ದುಬೈ: ಸೌತಾಂಪ್ಟನ್‌ನಲ್ಲಿ ನಡೆದ ಭಾರತ–ಇಂಗ್ಲೆಂಡ್ ಮಹಿಳಾ ತಂಡಗಳ ನಡುವಣ ಮೊದಲ ಏಕದಿನ ಪಂದ್ಯದಲ್ಲಿ ಶಿಸ್ತು ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಪ್ರತೀಕಾ ರಾವಲ್ ಅವರಿಗೆ ಐಸಿಸಿ ಶುಕ್ರವಾರ ದಂಡ ವಿಧಿಸಿದೆ.
ಪಂದ್ಯದಲ್ಲಿ ಎರಡು ಬಾರಿ ನೀತಿ ಸಂಹಿತೆ ಉಲ್ಲಂಘಿಸಿದ ಭಾರತದ ಆರಂಭಿಕ ಆಟಗಾರ್ತಿ ಪ್ರತೀಕಾ ಅವರಿಗೆ ಪಂದ್ಯ ಸಂಭಾವನೆಯ ಶೇ. 10 ರಷ್ಟು ದಂಡ ಹಾಕಲಾಗಿದೆ. ಒಂದು ಡಿಮೆರಿಟ್ ಪಾಯಿಂಟ್ ಕೂಡ ನೀಡಲಾಗಿದೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ.
ಬುಧವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೊನ್ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ ಪ್ರತೀಕಾ ಕ್ಲೀನ್ ಬೌಲ್ಡ್ ಆದರು. ಆಗ, ಡ್ರೆಸಿಂಗ್ ಕೋಣೆಗೆ ಮರಳುತ್ತಿದ್ದ ಪ್ರತೀಕಾ ಉದ್ದೇಶಪೂರ್ವಕವಾಗಿ ಸೋಫಿ ಅವರ ಭುಜಕ್ಕೆ ಡಿಕ್ಕಿ ಹೊಡೆದಿದ್ದರು. ಇದಕ್ಕೂ ಮೊದಲು, 18ನೇ ಓವರ್‌ನಲ್ಲಿ ರನ್ ಗಳಿಸುವಾಗ ಇಂಗ್ಲೆಂಡ್ ಬೌಲರ್ ಲಾರೆನ್ ಫೈಲರ್ ಅವರ ಮೈಗೆ ತಾಗಿದ್ದರು.
ಇಂಗ್ಲೆಂಡ್‌ಗೂ ದಂಡ: ಬುಧವಾರದ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡಕ್ಕೂ ಐಸಿಸಿ ದಂಡ ವಿಧಿಸಿದೆ.
ನಿಗದಿತ ಅವಧಿಯಲ್ಲಿ ಒಂದು ಓವರ್‌ನಷ್ಟು ಹಿಂದಿದ್ದ ನ್ಯಾಟ್ ಶಿವರ್ ಬ್ರಂಟ್ ಬಳಗಕ್ಕೆ ಪಂದ್ಯ ಸಂಭಾವನೆಯ ಶೇ. 5ರಷ್ಟು ದಂಡ ಹಾಕಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.