ADVERTISEMENT

ಕರ್ನಾಟಕದ ಮುಡಿಗೆ ‘ಚುಟುಕು ಕ್ರಿಕೆಟ್’ ಗರಿ

ಕ್ರಿಕೆಟ್; ರೋಹನ್ ಕದಂ, ಮಯಂಕ್ ಅಗರವಾಲ್ ಮಿಂಚು; ಪಾಂಡೆ ಬಳಗಕ್ಕೆ ಸೈಯದ್‌ ಮುಷ್ತಾಕ್ ಅಲಿ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 20:03 IST
Last Updated 14 ಮಾರ್ಚ್ 2019, 20:03 IST
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಚಾಂಪಿಯನ್‌ ಆದ ಕರ್ನಾಟಕ ತಂಡದ ಸಂಭ್ರಮ
ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಚಾಂಪಿಯನ್‌ ಆದ ಕರ್ನಾಟಕ ತಂಡದ ಸಂಭ್ರಮ   

ಇಂದೋರ್: ಹೋಳ್ಕರ್ ಕ್ರೀಡಾಂಗಣದಲ್ಲಿ ಗುರುವಾರ ರಾತ್ರಿ ಕಿಕ್ಕಿರಿದು ಸೇರಿದ್ದ ಕ್ರಿಕೆಟ್ ಅಭಿಮಾನಿಗಳ ಎದುರು ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟ್ವೆಂಟಿ–20 ಕ್ರಿಕೆಟ್ ಟ್ರೋಫಿಗೆ ಮುತ್ತಿಕ್ಕಿತು. ಇದೇ ಮೊದಲ ಬಾರಿ ದೇಶಿ ಕ್ರಿಕೆಟ್‌ನ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿತು.

ಇಡೀ ಟೂರ್ನಿಯಲ್ಲಿ ಸೋಲನ್ನೇ ಕಾಣದೇ ಅಜೇಯ ಆಟವಾಡಿದ ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಫೈನಲ್‌ನಲ್ಲಿಯೂ ಎಂಟು ವಿಕೆಟ್‌ಗಳಿಂದ ಗೆದ್ದಿತು. ರಣಜಿ ಕ್ರಿಕೆಟ್‌ನಲ್ಲಿ ಮೂರು, ವಿಜಯ್ ಹಜಾರೆ ಏಕದಿನ ಕ್ರಿಕೆಟ್‌ನಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಕರ್ನಾಟಕದ ಕೀರ್ತಿ ಕಿರೀಟಕ್ಕೆ ಈಗ ಚುಟುಕು ಕ್ರಿಕೆಟ್‌ನ ಚಿನ್ನದ ಗರಿಯೂ ಅಲಂಕರಿಸಿದಂತಾಗಿದೆ.

ಮೊದಲು ಬ್ಯಾಟಿಂಗ್ ಮಾಡಿದ ಮಹಾರಾಷ್ಟ್ರ ತಂಡವು ನೀಡಿದ್ದ 155 ರನ್‌ಗಳ ಗುರಿಯನ್ನು ಕರ್ನಾಟಕವು ಇನ್ನೂ ಒಂಬತ್ತು ಎಸೆತಗಳು ಬಾಕಿಯಿರುವಾಗಲೇ ಮುಟ್ಟಿತು. ಬೆಳಗಾವಿಯ ರೋಹನ್ ಕದಂ (60; 39ಎಸೆತ, 6ಬೌಂಡರಿ, 3ಸಿಕ್ಸರ್) ಮತ್ತು ಮಯಂಕ್ ಅಗರವಾಲ್ (ಔಟಾಗದೆ 85; 57ಎಸೆತ, 6ಬೌಂಡರಿ, 3 ಸಿಕ್ಸರ್) ಅವರ ಅಬ್ಬರದ ಅರ್ಧಶತಕಗಳಿಂದ ತಂಡವು 18.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 159 ರನ್ ಗಳಿಸಿತು.

ADVERTISEMENT

ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯ ಲೀಗ್ ಹಂತದಲ್ಲಿ ಕರ್ನಾಟಕ ತಂಡವು ನಿರಾಶೆ ಅನುಭವಿಸಿತ್ತು. ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ನಲ್ಲಿಯೂ ಮುಗ್ಗರಿಸಿತ್ತು. ಆದರೆ, ಈಗ ಟ್ವೆಂಟಿ–20 ಮಾದರಿಯಲ್ಲಿ ಮೊದಲ ಬಾರಿ ಪ್ರಶಸ್ತಿ ಗೆದ್ದು ಆ ನಿರಾಸೆಗಳನ್ನು ಬದಿಗೆ ಸರಿಸಿದೆ.

