ADVERTISEMENT

ಪಡಿಕ್ಕಲ್, ಪೃಥ್ವಿಗೆ ಆಯ್ಕೆ ಸಮಿತಿ ಅಡ್ಡಗಾಲು?

ಶುಭಮನ್ ಗಿಲ್‌ ಗಾಯಗೊಂಡಾಗ ಅಭಿಮನ್ಯು ಈಶ್ವರನ್ ಅವರನ್ನು ಇಂಗ್ಲೆಂಡ್‌ಗೆ ಕಳುಹಿಸಲು ಆಸಕ್ತಿ

ಪಿಟಿಐ
Published 5 ಜುಲೈ 2021, 13:55 IST
Last Updated 5 ಜುಲೈ 2021, 13:55 IST
ದೇವದತ್ತ ಪಡಿಕ್ಕಲ್
ದೇವದತ್ತ ಪಡಿಕ್ಕಲ್   

ನವದೆಹಲಿ: ಯುವ ಬ್ಯಾಟ್ಸ್‌ಮನ್‌ಗಳಾದ ದೇವದತ್ತ ಪಡಿಕ್ಕಲ್ ಮತ್ತು ಪೃಥ್ವಿ ಶಾ ಅವರನ್ನು ಇಂಗ್ಲೆಂಡ್‌ಗೆ ಕರೆಸಿಕೊಳ್ಳಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮುಂದಾಗಿದ್ದರೂ ಅದರ ಆಶಯಯಕ್ಕೆ ಆಯ್ಕೆ ಸಮಿತಿ ಅಡ್ಡಗಾಲು ಹಾಕಿತ್ತು ಎಂಬ ಬಗ್ಗೆ ವದಂತಿಗಳು ಎದ್ದಿವೆ.

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಆಡಿದ ಭಾರತ ತಂಡ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗಾಗಿ ಇಂಗ್ಲೆಂಡ್‌ನಲ್ಲೇ ಉಳಿದುಕೊಂಡಿದೆ. ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಕಳೆದ ವಾರ ಗಾಯಗೊಂಡ ಕಾರಣ ಅವರ ಬದಲಿಗೆ ಬಂಗಾಳದ ಅಭಿಮನ್ಯು ಈಶ್ವರನ್ ಅವರನ್ನು ಕರೆಸಿಕೊಳ್ಳಲು ನಿರ್ಧರಿಸಲಾಗಿತ್ತು. 2019–20ನೇ ಸಾಲಿನ ರಣಜಿ ಟೂರ್ನಿಯಲ್ಲೂ ನ್ಯೂಜಿಲೆಂಡ್ ಪ್ರವಾಸದಲ್ಲೂ ನೀರಸ ಆಟವಾಡಿದ ಅಭಿಮನ್ಯುಗೆ ಅವಕಾಶ ನೀಡಿದ್ದು ಕ್ರಿಕೆಟ್ ವಲಯದ ಅಚ್ಚರಿಗೆ ಕಾರಣವಾಗಿತ್ತು.

ಪಡಿಕ್ಕಲ್ ಮತ್ತು ಪೃಥ್ವಿ ಅವರನ್ನು ಇಂಗ್ಲೆಂಡ್‌ಗೆ ಕಳುಹಿಸಲು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ವಿರೋಧ ವ್ಯಕ್ತಪಡಿಸಿದ್ದರಿಂದ ಅಭಿಮನ್ಯು ಹಾದಿ ಸುಗಮವಾಗಿದೆ ಎನ್ನಲಾಗಿದೆ. ಅಭಿಮನ್ಯು ಈಶ್ವರನ್ಬಲಿಷ್ಠ ತಂಡದ ಎದುರಿನ ಟೆಸ್ಟ್ ಸರಣಿಯಲ್ಲಿ ಆಡುವಷ್ಟು ತಾಂತ್ರಿಕವಾಗಿ ಬಲಿಷ್ಠರಾಗಿದ್ದಾರೆಯೇ ಎಂಬ ಸಂದೇಹ ಕ್ರಿಕೆಟ್ ವಲಯದಲ್ಲಿ ಮೂಡತೊಡಗಿದೆ.

