ADVERTISEMENT

ನಾನು ಅಮಾಯಕ ತುಷಾರ್‌ ಅರೋಠೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2019, 20:29 IST
Last Updated 3 ಏಪ್ರಿಲ್ 2019, 20:29 IST
ತುಷಾರ್ ಅರೋತೆ
ತುಷಾರ್ ಅರೋತೆ   

ಮುಂಬೈ/ ವಡೋದರಾ: ಐಪಿಎಲ್‌ ಪಂದ್ಯದ ವೇಳೆ ಬೆಟ್ಟಿಂಗ್‌ ನಡೆಸಿದ ಆರೋಪದ ಮೇಲೆ ಸೋಮವಾರ ಬಂಧಿತರಾಗಿದ್ದಮಹಿಳಾ ಕ್ರಿಕೆಟ್‌ ತಂಡದ ಮಾಜಿ ತರಬೇತುದಾರ ತುಷಾರ್ ಅರೋಠೆ ಅವರು ಜಾಮೀನಿನ ಮೇಲೆ ಬುಧವಾರಬಿಡುಗಡೆಯಾಗಿದ್ದಾರೆ.

ಬಳಿಕ ಮಾತನಾಡಿದ ಅವರು, ‘ನಾನು ಅಮಾಯಕ. ಕ್ರಿಕೆಟ್‌ ನನಗೆ ಅನ್ನನೀಡಿದೆ. ಇಂದು ನಾನು ಏನು ಆಗಿದ್ದೇನೋ ಅದಕ್ಕೆಲ್ಲವೂ ಕ್ರಿಕೆಟ್‌ ಕಾರಣ, ನಾನು ಎಂದಿಗೂ ಇಂತಹ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ, ನಾನು ಎಂದಿಗೂ ಕ್ರಿಕೆಟ್‌ಗೆ ಮೋಸ ಮಾಡಿಲ್ಲ’ ಎಂದು ತಿಳಿಸಿದ್ದಾರೆ.

‘ನಾನು ಆ ರೀತಿ (ಬೆಟ್ಟಿಂಗ್‌) ಮಾಡುತ್ತೇನೆ ಎಂಬುದನ್ನು ಪಕ್ಕಕ್ಕಿಡಿ, ಆ ರೀತಿ ಆಲೋಚಿಸಲು ಸಾಧ್ಯವಿಲ್ಲ’ ಎಂದರು.

ADVERTISEMENT

ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಕಿಂಗ್ಸ್‌ ಪಂಜಾಬ್‌ ನಡುವೆ ಮೊಹಾಲಿಯಲ್ಲಿ ನಡೆಯುತ್ತಿದ್ದ ಪಂದ್ಯದ ವೇಳೆ ಬೆಟ್ಟಿಂಗ್‌ ನಡೆಸುತ್ತಿದ್ದ ಖಚಿತ ಮಾಹಿತಿ ಪಡೆದ ವಡೋದರಾ ಕ್ರೈಬ್ರಾಂಚ್‌ ಪೊಲೀಸರು ದಾಳಿ ನಡೆಸಿ ತುಷಾರ್ ಹಾಗೂ 18 ಮಂದಿಯನ್ನು ಬಂಧಿಸಿದ್ದರು.

‘52 ವರ್ಷದ ತುಷಾರ್‌ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ’ ಎಂದು ವಡೋದರಾ ಪೊಲೀಸ್‌ ಆಯುಕ್ತ ಅನೂಪ್‌ಸಿಂಗ್‌ ಗೆಹ್ಲೋತ್‌ ತಿಳಿಸಿದರು.

ತುಷಾರ್‌ ಅವರು ಬರೋಡಾ ತಂಡದ ಪರ 114 ಪಂದ್ಯಗಳನ್ನು ಆಡಿದ್ದಾರೆ. ಅವರ ಮಗ ರಿಷಿ ಕೂಡ ಬರೋಡಾ ತಂಡದ ಎಡಗೈ ಬೌಲರ್‌ ಆಗಿದ್ದಾರೆ.

ಭಾರತದ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್‌ ಜೊತೆಗಿನ ಭಿನ್ನಾಭಿಪ್ರಾಯದಿಂದ ತುಷಾರ್‌ ಅರೋತೆ ಅವರು ಮಹಿಳಾ ಕ್ರಿಕೆಟ್‌ ತಂಡದ ತರಬೇತುದಾರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಇವರ ಮಾರ್ಗದರ್ಶನದಲ್ಲೇ ಭಾರತದ ಮಹಿಳಾ ತಂಡ 2017ರ ವಿಶ್ವಕಪ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.