ADVERTISEMENT

ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿ: ಸಮಾಧಾನಕರ ಗೆಲುವಿನತ್ತ ಆತಿಥೇಯರ ಚಿತ್ತ

ಕರ್ನಾಟಕ–ಹಿಮಾಚಲ ಹಣಾಹಣಿ 6ಕ್ಕೆ

ಗಿರೀಶದೊಡ್ಡಮನಿ
Published 5 ಅಕ್ಟೋಬರ್ 2018, 15:15 IST
Last Updated 5 ಅಕ್ಟೋಬರ್ 2018, 15:15 IST
ಕರ್ನಾಟಕದ ಮೀರ್ ಕೌನೇನ್ ಅಬ್ಬಾಸ್  –ಪ್ರಜಾವಾಣಿ ಚಿತ್ರ
ಕರ್ನಾಟಕದ ಮೀರ್ ಕೌನೇನ್ ಅಬ್ಬಾಸ್  –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಹಾಲಿ ಚಾಂಪಿಯನ್’ ಕರ್ನಾಟಕ ಮತ್ತು ಹಿಮಾಚಲ ಪ್ರದೇಶ ತಂಡಗಳು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ನಾಕೌಟ್ ಹಂತಕ್ಕೆ ಪ್ರವೇಶಿಸುವ ಹಾದಿಯಿಂದ ಹೊರಬಿದ್ದಿವೆ.

ಉಭಯ ತಂಡಗಳೂ ಈಗ ಸಮಾಧಾಕರ ಗೆಲುವಿನತ್ತ ಚಿತ್ತ ನೆಟ್ಟಿವೆ. ಎಲೀಟ್ ಎ ಗುಂಪಿನಲ್ಲಿ ಇದುವರೆಗೆ ಆರು ಪಂದ್ಯಗಳನ್ನು ಆಡಿರುವ ಕರ್ನಾಟಕ ತಂಡವು ಕೇವಲ ಒಂದರಲ್ಲಿ ಗೆದ್ದಿದೆ. ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿವೆ. ಅದರಿಂದಾಗಿ ಕೇವಲ ಎಂಟು ಪಾಯಿಂಟ್‌ಗಳನ್ನು ಗಳಿಸಿದೆ.

ಆದರೆ ಪ್ರಶಾಂತ್ ಚೋಪ್ರಾ ನಾಯಕತ್ವದ ಹಿಮಾಚಲ ಪ್ರದೇಶ ತಂಡವು ಈ ಟೂರ್ನಿಯಲ್ಲಿ ತಕ್ಕಮಟ್ಟಿಗೆ ಉತ್ತಮವಾಗಿ ಆಡಿದೆ. ಕರ್ನಾಟಕಕ್ಕಿಂತ ಉತ್ತಮ ಸಾಧನೆ ಮಾಡಿದೆ. ಮೂರು ಪಂದ್ಯಗಳಲ್ಲಿ ಗೆದ್ದು, ಮೂರರಲ್ಲಿ ಸೋತಿದೆ. ಎರಡು ಪಂದ್ಯಗಳು ಮಳೆಗೆ ಆಹುತಿಯಾಗಿದ್ದವು. ಅದರಿಂದಾಗಿ 14 ಪಾಯಿಂಟ್‌ಗಳನ್ನು ಗಳಿಸಿದೆ. ಶನಿವಾರ ತನ್ನ ಕೊನೆಯ ಪಂದ್ಯವನ್ನು ಆಡಲಿದೆ. ಅದರಲ್ಲಿ ಗೆದ್ದರೂ ತಂಡಕ್ಕೆ ನಾಕೌಟ್ ಪ್ರವೇಶಿಸುವುದು ಅಸಾಧ್ಯ.

