ADVERTISEMENT

ಬಿದ್ದ ನೆಲದಲ್ಲಿ ಪುಟಿದೇಳುವ ಛಲ

ರಣಜಿ ಟ್ರೋಫಿ ಕ್ರಿಕೆಟ್ ಸೆಮಿಫೈನಲ್ ಇಂದಿನಿಂದ: ಕರುಣ್ ಬಳಗಕ್ಕೆ ಬಂಗಾಳದ ಸವಾಲು; ರಾಹುಲ್‌ ಆಕರ್ಷಣೆ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2020, 19:49 IST
Last Updated 28 ಫೆಬ್ರುವರಿ 2020, 19:49 IST
ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಶುಕ್ರವಾರ ಅಭ್ಯಾಸಕ್ಕಾಗಿ ಸಿದ್ಧವಾಗುತ್ತಿರುವ ಕರ್ನಾಟಕದ ಕೆ.ಎಲ್. ರಾಹುಲ್ –ಪಿಟಿಐ ಚಿತ್ರ
ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಶುಕ್ರವಾರ ಅಭ್ಯಾಸಕ್ಕಾಗಿ ಸಿದ್ಧವಾಗುತ್ತಿರುವ ಕರ್ನಾಟಕದ ಕೆ.ಎಲ್. ರಾಹುಲ್ –ಪಿಟಿಐ ಚಿತ್ರ   

ಕೋಲ್ಕತ್ತ: ಎರಡು ವರ್ಷಗಳ ಹಿಂದೆ ಎಡವಿಬಿದ್ದಿದ್ದ ನೆಲದಲ್ಲಿಯೇ ಪುಟಿದೆದ್ದು ನಿಲ್ಲುವ ಸವಾಲು ಈಗ ಕರ್ನಾಟಕ ಕ್ರಿಕೆಟ್ ತಂಡದ ಮುಂದಿದೆ.

ಅಂದು ತಟಸ್ಥ ತಾಣವಾಗಿದ್ದ ಈಡನ್‌ ಗಾರ್ಡನ್‌ನಲ್ಲಿ ನಡೆದಿದ್ದ ಸೆಮಿಫೈನಲ್‌ನಲ್ಲಿ ಕರ್ನಾಟಕವು ವಿದರ್ಭ ಎದುರು ಪರಾಭವಗೊಂಡಿತ್ತು. ಶನಿವಾರ ಇಲ್ಲಿ ಆರಂಭವಾಗಲಿರುವ ಈ ಬಾರಿಯ ರಣಜಿ ಟ್ರೋಫಿ ಕ್ರಿಕಟ್ ಟೂರ್ನಿಯ ನಾಲ್ಕರ ಘಟ್ಟದ ಹಣಾ ಹಣಿಯಲ್ಲಿ ಆತಿಥೇಯ ಬಂಗಾಳವನ್ನು ಎದುರಿಸಬೇಕಿದೆ.

ಆಗ ರಾಜ್ಯ ತಂಡಕ್ಕೆ ಆರ್. ವಿನಯಕುಮಾರ್ ಸಾರಥ್ಯವಿತ್ತು. ಈಗ ಕರುಣ್ ನಾಯರ್ ಮುಂದಾಳತ್ವ ಇದೆ. ಹೋದ ಎರಡೂ ಋತುವಿನ ಸೆಮಿಫೈನಲ್‌ನಲ್ಲಿಯೇ ಕರ್ನಾಟಕ ತಂಡವು ಎಡವಿದೆ. ಈ ಬಾರಿ ಅಂತಹ ಸನ್ನಿವೇಶ ಮರುಕಳಿಸದಂತೆ ಎಚ್ಚರ ವಹಿಸುವ ಸವಾಲು ಈಗ ಕರುಣ್ ಮುಂದಿದೆ.

ADVERTISEMENT

ಲೀಗ್ ಹಂತದ ಬಹಳಷ್ಟು ಪಂದ್ಯ ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಕರುಣ್, ತಂಡವನ್ನು ಸೆಮಿ ಹಂತಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ಕೆ.ಎಲ್. ರಾಹುಲ್ ಮರಳಿರುವುದು ಕರುಣ್ ಬಳಗದ ಆತ್ಮವಿಶ್ವಾಸವನ್ನು ಇಮ್ಮಡಿಸಿದೆ. ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಬ್ಯಾಟಿಂಗ್–ಕೀಪಿಂಗ್ ಎರಡರಲ್ಲೂ ಮಿಂಚಿದ್ದ ಅವರು ಎದುರಾಳಿ ಬೌಲರ್‌ ಗಳಿಗೆ ಸವಾಲೊಡ್ಡುವ ಸಾಧ್ಯತೆಗಳಿವೆ.

