ADVERTISEMENT

IPL 2022 MI vs CSK: ಧೋನಿ ವೈಭವ, ಚೆನ್ನೈಗೆ ಜಯ, ಮುಂಬೈಗೆ ಸತತ 7ನೇ ಸೋಲು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2022, 18:25 IST
Last Updated 21 ಏಪ್ರಿಲ್ 2022, 18:25 IST
   

ಮುಂಬೈ: ಕೊನೆಯ ಹಂತದಲ್ಲಿ ಮಹೇಂದ್ರ ಸಿಂಗ್ ಧೋನಿ ಸಿಡಿಲಬ್ಬರದ ಬ್ಯಾಟಿಂಗ್ (28*) ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಗುರುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಮೂರು ವಿಕೆಟ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಈ ಮೂಲಕ ಟೂರ್ನಿಯಲ್ಲಿ ಚೆನ್ನೈ ಎರಡನೇ ಗೆಲುವು ದಾಖಲಿಸಿದೆ. ಇನ್ನೊಂದೆಡೆ ಸತತ ಏಳನೇ ಸೋಲಿಗೆ ಶರಣಾಗಿರುವ ಮುಂಬೈ, ಟೂರ್ನಿಯಿಂದಲೇ ಬಹುತೇಕ ನಿರ್ಗಮನದ ಹಾದಿ ಹಿಡಿದಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿದ ಮುಂಬೈ, ತಿಲಕ್ ವರ್ಮಾ ಸಮಯೋಚಿತ ಅರ್ಧಶತಕದ (51*) ನೆರವಿನಿಂದ ಏಳು ವಿಕೆಟ್ ನಷ್ಟಕ್ಕೆ 155ರನ್ ಗಳಿಸಿತ್ತು. ಚೆನ್ನೈ ಪರ ಮುಕೇಶ್ ಚೌಧರಿ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ADVERTISEMENT

ಬಳಿಕ ಗುರಿ ಬೆನ್ನತ್ತಿದ ಚೆನ್ನೈ ಒಂದು ಹಂತದಲ್ಲಿ ಸೋಲಿನ ಭೀತಿಗೆ ಒಳಗಾಗಿತ್ತು. ಅಲ್ಲದೆ ಅಂತಿಮ ಓವರ್‌ನಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಆದರೆ ಗತಕಾಲದ ವೈಭವ ಮರುಕಳಿಸಿದ ಧೋನಿ, ಎರಡು ಬೌಂಡರಿ ಹಾಗೂ ಸಿಕ್ಸರ್ ಬಾರಿಸುವ ಮೂಲಕ ಚೆನ್ನೈಗೆ ರೋಚಕ ಗೆಲುವು ಒದಗಿಸಿಕೊಟ್ಟರು.

ಕೇವಲ 13 ಎಸೆತಗಳನ್ನು ಎದುರಿಸಿದ ಧೋನಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 28 ರನ್ ಗಳಿಸಿ ಔಟಾಗದೆ ಉಳಿದರು.

ಮುಂಬೈ ತರಹನೇ ಚೆನ್ನೈ ಆರಂಭ ಉತ್ತಮವಾಗಿರಲಿಲ್ಲ. ಋತುರಾಜ್ ಗಾಯಕವಾಡ್ ಖಾತೆ ತೆರೆಯುವ ಮುನ್ನವೇ ಪೆವಿಲಿಯನ್ ಸೇರಿದರು. ಮಿಚೆಲ್ ಸ್ಯಾಂಟ್ನರ್ (11) ಕೂಡ ಬೇಗನೇ ನಿರ್ಗಮಿಸಿದರು.

ಅನುಭವಿ ರಾಬಿನ್ ಉತ್ತಪ್ಪ ಹಾಗೂ ಅಂಬಟಿ ರಾಯುಡು ಮಹತ್ವದ ಅರ್ಧಶತಕದ ಜೊತೆಯಾಟದಲ್ಲಿ ಭಾಗಿಯಾದರು.

ಉತ್ತಮವಾಗಿ ಆಡುತ್ತಿದ್ದ ಉತ್ತಪ್ಪ (30), ಅಂಬಟಿ ರಾಯುಡು (40) ಹಾಗೂ ಶಿವಂ ದುಬೆ (13) ಔಟ್ ಆಗುವುದರೊಂದಿಗೆ ಪಂದ್ಯ ರೋಚಕ ಹಂತವನ್ನು ತಲುಪಿತು.