ಈ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಪೂರ್ಣಾವಧಿ ನಾಯಕನಾಗಿ ಮನೀಷ್ ಪಾಂಡೆ ತಂಡವನ್ನು ಮುನ್ನಡೆಸಿದರು. ಗುಂಪು, ಸೂಪರ್‌ ಲೀಗ್ ಮತ್ತು ಫೈನಲ್ ಸೇರಿ ಒಟ್ಟು 14 ಪಂದ್ಯಗಳಲ್ಲಿಯೂ ತಂಡ ಜಯಿಸಿತು. ಇದು ದೇಶಿ ಕ್ರಿಕೆಟ್‌ನ ಹೊಸ ದಾಖಲೆಯಾಗಿದೆ.

ರೋಹನ್–ಮಯಂಕ್ ಮಿಂಚು: ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಧ್ಯಮವೇಗಿ ಅಭಿಮನ್ಯು ಮಿಥುನ್ ಅವರು ಐದನೇ ಓವರ್‌ನಲ್ಲಿಯೇ ಖುತುರಾಜ್ ಗಾಯಕವಾಡ್ ಅವರ ವಿಕೆಟ್ ಕಬಳಿಸಿದರು. ಎಡಗೈ ಸ್ಪಿನ್ನರ್ ಜೆ. ಸುಚಿತ್ ಎಂಟನೇ ಓವರ್‌ನಲ್ಲಿ ವಿಜಯ್ ಜೋಲ್ ಅವರನ್ನು ಪೆವಿಲಿಯನ್‌ಗೆ ಕಳಿಸಿದರು.

ಆದರೆ, ನಾಯಕ ರಾಹುಲ್ ತ್ರಿಪಾಠಿ ಮತ್ತು ನೌಷಾದ್ ಶೇಖ್ (ಔಟಾಗದೆ 69) ನಾಲ್ಕನೇ ವಿಕೆಟ್‌ಗೆ 79 ರನ್‌ ಸೇರಿಸಿ ತಂಡಕ್ಕೆ ಹೋರಾಟದ ಮೊತ್ತ ಗಳಿಸಲು ನೆರವಾದರು.

ಗುರಿ ಬೆನ್ನಟ್ಟಿದ ಕರ್ನಾಟಕ ತಂಡದ ಆರಂಭ ಚೆನ್ನಾಗಿರಲಿಲ್ಲ. ಬಿ.ಆರ್. ಶರತ್ ಎರಡು ರನ್ ಗಳಿಸಿ ಔಟಾದರು. ಟೂರ್ನಿಯುದ್ದಕ್ಕೂ ಉತ್ತಮ ಕಾಣಿಕೆ ನೀಡಿರುವ ರೋಹನ್ ಜೊತೆಗೂಡಿದ ‘ರನ್‌ ಯಂತ್ರ’ ಮಯಂಕ್ ಏರಡನೇ ವಿಕೆಟ್‌ಗೆ 92 ರನ್‌ ಪೇರಿಸಿದರು.

ಎಡಗೈ ಬ್ಯಾಟ್ಸ್‌ಮನ್ ರೋಹನ್ ಮಹಾರಾಷ್ಟ್ರದ ಬೌಲರ್‌ಗಳನ್ನು ನಿರ್ಭಿಡೆಯಿಂದ ಎದುರಿಸಿದರು. ಅವರು ಗಳಿಸಿದ ಮೂರು ಸಿಕ್ಸರ್‌ಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಸಂಚಲನ ಮೂಡಿಸಿದವು.

13ನೇ ಓವರ್‌ನಲ್ಲಿ ಮತ್ತೊಂದು ಸಿಕ್ಸರ್‌ ಹೊಡೆಯಲು ಪ್ರಯತ್ನಿಸಿದ ರೋಹನ್ ಅವರು ವಿಜಯ್‌ ಜೋಲ್‌ಗೆ ಕ್ಯಾಚಿತ್ತರು. ಇನ್ನೊಂದು ಬದಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ಮಯಂಕ್ ತಮ್ಮ ಆಟಕ್ಕೆ ವೇಗ ನೀಡಿದರು.

ಅವರ ಆಟದ ಅಬ್ಬರಕ್ಕೆ ಬೌಲರ್‌ಗಳು ನಿರುತ್ತರರಾದರು. ಅವರ ರನ್‌ ಗಳಿಕೆಯಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳೇ ಹೆಚ್ಚು ಇದ್ದ ಕಾರಣ ಫೀಲ್ಡರ್‌ಗಳಿಗೂ ಹೆಚ್ಚು ಕೆಲಸ ಇರಲಿಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.