ಭಾರತ ಟೆಸ್ಟ್ ತಂಡಕ್ಕೆ ಮರಳುವ ಛಲದಲ್ಲಿರುವ ರಾಹುಲ್, ದೀರ್ಘ ಮಾದರಿಯಲ್ಲಿ ತಮ್ಮ ಸಾಮರ್ಥ್ಯ ಮೆರೆ ಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ, ರಾಹುಲ್‌ಗಾಗಿ ಯಾರು ಸ್ಥಾನ ತೆರವುಗೊಳಿಸುವರು ಎಂಬ ಕುತೂಹಲ ಬಾಕಿ ಇದೆ.

ಟೂರ್ನಿಯ ಆರಂಭದಲ್ಲಿ ರನ್‌ ಗಳನ್ನು ಹರಿಸಿದ ದೇವದತ್ತ ಪಡಿ ಕ್ಕಲ್, ಕಳೆದ ಕೆಲವು ಪಂದ್ಯಗಳಲ್ಲಿ ಮಂಕಾಗಿದ್ದಾರೆ. ಆದರೂ ಅವ ರಿಗೆ ಆರ್. ಸಮರ್ಥ್ ಜೊತೆಗೆ ಇನಿಂಗ್ಸ್‌ ಆರಂಭಿಸುವ ಅವಕಾಶ ದೊರೆಯಬಹುದು.

ರಾಹುಲ್ ಕೀಪಿಂಗ್ ಮಾಡಲೂ ಸಿದ್ಧರಾದರೆ, ಶರತ್ ಶ್ರೀನಿವಾಸ್ ಬೆಂಚ್‌ ಕಾಯುವುದು ಖಚಿತ. ಮಧ್ಯಮ ಕ್ರಮಾಂಕದಲ್ಲಿ ಕೆ.ವಿ. ಸಿದ್ಧಾರ್ಥ್, ಮನೀಷ್ ಪಾಂಡೆ ಅವರ ಬಲ ಇದೆ. ಕರುಣ್ ಲಯಕ್ಕೆ ಮರಳಿದರೆ ಬ್ಯಾಟಿಂಗ್ ಕ್ರಮಾಂಕ ಮತ್ತಷ್ಟು ಬಲಿಷ್ಠವಾಗುತ್ತದೆ.
ಜಮ್ಮುವಿನಲ್ಲಿ ನಡೆದಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಸಿದ್ಧಾರ್ಥ್ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ್ದರು.

ಆಲ್‌ರೌಂಡರ್ ಕೃಷ್ಣಪ್ಪ ಗೌತಮ್ ಎರಡೂ ವಿಭಾಗಗಳಲ್ಲಿಯೂ ಮಿಂಚುತ್ತಿದ್ದಾರೆ. ಆದರೆ ಈ ಪಂದ್ಯದಲ್ಲಿಯೂ ಶ್ರೇಯಸ್ ಗೋಪಾಲ್‌ಗೆ ಅವಕಾಶ ಕೊಡುವ ಸಾಧ್ಯತೆ ಕಡಿಮೆ. ಎಡಗೈ ಸ್ಪಿನ್ನರ್ ಸುಚಿತ್ ಮುಂದುವರಿಯಬಹುದು. ಈಡನ್ ಅಂಗಳವು ಮಧ್ಯಮವೇಗಿ ಗಳಿಗೆ ಹೆಚ್ಚು ನೆರವು ನೀಡುವ ಸಾಧ್ಯತೆಗಳಿವೆ. ಆದ್ದರಿಂದ ಮಿಥುನ್, ಪ್ರಸಿದ್ಧಕೃಷ್ಣ, ರೋನಿತ್ ಮೋರೆ ಪಾತ್ರ ಮುಖ್ಯವಾಗಲಿದೆ.