ಗಾಯಕವಾಡ್, ಸ್ಯಾಂಟ್ನರ್, ದುಬೆ ಹಾಗೂ ರಾಯುಡು ವಿಕೆಟ್ ಗಳಿಸಿದ ಡ್ಯಾನಿಯಲ್ ಸ್ಯಾಮ್ಸ್ (30ಕ್ಕೆ 4 ವಿಕೆಟ್) ಮಾರಕವಾಗಿ ಕಾಡಿದರು.

ನಾಯಕ ರವೀಂದ್ರ ಜಡೇಜ (3) ಕಳಪೆ ಬ್ಯಾಟಿಂಗ್ ಮುಂದುವರಿಸಿದರು.

ಆದರೆ ಕೊನೆಯ ಹಂತದಲ್ಲಿ ಧೋನಿ ಹಾಗೂ ಡ್ವೇನ್ ಪ್ರೆಟೋರಿಯಸ್ (22) ಪಂದ್ಯದ ಚಿತ್ರಣವನ್ನೇ ಬದಲಿಸಿದರು.

ಜೈದೇವ್ ಉನಾದ್ಕಟ್ ಅಂತಿಮ ಓವರ್‌ನಲ್ಲಿ ಧೋನಿ, ತಾವೇಕೆ ನೈಜ ಫಿನಿಶರ್ ಎಂಬುದನ್ನು ಮಗದೊಮ್ಮೆ ಸಾಬೀತು ಮಾಡಿದರು. ಅಲ್ಲದೆ ಕೊನೆಯ ಎಸೆತವನ್ನು ಬೌಂಡರಿಗೆ ಅಟ್ಟುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿದರು.

ತಿಲಕ್ ಅಮೋಘ ಆಟ...

ತಿಲಕ್ ವರ್ಮಾ ಸಮಯೋಚಿತ ಅರ್ಧಶತಕದ (51*) ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಏಳು ವಿಕೆಟ್ ನಷ್ಟಕ್ಕೆ 155ರನ್ ಗಳಿಸಿತ್ತು.

ಚೆನ್ನೈ ಪರ ಮುಕೇಶ್ ಚೌಧರಿ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಮೊದಲ ಓವರ್‌ನಲ್ಲೇ ನಾಯಕ ರೋಹಿತ್ ಶರ್ಮಾ (0) ಹಾಗೂ ಇಶಾನ್ ಕಿಶನ್ (0) ವಿಕೆಟ್ ಕಬಳಿಸಿದ ಮುಕೇಶ್ ಚೌಧರಿ ಡಬಲ್ ಆಘಾತ ನೀಡಿದರು. ಬೆನ್ನಲ್ಲೇ ಡೆವಾಲ್ಡ್ ಬ್ರೆವಿಸ್ (4) ಅವರಿಗೂ ಮುಕೇಶ್ ಪೆವಿಲಿಯನ್ ಹಾದಿ ತೋರಿಸಿದರು.

ಸೂರ್ಯಕುಮಾರ್ ಯಾದವ್ (32) ಉತ್ತಮ ಆಟ ಪ್ರದರ್ಶಿಸಿದರೂ ದೊಡ್ಡ ಹೊಡೆತಕ್ಕೆ ಮುಂದಾಗಿ ಔಟ್ ಆದರು.

ಚೊಚ್ಚಲ ಪಂದ್ಯ ಆಡುತ್ತಿರುವ ಹೃತಿಕ್ ಶೋಕಿನ್ (25) ಪ್ರಭಾವಿ ಎನಿಸಿದರು. ಅನುಭವಿ ಕೀರಾನ್ ಪೊಲಾರ್ಡ್ (14) ಹೆಚ್ಚು ಹೊತ್ತು ನಿಲ್ಲನಿಲ್ಲ.

ಇನ್ನೊಂದೆಡೆ ಕೆಚ್ಚೆದೆಯ ಹೋರಾಟ ತೋರಿದ ತಿಲಕ್ ವರ್ಮಾ 42 ಎಸೆತಗಳಲ್ಲಿ ಅರ್ಧಶತಕ ಗಳಿಸಿ ಮುಂಬೈ ತಂಡವನ್ನು ಸ್ಪರ್ಧಾತ್ಮಕ ಮೊತ್ತದತ್ತ ಮುನ್ನಡೆಸಿದರು.