ADVERTISEMENT

‘ಇಬ್ಬರು ಆರಂಭಿಕ ಬ್ಯಾಟ್ಸ್‌ಮನ್‌ಗಳ ಅಗತ್ಯವಿದೆ ಎಂದು ತಂಡದ ಆಡಳಿತ ವಿಭಾಗದ ವ್ಯವಸ್ಥಾಪಕರು ಚೇತನ್ ಶರ್ಮಾ ಅವರಿಗೆ ಕಳೆದ ತಿಂಗಳ ಕೊನೆಯಲ್ಲಿ ಇ ಮೇಲ್ ಕಳುಹಿಸಿದ್ದರು. ಶುಭಮನ್ ಗಿಲ್ ಅವರ ಗಾಯದಿಂದ ತಂಡದ ಮೇಲೆ ಆಗಲಿರುವ ಗಂಭೀರ ಪರಿಣಾಮದ ಬಗ್ಗೆ ಗೊತ್ತಿದ್ದರೂ ತಂಡದ ಆಡಳಿತದ ಮನವಿಯನ್ನು ಚೇತನ್ ಶರ್ಮಾ ಗಂಭೀರವಾಗಿ ಪರಿಗಣಿಸಲಿಲ್ಲ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರಿಗಾಗಲಿ ಕಾರ್ಯದರ್ಶಿ ಹಾಗೂ ಆಯ್ಕೆ ಸಮಿತಿಯ ಸಂಚಾಲಕರಾಗಿರುವ ಜಯ್ ಶಾ ಅವರಿಗಾಗಲಿ ಈ ಕುರಿತು ಅಧಿಕೃತವಾಗಿ ಯಾರಿಂದಲೂ ಮನವಿ ಬಂದಿಲ್ಲ ಎನ್ನಲಾಗಿದೆ. ಪಡಿಕ್ಕಲ್ ಮತ್ತು ಶಾ ಸದ್ಯ ಶ್ರೀಲಂಕಾದಲ್ಲಿದ್ದಾರೆ. ಅಲ್ಲಿ ಏಕದಿನ ಮತ್ತು ಟಿ20 ಸರಣಿ ಮುಗಿದ ಕೂಡಲೇ ಇಂಗ್ಲೆಂಡ್‌ಗೆ ತೆರಳಬೇಕಾಗಿದೆ. ಭಾರತ ತಂಡ ಬಯೊಬಬಲ್ ಪ್ರವೇಶಿಸುವ ಮುನ್ನ ಅಲ್ಲಿರಬೇಕಾಗುತ್ತದೆ’ ಎಂದು ಅಧಿಕಾರಿ ವಿವರಿಸಿದರು.

ಚೇತನ್ ಶರ್ಮಾ ಕಳೆದ ತಿಂಗಳಲ್ಲೇ ಮುತುವರ್ಜಿ ವಹಿಸಿದ್ದರೆ ಪಡಿಕ್ಕಲ್ ಮತ್ತು ಶಾ ಈಗಾಗಲೇ ಇಂಗ್ಲೆಂಡ್ ತಲುಪಿರುತ್ತಿದ್ದರು ಮತ್ತು ಅಭ್ಯಾಸ ಪಂದ್ಯಗಳಲ್ಲಿ ಆಡಲು ಲಭ್ಯವಾಗುತ್ತಿದ್ದರು.

‘ಅಭಿಮನ್ಯು ಈಶ್ವರನ್ ಅವರನ್ನು ಪೃಥ್ವಿ ಶಾ ಜೊತೆ ಹೋಲಿಕೆ ಮಾಡಲಾಗದು. ಶಾ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅವರನ್ನು ಎರಡನೇ ತಂಡದೊಂದಿಗೆ ಶ್ರೀಲಂಕಾಕ್ಕೆ ಕಳುಹಿಸುವ ಬದಲು ಟೆಸ್ಟ್ ಆಡಲು ಇಂಗ್ಲೆಂಡ್‌ಗೆ ಕಳುಹಿಸಬೇಕಾಗಿತ್ತು’ ಎಂದು ರಾಷ್ಟ್ರೀಯ ತಂಡದ ಮಾಜಿ ಮುಖ್ಯಸ್ಥರೊಬ್ಬರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.