ADVERTISEMENT

ಎ ಮತ್ತು ಬಿ ಗುಂಪಿನ ಜಂಟಿ ಪಾಯಿಂಟ್‌ ಪಟ್ಟಿಯಲ್ಲಿ ಮುಂಬೈ (26), ದೆಹಲಿ (22), ಬರೋಡಾ (20), ಮಹಾರಾಷ್ಟ್ರ (20) ಹೈದರಾಬಾದ್ (18), ಆಂಧ್ರ (18) ಮತ್ತು ಪಂಜಾಬ್ (16) ಅಗ್ರ ಏಳು ಸ್ಥಾನಗಳಲ್ಲಿವೆ. ಲೀಗ್ ಹಂತದ ಮುಕ್ತಾಯಕ್ಕೆ ಈ ಪಟ್ಟಿಯಲ್ಲಿ ಮೊದಲ ಐದು ಸ್ಥಾನ ಪಡೆಯುವ ತಂಡಗಳು ಎಂಟರ ಘಟ್ಟಕ್ಕೆ ಪ್ರವೇಶಿಸಲಿವೆ.

ನವೆಂಬರ್ 1ರಿಂದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಅದಕ್ಕಾಗಿ ಆತ್ಮವಿಶ್ವಾಸವನ್ನು ಗಳಿಸಿಕೊಳ್ಳುವ ಸಲುವಾಗಿ ಈಗ ಉಳಿದಿರು ಪಂದ್ಯಗಳಲ್ಲಿ ಗೆಲ್ಲುವತ್ತ ಮನೀಷ್ ಪಾಂಡೆ ಬಳಗವು ಚಿತ್ತ ನೆಟ್ಟಿದೆ.

ಹೋದ ಗುರುವಾರ ರೈಲ್ವೆ ವಿರುದ್ಧದ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಆದರೆ ಶನಿವಾರ ಹಿಮಾಚಲ ಪ್ರದೇಶದ ಕಠಿಣ ಸವಾಲನ್ನು ಎದುರಿಸಿ ನಿಂತರೆ ಸಮಾಧಾಕರ ಗೆಲುವು ಸಾಧ್ಯ.

ತಂಡಗಳು

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಬಿ.ಅರ್. ಶರತ್ (ವಿಕೆಟ್‌ಕೀಪರ್), ಎಂ.ಜಿ. ನವೀನ್, ಅಭಿಷೇಕ್ ರೆಡ್ಡಿ, ಆರ್. ಸಮರ್ಥ್, ಮೀರ್ ಕೌನೇನ್ ಅಬ್ಬಾಸ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್, ಟಿ. ಪ್ರದೀಪ್, ಅಭಿಮನ್ಯು ಮಿಥುನ್, ಪವನ್ ದೇಶಪಾಂಡೆ, ಜೆ. ಸುಚಿತ್,

ಹಿಮಾಚಲ ಪ್ರದೇಶ: ಪ್ರಶಾಂತ್ ಚೋಪ್ರಾ (ನಾಯಕ), ಅಂಕುಶ್ ಬೇನ್ಸ್‌ (ವಿಕೆಟ್‌ಕೀಪರ್), ಸುಮೀತ್ ವರ್ಮಾ, ಕನ್ವರ್ ಅಭಿನಯಸಿಂಗ್, ಅಮಿತ್ ಕುಮಾರ್, ಮಯಂಕ್ ಡಾಗರ್, ರಿಶಿ ಧವನ್, ವಿನಯ್ ಗಳೆತಿಯಾ, ನಿಖಿಲ್ ಗಾಂಗ್ಟಾ, ಗುರ್ವಿಂದರ್ ಸಿಂಗ್, ಪಂಕಜ್ ಜೈಸ್ವಾಲ್, ಆಯುಷ್ ಜಮ್ವಾಲ್, ಅಂಕಿತ್ ಕೌಶಿಕ್, ಪ್ರಿಯಾಂಶು ಖಂಡೂರಿ, ಏಕನಾಥ್ ಸೇನ್, ಮೊಹಮ್ಮದ್ ಅರ್ಜುದ್ದೀನ್.

ಪಂದ್ಯ ಆರಂಭ: ಬೆಳಿಗ್ಗೆ 9

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.