ಏಕೆಂದರೆ, ಬಂಗಾಳ ತಂಡದ ಬ್ಯಾಟಿಂಗ್ ಕ್ರಮಾಂಕವು ತುಸು ಆಳವಾಗಿದೆ. ಒಡಿಶಾ ಎದುರಿನ ಎಂಟರ ಘಟ್ಟದ ಪಂದ್ಯದಲ್ಲಿ ಆರನೇ ಕ್ರಮಾಂಕದ ಅನುಸ್ಟುಪ್ ಮಜುಂದಾರ್ ಶತಕ ಮತ್ತು ಎಂಟನೇ ಕ್ರಮಾಂಕದ ಶಾಬಾಜ್ ಅಹಮದ್ 82 ರನ್‌ ಗಳಿಸಿ ಮಿಂಚಿದ್ದರು.

ಶಾಬಾಜ್ ಎರಡನೇ ಇನಿಂಗ್ಸ್‌ನಲ್ಲಿಯೂ ಅರ್ಧಶತಕ ದಾಖಲಿಸಿದ್ದರು. ಅಭಿಷೇಕ್ ರಾಮನ್, ಶ್ರೀವತ್ಸ ಗೋಸ್ವಾಮಿ ಮತ್ತು ಆರ್ಣಬ್ ನಂದಿ ಮಿಂಚಿದ್ದರು. ಆದ್ದರಿಂದ ಕರ್ನಾ ಟಕದ ಬೌಲರ್‌ಗಳು ಯಾವುದೇ ಹಂತ ದಲ್ಲಿಯೂ ನಿರಾಳರಾಗುವಂತಿಲ್ಲ.

ಆತಿಥೇಯ ಬೌಲಿಂಗ್‌ನಲ್ಲಿ ಇಶಾನ್ ಪೊರೆಲ್, ನಿಖಾಂತ್ ದಾಸ್ ಮತ್ತು ಮುಖೇಶ್ ದಾಸ್ ಉತ್ತಮ ಲಯದಲ್ಲಿದ್ದಾರೆ. ತವರಿನಂಗಳದಲ್ಲಿ ಆಡುತ್ತಿರುವುದರಿಂದ ಸಹಜವಾಗಿಯೇ ಬಂಗಾಳದ ಆತ್ಮವಿಶ್ವಾಸವು ಉತ್ತುಂಗದಲ್ಲಿದೆ. 13 ವರ್ಷಗಳಿಂದ ಈ ತಂಡವು ಫೈನಲ್‌ ತಲುಪಿಲ್ಲ. ಆದ್ದರಿಂದ ಈಗ ಲಭಿಸಿರುವ ಅವಕಾಶವನ್ನು ಸುಲಭವಾಗಿ ಬಿಡುವುದಿಲ್ಲ.

ಆದರೆ ಈ ಎಲ್ಲ ಒತ್ತಡಗಳನ್ನು ಮೀರಿ ನಿಲ್ಲುವ ಸಾಮರ್ಥ್ಯ ಕರ್ನಾಟಕಕ್ಕಿದೆ. ಲೀಗ್ ಹಂತದಲ್ಲಿ ತಮಿಳುನಾಡು, ಮುಂಬೈನಂತಹ ಘಟಾನುಘಟಿಗಳನ್ನು ಮಣಿಸಿರುವ ಅನುಭವ ತಂಡಕ್ಕಿದೆ. ಆದ್ದ ರಿಂದ ಇಲ್ಲಿಯೂ ಗೆಲುವಿನ ‘ರಸಗುಲ್ಲಾ’ ಸವಿಯುವ ಛಲದಲ್ಲಿ ತಂಡವಿದೆ.

ಪಂದ್ಯ ಆರಂಭ: ಬೆಳಿಗ್ಗೆ 9.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್.

ರಾಹುಲ್ ಬಗ್ಗೆ ನಾವು ಹೆಚ್ಚು ನಿಗಾ ವಹಿಸಿಲ್ಲ. ಆದರೆ, ನಮ್ಮ ತಂಡದ ಆಟಗಾರರ ಸಾಮರ್ಥ್ಯವನ್ನು ಸಂಪೂರ್ಣವಾಗಿ ವಿನಿಯೋಗಿಸಿ ಯಶಸ್ಸು ಸಾಧಿಸುವತ್ತಲೇ ನಮ್ಮ ಸಂಪೂರ್ಣ ಗಮನವಿದೆ
-ಅರುಣ್ ಲಾಲ್ ಬಂಗಾಳ ತಂಡದ ಕೋಚ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.