ADVERTISEMENT

IPL 2021: ಪ್ಲೇ ಆಫ್ ಹಾದಿಯಲ್ಲಿ ಮುಂಬೈಗೆ ಕಠಿಣ ಸವಾಲು

ಪಿಟಿಐ
Published 7 ಅಕ್ಟೋಬರ್ 2021, 18:26 IST
Last Updated 7 ಅಕ್ಟೋಬರ್ 2021, 18:26 IST
ಸನ್‌ರೈಸರ್ಸ್ ತಂಡದ ಕೇನ್ ವಿಲಿಯಮ್ಸನ್ (ಎಡ) ಮತ್ತು ಅಭಿಷೇಕ್ ಶರ್ಮಾ –ಪಿಟಿಐ ಚಿತ್ರ
ಸನ್‌ರೈಸರ್ಸ್ ತಂಡದ ಕೇನ್ ವಿಲಿಯಮ್ಸನ್ (ಎಡ) ಮತ್ತು ಅಭಿಷೇಕ್ ಶರ್ಮಾ –ಪಿಟಿಐ ಚಿತ್ರ   

ಅಬುಧಾಬಿ: ಐದು ಬಾರಿಯ ಚಾಂಪಿಯ‌ನ್ ಮುಂಬೈ ಇಂಡಿಯನ್ಸ್ ಇದೀಗ ವಿಷಮ ಸ್ಥಿತಿಯಲ್ಲಿದೆ. ಪ್ಲೇ ಆಫ್ ಕನಸು ಬಹುತೇಕ ಕಮರಿ ಹೋಗಿರುವ ತಂಡ ಕೊನೆಯ ಲೀಗ್ ಪಂದ್ಯದಲ್ಲಿ ಶುಕ್ರವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ನಿರೀಕ್ಷೆಗೂ ಮೀರಿದ ರನ್‌ರೇಟ್‌ನೊಂದಿಗೆ ಗೆದ್ದರೆ ಮಾತ್ರ ತಂಡಕ್ಕೆ ಪ್ಲೇ ಆಫ್‌ ಹಂತ ತಲುಪಲು ಸಾಧ್ಯ.

ಹಿಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಎದುರು ಎಂಟು ವಿಕೆಟ್‌ಗಳಿಂದ ಗೆದ್ದಿರುವ ಕಾರಣ ತಂಡದ ಪ್ಲೇ ಆಫ್ ಆಸೆ ಜೀವಂತವಾಗಿ ಉಳಿದಿತ್ತು. ಆದರೆ ರನ್‌ರೇಟ್‌ (-0.048) ಕಡಿಮೆ ಇರುವುದರಿಂದಲೆಕ್ಕಾಚಾರದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ (+0.587) ತಂಡವನ್ನು ಹಿಂದಿಕ್ಕಬೇಕಾಗಿದೆ. ರಾಜಸ್ಥಾನ್ ರಾಯಲ್ಸ್ ಎದುರು ಗುರುವಾರದ ಪಂದ್ಯದಲ್ಲಿ ಭಾರಿ ಜಯ ಗಳಿಸಿದ್ದರಿಂದ ಕೋಲ್ಕತ್ತದ ಪಾಯಿಂಟ್‌ 14ಕ್ಕೇರಿದ್ದು ರನ್‌ ರೇಟ್ ಕೂಡ ಹೆಚ್ಚಿದೆ. ಮುಂಬೈ 12 ಪಾಯಿಂಟ್‌ಗಳನ್ನು ಹೊಂದಿದೆ.

ರಾಜಸ್ಥಾನ್ ರಾಯಲ್ಸ್ ಎದುರಿನ ಪಂದ್ಯದಲ್ಲಿ ಕೋಲ್ಕತ್ತ ಸೋತಿದ್ದರೆ ಶುಕ್ರವಾರದ ಪಂದ್ಯದಲ್ಲಿ ಎದುರಾಳಿಯನ್ನು ಮಣಿಸಿ ಮುಂಬೈ ಇಂಡಿಯನ್ಸ್‌ ಅಂತಿಮ ನಾಲ್ಕರಲ್ಲಿ ಸ್ಥಾನ ಗಳಿಸಲು ಅವಕಾಶ ಇತ್ತು. ಆದರೆ ಈಗ ರೋಹಿತ್ ಶರ್ಮಾ ಬಳಗದ ಲೆಕ್ಕಾಚಾರ ಬುಡಮೇಲಾಗಿದೆ.

ADVERTISEMENT

ನಾಯಕ ಉತ್ತಮ ಆರಂಭ ಕಾಣುತ್ತಿದ್ದರೂ ಅದೇ ಲಯವನ್ನು ಮುಂದುವರಿಸಲಾಗುತ್ತಿಲ್ಲ. ನಿರೀಕ್ಷಿತ ಸಾಮರ್ಥ್ಯ ತೋರಲು ವಿಫಲರಾಗಿರುವ ಇಶಾನ್ ಕಿಶನ್ ಕಳೆದ ಪಂದ್ಯದಲ್ಲಿ ಅಜೇಯ ಅರ್ಧಶತಕ ಗಳಿಸಿರುವುದರಿಂದ ಅವರ ಆತ್ಮವಿಶ್ವಾಸ ಹೆಚ್ಚಿದೆ. ವೇಗಿ ಜಸ್‌ಪ್ರೀತ್ ಬೂಮ್ರಾ ನಿರೀಕ್ಷೆಗೆ ತಕ್ಕ ಬೌಲಿಂಗ್ ಮಾಡುತ್ತಿದ್ದಾರೆ.

ಸನ್‌ರೈಸರ್ಸ್ ಪರ ಹಿಂದಿನ ಪಂದ್ಯದಲ್ಲಿ ಜೇಸನ್ ರಾಯ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಅಮೋಘ ಬ್ಯಾಟಿಂಗ್ ಮಾಡಿದ್ದರು. ಆದರೆ ತಂಡಕ್ಕೆ ಜಯ ತಂದುಕೊಡುವಲ್ಲಿ ಬೌಲರ್‌ಗಳು ಪ್ರಮುಖ ಪಾತ್ರ ವಹಿಸಿದ್ದರು. ಅದೇ ಲಯವನ್ನು ಉಳಿಸಿಕೊಳ್ಳಲು ಸಾಧ್ಯವಾದರೆ ಕೊನೆಯ ಪಂದ್ಯದಲ್ಲಿ ಗೆದ್ದು ಸಮಾಧಾನದೊಂದಿಗೆ ತಂಡ ಟೂರ್ನಿಯಿಂದ ಹೊರನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.