ADVERTISEMENT

ಆ್ಯಷಸ್‌ ಟೆಸ್ಟ್‌: ಜೇಕಬ್ ಬೆಥೆಲ್ ಚೊಚ್ಚಲ ಶತಕ

ಇಂಗ್ಲೆಂಡ್ ಹೋರಾಟ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 20:26 IST
Last Updated 7 ಜನವರಿ 2026, 20:26 IST
ಚೊಚ್ಚಲ ಶತಕದ ಸಂಭ್ರಮದಲ್ಲಿ ಜೇಕಬ್ ಬೆಥೆಲ್‌
ಎಪಿ/ಪಿಟಿಐ ಚಿತ್ರ
ಚೊಚ್ಚಲ ಶತಕದ ಸಂಭ್ರಮದಲ್ಲಿ ಜೇಕಬ್ ಬೆಥೆಲ್‌ ಎಪಿ/ಪಿಟಿಐ ಚಿತ್ರ   

ಸಿಡ್ನಿ : ಜೇಕಬ್ ಬೆಥೆಲ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಬುಧವಾರ ತಮ್ಮ ಮೊದಲ ಶತಕ ಬಾರಿಸಿದರು. ಆ ಮೂಲಕ ಆ್ಯಷಸ್‌ ಟೆಸ್ಟ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ಹೋರಾಟಕ್ಕೆ ಹೆಗಲು ನೀಡಿದರು. ಆದರೆ ಆಸ್ಟ್ರೇಲಿಯಾ ತಂಡ 4–1 ರಿಂದ ಸರಣಿ ಗೆಲ್ಲುವುದನ್ನು ತಡೆಯಲು ಇಂಗ್ಲೆಂಡ್ ಮುಂದೆ ಕಠಿಣ ಹಾದಿಯಿದೆ.

ಬೆಥೆಲ್ ಅಜೇಯ 142 ರನ್ ಹೊಡೆದಿದ್ದು, ಇಂಗ್ಲೆಂಡ್ 8 ವಿಕೆಟ್‌ಗೆ 302 ರನ್‌ ಗಳಿಸಿ ನಾಲ್ಕನೇ ದಿನದಾಟವನ್ನು ಪೂರೈಸಿತು. ಇದಕ್ಕೆ ಮೊದಲು ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ನಲ್ಲಿ 567 ರನ್ ಗಳಿಸಿತ್ತು. ಆ ಮೂಲಕ 183 ರನ್‌ಗಳ ಮೊದಲ ಇನಿಂಗ್ಸ್ ಮುನ್ನಡೆ ಗಳಿಸಿತ್ತು.

ಕೊನೆಯ ದಿನದ ಆಟ ಬಾಕಿವುಳಿದಿರುವಂತೆ ಇಂಗ್ಲೆಂಡ್‌ 119 ರನ್‌ಗಳ ಮುನ್ನಡೆಯನ್ನಷ್ಟೇ ಹೊಂದಿದೆ. ತೊಡೆಯ ನೋವಿನಿಂದ ಬೆನ್‌ ಸ್ಟೋಕ್ಸ್‌ ಕೊನೆಯ ದಿನ ಬೌಲಿಂಗ್ ಮಾಡುವ ಸಾಧ್ಯತೆ ಕಡಿಮೆಯಿದ್ದು, ಇಂಗ್ಲೆಂಡ್ ಪಂದ್ಯ ಉಳಿಸಲು ಹರಸಾಹಸಪಡಬೇಕಾಗಿದೆ.

ADVERTISEMENT

ಓಲಿ ಪೋಪ್‌ ಬದಲು ನಾಲ್ಕನೇ ಟೆಸ್ಟ್‌ನಿಂದ ಆಡುವ ಅವಕಾಶ ಪಡೆದ ಬೆಥೆಲ್ ಇಂಗ್ಲೆಂಡ್ ತಂಡದ ಇನಿಂಗ್ಸ್‌ಗೆ ಲಂಗರು ಹಾಕಿಸಿದರು. ಬಾರ್ಬಾಡೋಸ್‌ ಸಂಜಾತ, 22 ವರ್ಷ ವಯಸ್ಸಿನ ಈ ಆಟಗಾರ ತಮ್ಮ ಮೇಲಿನ ಭರವಸೆ ಉಳಿಸಿಕೊಂಡರು. ಉಪಯುಕ್ತ ಜೊತೆಯಾಟಗಳ ಮೂಲಕ ತಂಡಕ್ಕೆ ಆಸರೆಯಾದರು.

