ADVERTISEMENT

ಮಹಿಳೆಯರ ಟ್ವೆಂಟಿ–20 ಕ್ರಿಕೆಟ್: ಪಂಜಾಬ್‌ಗೆ ಮಣಿದ ಕರ್ನಾಟಕ ಮಹಿಳೆಯರು

ದಿವ್ಯಾ ಆಲ್‌ರೌಂಡ್ ಆಟ ವ್ಯರ್ಥ

ಪಿಟಿಐ
Published 13 ಮಾರ್ಚ್ 2019, 13:14 IST
Last Updated 13 ಮಾರ್ಚ್ 2019, 13:14 IST
ತನಿಯಾ ಭಾಟಿಯಾ
ತನಿಯಾ ಭಾಟಿಯಾ   

ಮುಂಬೈ: ಕೆಚ್ಚೆದೆಯ ಹೋರಾಟದ ಕೊನೆಯಲ್ಲಿ ಎಡವಿದ ಕರ್ನಾಟಕ ತಂಡ ಮಹಿಳೆಯರ ದೇಶಿ ಟ್ವೆಂಟಿ–20 ಕ್ರಿಕೆಟ್ ಲೀಗ್‌ನ ಪ್ರಶಸ್ತಿಯನ್ನು ಕೈಚೆಲ್ಲಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡ ಪಂಜಾಬ್‌ಗೆ ನಾಲ್ಕು ರನ್‌ಗಳಿಂದ ಮಣಿಯಿತು.

ಎದುರಾಳಿ ತಂಡವನ್ನು 131 ರನ್‌ಗಳಿಗೆ ನಿಯಂತ್ರಿಸಿದ ರಕ್ಷಿತಾ ನಾಯಕತ್ವದ ಕರ್ನಾಟಕ ಕೊನೆಯ ಓವರ್‌ ವರೆಗೂ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿಕೊಂಡಿತ್ತು. ಆದರೆ ಅಂತಿಮವಾಗಿ ಸೋಲೊಪ್ಪಿಕೊಂಡಿತು.

ADVERTISEMENT

ಆರಂಭದಲ್ಲಿ ಎರಡು ವಿಕೆಟ್‌ಗಳನ್ನು ಬೇಗನೇ ಕಳೆದುಕೊಂಡ ತಂಡಕ್ಕೆ ಮೂರನೇ ಕ್ರಮಾಂಕದ ದಿವ್ಯಾ (41; 44 ಎಸೆತ, 1 ಸಿಕ್ಸರ್‌, 4 ಬೌಂಡರಿ) ಆಸರೆಯಾದರು. ಅವರಿಗೆ ಐದನೇ ಕ್ರಮಾಂಕದ ಪ್ರತ್ಯೂಷಾ (35; 31 ಎ, 4 ಬೌಂ) ಉತ್ತಮ ಸಹಕಾರ ನೀಡಿದರು. ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 35 ರನ್‌ ಸೇರಿಸಿ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು.

ಪ್ರತ್ಯೂಷಾ ಕೊನೆಯ ಓವರ್‌ ವರೆಗೂ ಕ್ರೀಸ್‌ನಲ್ಲಿದ್ದರು. ಆದರೆ ಪಂದ್ಯದ ಅಂತಿಮ ಎಸೆತದಲ್ಲಿ ಔಟಾಗುವುದರು.

ಸಿಮ್ರನ್ ಹೆನ್ರಿ, ದಿವ್ಯಾ ಉತ್ತಮ ದಾಳಿ: ಟಾಸ್‌ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿದ ಕರ್ನಾಟಕ, ಪರಿಣಾಮಕಾರಿ ದಾಳಿ ಸಂಘಟಿಸಿ ಎದುರಾಳಿ ಬ್ಯಾಟ್ಸ್‌ವುಮನ್‌ಗಳನ್ನು ಕಟ್ಟಿ ಹಾಕಿದರು. 20 ರನ್‌ ಗಳಿಸುವಷ್ಟರಲ್ಲಿ ರಿಧಿಮಾ ಅಗರವಾಲ್ ಅವರ ವಿಕೆಟ್ ಕಳೆದುಕೊಂಡ ಪಂಜಾಬ್‌ ತಂಡದ ಜಸಿಯಾ ಅಕ್ತರ್ ಮತ್ತು ಭಾರತ ತಂಡದ ವಿಕೆಟ್ ಕೀಪರ್‌ ತನಿಯಾ ಭಾಟಿಯ 35 ರನ್‌ಗಳ ಜೊತೆಯಾಟ ಆಡಿದರು. ಭಾಟಿಯ ಔಟಾದ ನಂತರ ಜಸಿಯಾ ಜೊತೆಗೂಡಿದ ಅಮರ್‌ಪಾಲ್ ಕೌರ್‌ 40 ರನ್‌ಗಳ ಜೊತೆಯಾಟ ಆಡಿದರು.

ಜಸಿಯಾ ವಾಪಸಾದ ನಂತರ ತಂಡ ನಿರಂತರವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಿಮ್ರನ್ ಹೆನ್ರಿ ಮತ್ತು ದಿವ್ಯಾ ತಲಾ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 131 (ಜಸಿಯಾ ಅಕ್ತರ್‌ 56, ನೀಲಂ ಬಿಶ್ಠ್‌ 27; ಸಿಮ್ರನ್‌ ಹೆನ್ರಿ 26ಕ್ಕೆ2, ಚಂದು ವಿ 22ಕ್ಕೆ1, ಪ್ರತ್ಯೂಷಾ 22ಕ್ಕೆ1, ದಿವ್ಯಾ 24ಕ್ಕೆ2); ಕರ್ನಾಟಕ: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 127 (ದಿವ್ಯಾ 41, ಪ್ರತ್ಯೂಷಾ 35; ಕೋಮಲ್‌ಪ್ರೀತ್‌ 22ಕ್ಕೆ2, ಬಿ.ಎನ್‌.ಮೀನಾ 24ಕ್ಕೆ1, ಸುನಿತಾ ತಾಣಿ 19ಕ್ಕೆ2, ನೀಲಂ ಬಿಶ್ಠ್‌ 24ಕ್ಕೆ2). ಫಲಿತಾಂಶ: ಪಂಜಾಬ್‌ಗೆ ನಾಲ್ಕು ವಿಕೆಟ್‌ಗಳ ಜಯ; ಪ್ರಶಸ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.