ADVERTISEMENT

ಐಪಿಎಲ್ ಹಣೆಬರಹ ಇಂದು ನಿರ್ಧಾರ?

ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಅಂತಿಮ ನಿರ್ಧಾರ ಘೋಷಿಸುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 19:45 IST
Last Updated 12 ಏಪ್ರಿಲ್ 2020, 19:45 IST
ಐಪಿಎಲ್ ಚಿಯರ್ ಲೀಡರ್ಸ್ ಸಂಭ್ರಮ
ಐಪಿಎಲ್ ಚಿಯರ್ ಲೀಡರ್ಸ್ ಸಂಭ್ರಮ   

ಬೆಂಗಳೂರು: ದಿನದಿಂದ ದಿನಕ್ಕೆ ಕೊರೊನಾ ವೈರಸ್‌ ಹಾವಳಿಯು ಉಲ್ಬಣಿಸುತ್ತಿದೆ. ಅದಕ್ಕಾಗಿ ಲಾಕ್‌ಡೌನ್‌ ಅನ್ನು ಮತ್ತೆ ಹದಿನೈದು ದಿವಸ ಮುಂದುವರಿಸಲು ಸರ್ಕಾರ ಚಿತ್ತ ನೆಟ್ಟಿದೆ.

ಇದರಿಂದಾಗಿ ಏಪ್ರಿಲ್ 15ರಿಂದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು ನಡೆಯುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಆದರೆ ಮಿಲಿಯನ್ ಡಾಲರ್‌ ಬೇಬಿಯಾಗಿರುವ ಈ ಟೂರ್ನಿಯನ್ನು ಮುಂದೂಡಲಾಗುವುದೋ ಅಥವಾ ರದ್ದು ಮಾಡಲಾಗುವುದೋ ಎಂಬ ಕುತೂಹಲ ಗರಿಗೆದರಿದೆ. ಸೋಮವಾರ ಈ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಅಂತಿಮ ನಿರ್ಧಾರ ಘೋಷಿಸುವ ಸಾಧ್ಯತೆ ಇದೆ.

ಪೂರ್ವ ನಿಗದಿಯಂತೆ ಮಾರ್ಚ್ 29ರಿಂದ ಟೂರ್ನಿ ಆರಂಭವಾಗ ಬೇಕಿತ್ತು. ಆದರೆ ಲಾಕ್‌ಡೌನ್ ಆಗಿ ದ್ದರಿಂದ ಏಪ್ರಿಲ್ 15ರವರೆಗೆ ಟೂರ್ನಿಯನ್ನು ಮುಂದೂಡಲಾಗಿತ್ತು.

ADVERTISEMENT

‘ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ ತಿಂಗಳಲ್ಲಿ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಆದರೆ ವಿಶ್ವದಲ್ಲಿರುವ ಈಗಿನ ಅನಿಶ್ಚಿತ ಪರಿಸ್ಥಿತಿಯನ್ನು ನೋಡಿದರೆ ಆ ಟೂರ್ನಿಯನ್ನು ಮುಂದಿನ ವರ್ಷಕ್ಕೆ ಮುಂದೂಡುವ ಎಲ್ಲ ಸಾಧ್ಯತೆಗಳೂ ಇವೆ. ಆ ವೇಳೆಗೆ ಭಾರತದಲ್ಲಿ ಪರಿಸ್ಥಿತಿ ಸುಧಾರಿಸುವ ವಿಶ್ವಾಸವಿದೆ. ಆದ್ದರಿಂದ ಅಕ್ಟೋಬರ್ ತಿಂಗಳಲ್ಲಿ ಪಂದ್ಯಗಳನ್ನು ಕಡಿಮೆ ಮಾಡಿಕೊಂಡಾದರೂ ಐಪಿಎಲ್ ಟೂರ್ನಿ ನಡೆಸುವ ಯೋಚನೆಯಲ್ಲಿ ಬಿಸಿಸಿಐ ಇದೆ’ ಎಂದು ಮಂಡಳಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅಲ್ಲದೇ ಪ್ರೇಕ್ಷಕರಿಲ್ಲದ ಕ್ರೀಡಾಂಗಣ ಮತ್ತು ಚುಟುಕು ವೇಳಾಪಟ್ಟಿಯಲ್ಲಿ ನಡೆಸುವಂತೆ ಬೇರೆ ಬೇರೆ ದೇಶಗಳ ಕ್ರಿಕೆಟಿಗರು ಈಗಾಗಲೇ ಒತ್ತಾಯ ಮಾಡುತ್ತಿದ್ದಾರೆ. ಸುಮಾರು ₹50 ಸಾವಿರ ಕೋಟಿ ಬ್ರ್ಯಾಂಡ್ ಮೌಲ್ಯ ಹೊಂದಿರುವ ಟೂರ್ನಿಯು ಸಂಪೂರ್ಣ ರದ್ದಾದರೆ ದೊಡ್ಡ ನಷ್ಟದ ಆತಂಕವಿದೆ. ಆದರೆ ಅಕ್ಟೋಬರ್ –ನವೆಂಬರ್‌ನಲ್ಲಿ ಟೂರ್ನಿ ನಡೆದರೆ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಅಭಿಪ್ರಾಯಗಳನ್ನು ಫ್ರ್ಯಾಂಚೈಸ್‌ಗಳಿಂದ ವ್ಯಕ್ತವಾಗುತ್ತಿವೆ ಎನ್ನಲಾಗಿದೆ.

ಇದರಿಂದಾಗಿ ತೀವ್ರ ಒತ್ತಡದಲ್ಲಿರುವ ಬಿಸಿಸಿಐ ನಿರ್ಧಾರ ಕೈಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.