ಅಂತಿಮವಾಗಿ ಮುಂಬೈ ವಿಕೆಟ್ ಏಳು ನಷ್ಟಕ್ಕೆ 155 ರನ್ ಗಳಿಸಿತು. 43 ಎಸೆತಗಳನ್ನು ಎದುರಿಸಿದ ತಿಲಕ್ ವರ್ಮಾ 51 ರನ್ (3 ಬೌಂಡರಿ, 2 ಸಿಕ್ಸರ್) ಗಳಿಸಿ ಅಜೇಯರಾಗುಳಿದರು.

ಅವರಿಗೆ ಉತ್ತಮ ಸಾಥ್ ನೀಡಿದ ಜೈದೇವ್ ಉನಾದ್ಕಟ್ 19 ರನ್ (9 ಎಸೆತ, 1 ಬೌಂಡರಿ, 1 ಸಿಕ್ಸರ್) ಗಳಿಸಿ ಔಟಾಗದೆ ಉಳಿದರು.

ಚೆನ್ನೈ ಫೀಲ್ಡಿಂಗ್... ಈ ಮೊದಲು ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ರವೀಂದ್ರ ಜಡೇಜ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.


ಗುರುವಾರ ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯವು ಇತ್ತಂಡಗಳ ಪಾಲಿಗೆ ಇದು ಅಳಿವು-ಉಳಿವಿನ ಪಂದ್ಯವಾಗಿ ಮಾರ್ಪಟ್ಟಿದೆ. ಈ ಬಾರಿಯ ಐಪಿಎಲ್‌ನಲ್ಲಿ ಗೆಲುವಿನ ಖಾತೆಯನ್ನೇ ತೆರೆಯದ ಮುಂಬೈ ಇಂಡಿಯನ್ಸ್ ಸತತ ಆರು ಪಂದ್ಯಗಳಲ್ಲಿ ಸೋಲಿನ ಮುಖಭಂಗಕ್ಕೊಳಗಾಗಿದೆ. ಇನ್ನೊಂಡೆದೆ ಚೆನ್ನೈ, ಆರರಲ್ಲಿ ಐದು ಪಂದ್ಯಗಳಲ್ಲಿ ಸೋಲಿಗೆ ಶರಣಾಗಿದೆ.

ಹಾಲಿ ಚಾಂಪಿಯನ್ ಚೆನ್ನೈ ತಂಡವು ಟೂರ್ನಿಯಲ್ಲಿ ತನ್ನ ಮೊದಲ ನಾಲ್ಕು ಪಂದ್ಯಗಳಲ್ಲಿ ಸತತ ಸೋಲು ಅನುಭವಿಸಿತ್ತು. ಐದನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜಯಿಸಿತ್ತು. ಆದರೆ ನಂತರದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಎದುರು ಮುಗ್ಗರಿಸಿತ್ತು. ಇದೀಗ ಮತ್ತೆ ಜಯದ ಹಾದಿ ಹಿಡಿಯುವ ತವಕದಲ್ಲಿದೆ.

ರವೀಂದ್ರ ಜಡೇಜ ನಾಯಕತ್ವದ ತಂಡದಲ್ಲಿ ಋತುರಾಜ್ ಗಾಯಕವಾಡ್ ಲಯಕ್ಕೆ ಮರಳಿರುವುದು ಸಮಾಧಾನಕರ ಸಂಗತಿ. ರಾಬಿನ್ ಉತ್ತಪ್ಪ, ಅಂಬಟಿ ರಾಯುಡು, ಶಿವಂ ದುಬೆ ಮತ್ತು ಮಹೇಂದ್ರಸಿಂಗ್ ಧೋನಿ ರನ್‌ಗಳ ಕಾಣಿಕೆ ನೀಡುತ್ತಿದ್ದಾರೆ. ಬೌಲಿಂಗ್‌ನಲ್ಲಿ ದೀಪಕ್ ಚಾಹರ್ ಕೊರತೆ ಕಾಡುತ್ತಿದೆ. ಕ್ರಿಸ್ ಜೋರ್ಡಾನ್, ಮೋಯಿನ್ ಅಲಿ ಮತ್ತು ಬ್ರಾವೊ ಅವರ ಮೇಲೆ ನಿರೀಕ್ಷೆಯ ಭಾರವಿದೆ.

ನಾಯಕ ರೊಹಿತ್ ಶರ್ಮಾ, ಇಶಾನ್ ಕಿಶನ್, ಡಿವಾಲ್ಡ್‌ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಕೀರನ್ ಪೊಲಾರ್ಡ್ ಮುಂಬೈನ ಸ್ಪೋಟಕ ಶೈಲಿಯ ಬ್ಯಾಟರ್‌ಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.