ಆರಂಭ ಆಟಗಾರ ಬೆನ್ ಡಕೆಟ್‌ ಜೊತೆ 81 ರನ್‌ಗಳ ಜೊತೆಯಾಟವಾಡಿದರು. ನಂತರ ಹ್ಯಾರಿ ಬ್ರೂಕ್‌ ಜೊತೆ 102 ರನ್ ಮತ್ತು ಜೇಮಿ ಸ್ಮಿತ್ ಜೊತೆ 45 ರನ್ ಸೇರಿಸಿದರು. ಇದು ಬೆಥೆಲ್ ಅವರಿಗೆ ಆರನೇ ಟೆಸ್ಟ್‌ ಪಂದ್ಯವಾಗಿದೆ. 99 ರನ್‌ಗಳಿದ್ದಾಗ ಕೆಲ ಓವರುಗಳನ್ನು ಕಳೆದ ಅವರು ಬೌಂಡರಿಯೊಂದಿಗೆ ಶತಕದ ಮೈಲಿಗಲ್ಲು ದಾಟಿದರು.

ಆಸ್ಟ್ರೇಲಿಯಾ ಕಡೆ ಬ್ಯೂ ವೆಬ್‌ಸ್ಟರ್‌ 51 ರನ್ನಿಗೆ 3 ವಿಕೆಟ್ ಪಡೆದರೆ, ಸ್ಕಾಟ್‌ ಬೋಲ್ಯಾಂಡ್‌ 34 ರನ್ನಿಗೆ 2 ವಿಕೆಟ್‌ ಗಳಿಸಿದರು.

ಮಂಗಳವಾರ 7 ವಿಕೆಟ್‌ಗೆ 518 ರನ್ ಗಳಿಸಿದ್ದ ಆಸ್ಟ್ರೇಲಿಯಾ, ನಾಲ್ಕನೇ ದಿನ ಸ್ಟೀವ್ ಸ್ಮಿತ್ (138) ಅವರನ್ನು ಬೇಗನೇ ಕಳೆದುಕೊಂಡಿತು. ಸ್ಮಿತ್ ಮೂರನೇ ದಿನದ ಕೊನೆಗೆ ಅಜೇಯ 129 ರನ್ ಗಳಿಸಿದ್ದರು. ಆಲ್‌ರೌಂಡರ್ ಬ್ಯೂ ವೆಬ್‌ಸ್ಟರ್ ಔಟಾಗದೇ 71 ರನ್ ಬಾರಿಸಿದರು. ಸ್ಮಿತ್ ವಿಕೆಟ್‌ ಪಡೆದ ಟಂಗ್, ನಂತರ ಮಿಚೆಲ್ ಸ್ಟಾರ್ಕ್ ವಿಕೆಟ್ ಸಹ ಪಡೆದರು.

ಸ್ಕೋರುಗಳು: ಮೊದಲ ಇನಿಂಗ್ಸ್: ಇಂಗ್ಲೆಂಡ್: 384; ಆಸ್ಟ್ರೇಲಿಯಾ: 133.5 ಓವರುಗಳಲ್ಲಿ 567 (ಕ್ಯಾಮೆರಾನ್ ಗ್ರೀನ್ 37, ಬ್ಯೂ ವೆಬ್‌ಸ್ಟರ್‌ ಔಟಾಗದೇ 71; ಜೋಶ್ ಟಂಗ್ 97ಕ್ಕೆ3, ಬೆನ್‌ ಸ್ಟೋಕ್ಸ್ 95ಕ್ಕೆ2); ಎರಡನೇ ಇನಿಂಗ್ಸ್‌: ಇಂಗ್ಲೆಂಡ್: 75 ಓವರುಗಳಲ್ಲಿ 8 ವಿಕೆಟ್‌ಗೆ 302 (ಬೆನ್ ಡಕೆಟ್‌ 42, ಜೇಕಬ್ ಬೆಥೆಲ್ ಔಟಾಗದೇ 142, ಹ್ಯಾರಿ ಬ್ರೂಕ್ 42, ಜೇಮಿ ಸ್ಮಿತ್ 26; ಬೋಲ್ಯಾಂಡ್ 34ಕ್ಕೆ2, ವೆಬ್‌ಸ್ಟರ್ 51ಕ್ಕೆ3).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.