ADVERTISEMENT

IPL 2023: ಉಳಿದಿರುವುದು ಎರಡು ಪಂದ್ಯ; ಆರ್‌ಸಿಬಿ ಪ್ಲೇ-ಆಫ್ ಪ್ರವೇಶ ಸಾಧ್ಯವೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮೇ 2023, 10:47 IST
Last Updated 18 ಮೇ 2023, 10:47 IST
ವಿರಾಟ ಕೊಹ್ಲಿ ಹಾಗೂ ಫಫ್ ಡುಪ್ಲೆಸಿ
ವಿರಾಟ ಕೊಹ್ಲಿ ಹಾಗೂ ಫಫ್ ಡುಪ್ಲೆಸಿ   

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ 2023ನೇ ಸಾಲಿನ ಟ್ವೆಂಟಿ-02 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ಲೇ-ಆಫ್ ಹಂತಕ್ಕೆ ಪ್ರವೇಶಿಸಲಿದೆಯೇ ಎಂಬುದು ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿ, ಈವರೆಗೆ ಆಡಿರುವ 12 ಪಂದ್ಯಗಳಲ್ಲಿ ತಲಾ ಆರು ಗೆಲುವು-ಸೋಲಿನೊಂದಿಗೆ ಒಟ್ಟು 12 ಅಂಕಗಳನ್ನು ಸಂಪಾದಿಸಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.

ಹಾಗಾಗಿ ಪ್ಲೇ-ಆಫ್ ಹಂತಕ್ಕೆ ತಲುಪಲು ಅಂತಿಮ ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿದೆ.

ADVERTISEMENT

ಫಫ್ ಡುಪ್ಲೆಸಿ ನಾಯಕತ್ವದ ಆರ್‌ಸಿಬಿ, ಕೊನೆಯ ಎರಡು ಲೀಗ್ ಪಂದ್ಯಗಳಲ್ಲಿ ಮೇ 18ರಂದು (ಇಂದು) ಸನ್‌ರೈಸರ್ಸ್ ಹೈದರಾಬಾದ್ ಮತ್ತು ಮೇ 21ರಂದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್ ಸವಾಲನ್ನು ಎದುರಿಸಲಿದೆ.

ಈ ಪೈಕಿ ಇಂದಿನ ಪಂದ್ಯ ಹೈದಾರಾಬಾದ್‌ನಲ್ಲಿ ನಡೆಯಲಿದೆ. ಆದರೆ ಕೊನೆಯ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತವರಿನ ಪ್ರೇಕ್ಷಕರ ಮುಂದೆ ಆಡಲಿದೆ.

ಉತ್ತಮ ರನ್‌ರೇಟ್ (+0.166) ಕಾಯ್ದುಕೊಂಡಿರುವುದು ಆರ್‌ಸಿಬಿ ಪಾಲಿಗೆ ನೆರವಾಗಲಿದೆ. ಹಾಗಾಗಿ ಇನ್ನೊಂದು ಪಂದ್ಯದಲ್ಲಿ ಸೋತರೂ ಉತ್ತಮ ರನ್‌ರೇಟ್ ಕಾಯ್ದುಕೊಳ್ಳಬೇಕಿದೆ. ಹೀಗಾದ್ದಲ್ಲಿ ಉಳಿದ ತಂಡಗಳ ಫಲಿತಾಂಶವನ್ನು ಅವಲಂಬಿಸಬೇಕಿದೆ.

ಸದ್ಯ (64ನೇ ಪಂದ್ಯದ ಅಂತ್ಯಕ್ಕೆ) 13 ಪಂದ್ಯಗಳಲ್ಲಿ 18 ಅಂಕಗಳೊಂದಿಗೆ ಗುಜರಾತ್, ಅಗ್ರಸ್ಥಾನದಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಖನೌ ಸೂಪರ್ ಜೈಂಟ್ಸ್ 13 ಪಂದ್ಯಗಳಲ್ಲಿ ತಲಾ 15 ಅಂಕಗಳನ್ನು ಕಲೆ ಹಾಕಿದ್ದು, ರನ್‌ರೇಟ್ ಆಧಾರದಲ್ಲಿ ಅನುಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನಗಳನ್ನು ಕಾಪಾಡಿಕೊಂಡಿದೆ. ನಾಲ್ಕನೇ ಸ್ಥಾನದಲ್ಲಿರುವ ಮುಂಬೈ 13 ಪಂದ್ಯಗಳಲ್ಲಿ 14 ಅಂಕ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.