ದುಬೈ:ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಅಂಗವಾಗಿ ನಡೆಯಲಿರುವ ಮಹಿಳೆಯರ ಚಾಲೆಂಜರ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ 30 ಕ್ರಿಕೆಟ್ ಆಟಗಾರ್ತಿಯರು ಗುರುವಾರ ಯುಎಇಗೆ ಬಂದಿಳಿದರು.
’ಮಹಿಳೆಯರ ಮಿನಿ ಐಪಿಎಲ್‘ ಎಂದೇ ಕರೆಯಲಾಗುವ ಈ ಟೂರ್ನಿಯು ನವೆಂಬರ್ 4 ರಿಂದ 9ರವರೆಗೆ ಶಾರ್ಜಾದಲ್ಲಿ ನಡೆಯಲಿದೆ. ಮೂರು ತಂಡಗಳು ಆಡಲಿವೆ.
ಈ ಬಳಗದಲ್ಲಿರುವ ಭಾರತ ಟಿ20 ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ಬ್ಯಾಟ್ಸ್‌ವುಮನ್ ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್ ಅವರು ಇಲ್ಲಿಗೆ ಬರುವ ಮುನ್ನ ಮುಂಬೈನಲ್ಲಿ ಒಂಬತ್ತು ದಿನಗಳ ಕ್ವಾರಂಟೈನ್‌ನಲ್ಲಿದ್ದರು. ಅವರು ಎರಡು ಬಾರಿ ಕೋವಿಡ್ ಪರೀಕ್ಷೆಗೆ (ಆರ್‌ಟಿ–ಪಿಸಿಆರ್) ಪರೀಕ್ಷೆಗಳನ್ನು ಮಾಡಿಸಿಕೊಂಡಿದ್ದರು.
ಇದೀಗ ಯುಎಇಯಲ್ಲಿ ಕೂಡ ಎಲ್ಲರೂ ಆರು ದಿನಗಳ ಪ್ರತ್ಯೇಕವಾಸ ನಿಯಮವನ್ನು ಪಾಲಿಸಲಿದ್ದಾರೆ. ಐದನೇ ದಿನ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಲಿದ್ದಾರೆ.
’ಸೂಪರ್ ನೋವಾಸ್, ಟ್ರಯಲ್ ಬ್ಲೆಜರ್ಸ್, ವೆಲೊಸಿಟಿ ತಂಡಗಳು ಇಲ್ಲಿಗೆ ಬಂದಿವೆ. ನಮ್ಮ ಹುಡುಗಿಯರು ಸಂತಸದಲ್ಲಿದ್ದಾರೆ. ಅವರಿಗೆ ಸ್ವಾಗತ. ಮಹಿಳಾ ಟಿ20 ಚಾಲೆಂಜ್ ನೋಡಲು ನಾವು ಕಾತುರರಾಗಿದ್ದೇವೆ‘ ಎಂದು ಐಪಿಎಲ್ ಸಮಿತಿಯು ಅಧಿಕೃತ ಟ್ವೀಟ್ ಖಾತೆಯಲ್ಲಿ ಸಂದೇಶ ಹಾಕಿದೆ.
ಈ ಮೂರು ತಂಡಗಳಿಗೆ ಮಿಥಾಲಿರಾಜ್, ಮಂದಾನಾ ಮತ್ತು ಹರ್ಮನ್‌ಪ್ರೀತ್ ಅವರು ನಾಯಕತ್ವ ವಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.