಬಗೆಬಗೆಯ ತಂತ್ರಗಳು ಆ ತಂಡದ ಬತ್ತಳಿಕೆಯಲ್ಲಿವೆ. ಮೊದಲ ಪಂದ್ಯದಲ್ಲಿ ಸೋತಿರುವುದರಿಂದ ಅದು ಗುರುವಾರ ಇನ್ನಷ್ಟು ಬಲಶಾಲಿಯಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆದ್ದರಿಂದ ಉತ್ತಮ ಸ್ಪರ್ಧೆಯ ನಿರೀಕ್ಷೆ ಇದೆ’ ಎಂದು ಅವರು ಹೇಳಿದರು.

ಎದುರಾಳಿಗಳು ಎಷ್ಟು ಪ್ರಬಲರು ಎಂಬ ಅರಿವು ಇದೆ ಎಂದು ಕೇರಳ ಬ್ಲಾಸ್ಟರ್ಸ್ ಕೋಚ್ ಕಿಬು ವಿಕುನ ಹೇಳಿದರು. ‘ಮುಂಬೈ ಸಿಟಿ ವಿರುದ್ಧ ನಾರ್ತ್ ಈಸ್ಟ್ ತಂಡ ಅಮೋಘ ಆಟವಾಡಿದೆ. ಅತ್ಯುತ್ತಮ ತಂಡವಾಗಿರುವುದರಿಂದ ಗುರುವಾರ ನಮ್ಮ ಮುಂದೆ ಕಠಿಣ ಸವಾಲು ಇದೆ’ ಎಂದು ಅವರು ಅಭಿಪ್ರಾಯಪಟ್ಟರು.

ಹಿಂದಿನ ಆವೃತ್ತಿಯಲ್ಲಿ ರಕ್ಷಣಾ ವಿಭಾಗದಲ್ಲಿ ಕಳಪೆ ಆಟವಾಡಿದ ಎರಡು ತಂಡಗಳು ಕೇರಳ ಬ್ಲಾಸ್ಟರ್ಸ್ ಮತ್ತು ನಾರ್ತ್‌ ಈಸ್ಟ್ ಯುನೈಟೆಡ್‌. ಮೂರು ಪಂದ್ಯಗಳಲ್ಲಿ ಮಾತ್ರ ಈ ತಂಡಗಳಿಗೆ ಗೋಲು ಬಿಟ್ಟುಕೊಡದೇ ಇರಲು ಸಾಧ್ಯವಾಗಿತ್ತು. ನಾರ್ತ್ ಈಸ್ಟ್ ಈಗ ರಕ್ಷಣಾ ವಿಭಾಗವನ್ನು ಬಲಿಷ್ಠಗೊಳಿಸಿದೆ. ಆದರೆ ಕೇರಳವನ್ನು ಆ ಸಮಸ್ಯೆ ಇನ್ನೂ ಕಾಡುತ್ತಿದೆ. ಮೊದಲ ಪಂದ್ಯದಲ್ಲಿ ರಕ್ಷಣಾ ವಿಭಾಗದ ದೌರ್ಬಲ್ಯದ ಲಾಭ ಪಡೆದು ಎದುರಾಳಿಗಳು ಗೋಲು ಗಳಿಸಿದ್ದರು!

‘ತಂಡ ಪ್ರಗತಿ ಸಾಧಿಸುತ್ತಿದೆ. ಎಲ್ಲವೂ ಸರಿಹೊಂದಲು ಸ್ವಲ್ಪ ಸಮಯ ಬೇಕಾಗುತ್ತದೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರುವ ಭರವಸೆ ಇದೆ. ತಂಡದಲ್ಲಿ ಭಾರತದ ಮತ್ತು ವಿದೇಶದ ಹೊಸ ಆಟಗಾರರು ಹೆಚ್ಚು ಇದ್ದಾರೆ. ಅವರು ಪರಿಸ್ಥಿತಿಗೆ ಹೊಂದಿಕೊಂಡು ಬಲಿಷ್ಠ ತಂಡ ಕಟ್ಟುವ ಹಾದಿಯಲ್ಲಿದ್ದಾರೆ’ ಎಂದು ವಿಕುನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.