ವಡೋದರಾ: ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಹರಿಯಾಣ ಮುಖಾಮುಖಿಯಾಗಲಿದೆ.
ಭಾನುವಾರ ಕೋತಂಬಿ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಹರಿಯಾಣ ತಂಡವು 2 ವಿಕೆಟ್‌ಗಳಿಂದ ಗುಜರಾತ್ ಎದುರು ಜಯಿಸಿತು.
ಟಾಸ್ ಗೆದ್ದ ಹರಿಯಾಣ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅನುಜ್ ಟಕ್ರಾಲ್ (39ಕ್ಕೆ3) ಮತ್ತು ನಿಶಾಂತ್ ಸಿಂಧು (40ಕ್ಕೆ3) ಬೌಲಿಂಗ್ ಮುಂದೆ ಕುಸಿದ ಗುಜರಾತ್ 45.2 ಓವರ್‌ಗಳಲ್ಲಿ 196 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ತಂಡವು ಒಂದು ಹಂತದಲ್ಲಿ 84 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿತು. ಆದರೆ, ಕೆಳಕ್ರಮಾಂಕದ ಬ್ಯಾಟರ್ ಹೇಮಂಗ್ ಪಟೇಲ್ (54; 62ಎ, 4X2, 6X5) ಅರ್ಧಶತಕ ಗಳಿಸಿ ಮೊತ್ತ ಹೆಚ್ಚಿಸುವಲ್ಲಿ ನೆರವಾದರು.
ಗುರಿ ಬೆನ್ನತ್ತಿದ ಹರಿಯಾಣ ತಂಡಕ್ಕೆ ಜಯ ಸುಲಭವಾಗಿ ದಕ್ಕಲಿಲ್ಲ. ಸ್ಪಿನ್ನರ್ ರವಿ ಬಿಷ್ಣೋಯಿ (46ಕ್ಕೆ4) ಅವರು ತೀವ್ರ ಪ್ರತಿರೋಧ ಒಡ್ಡಿದರು. ಆದರೆ ಹರಿಯಾಣದ ಹಿಮಾಂಶು ರಾಣಾ (66; 89ಎ, 4X10) ಅವರ ಬ್ಯಾಟಿಂಗ್ ಬಲದಿಂದ 44.2 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 201 ರನ್ ಗಳಿಸಿ ಗೆದ್ದಿತು.
ಸಂಕ್ಷಿಪ್ತ ಸ್ಕೋರು: ಗುಜರಾತ್: 45.2 ಓವರ್‌ಗಳಲ್ಲಿ 196 (ಆರ್ಯಾ ದೇಸಾಯಿ 23, ಊರ್ವಿಲ್ ಪಟೇಲ್ 23, ಚಿಂತನ್ ಗಜ 32, ಸೌರವ್ ಚೌಹಾಣ್ 23, ಹೆಮಂಗ್ ಪಟೇಲ್ 54, ಅನ್ಷುಲ್ ಕಾಂಭೋಜ್ 36ಕ್ಕೆ2, ಅನುಜ್ ಟಕ್ರಾಲ್ 39ಕ್ಕೆ3, ನಿಶಾಂತ್ ಸಿಂಧು 40ಕ್ಕೆ3) ಹರಿಯಾಣ: 44.2 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 201 (ಅರ್ಷ ರಂಗಾ 25, ಹಿಮಾಂಶು ರಾಣಾ 66, ಅಂಕಿತ್ ಕುಮಾರ್ 20, ಪಾರ್ಥ ವತ್ಸ 38, ನಿಶಾಂತ್ ಸಿಂಧು 21, ಅರ್ಜನ್ ನಾಗವಸ್ವಾಲ್ಲಾ 34ಕ್ಕೆ2, ರವಿ ಬಿಷ್ಣೋಯಿ 46ಕ್ಕೆ4) ಫಲಿತಾಂಶ: ಹರಿಯಾಣ ತಂಡಕ್ಕೆ 2 ವಿಕೆಟ್ ಜಯ.
ಸೆಮಿಫೈನಲ್ ಪಂದ್ಯಗಳು
ಹರಿಯಾಣ–ಕರ್ನಾಟಕ (ಜ.15)
ವಿದರ್ಭ–ಮಹಾರಾಷ್ಟ್ರ (ಜ.16)
ಕರುಣ್ ನಾಯರ್ ಐದನೇ ಶತಕ
ವಿದರ್ಭ ತಂಡವನ್ನು ಪ್ರತಿನಿಧಿಸುತ್ತಿರುವ ಬೆಂಗಳೂರಿನ ಕರುಣ್ ನಾಯರ್ ಅವರು ಈ ಸಲದ ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಐದನೇ ಶತಕ ದಾಖಲಿಸಿದರು. ಮೋತಿಭಾಗ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕರುಣ್ (ಅಜೇಯ 122; 82ಎ 4X13 6X5) ಮತ್ತು ಧ್ರುವ ಶೋರೆ (ಅಜೇಯ 118; 131ಎ 4X10 6X3) ಅವರಿಬ್ಬರ ದ್ವಿಶತಕದ ಜೊತೆಯಾಟದ ಬಲದಿಂದ ವಿದರ್ಭ ತಂಡವು 9 ವಿಕೆಟ್‌ಗಳಿಂದ ರಾಜಸ್ಥಾನ ವಿರುದ್ಧ ಗೆದ್ದಿತು. ಸೆಮಿಫೈನಲ್‌ನಲ್ಲಿ ವಿದರ್ಭ ತಂಡವು ಮಹಾರಾಷ್ಟ್ರ ಎದುರು ಆಡಲಿದೆ. ಟಾಸ್ ಗೆದ್ದ ವಿದರ್ಭ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಶುಭಂ ಗರ್ವಾಲ್ (59; 59ಎ 4X6 6X4) ಮತ್ತು ಕಾರ್ತಿಕ್ ಶರ್ಮಾ (62; 61ಎ 4X2 6X4) ಅವರ ಅರ್ಧಶತಕಗಳ ಬಲದಿಂದ ರಾಜಸ್ಥಾನ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 291 ರನ್ ಗಳಿಸಿತು. ಅದಕ್ಕುತ್ತರವಾಗಿ ವಿದರ್ಭ ತಂಡವು 43.3 ಓವರ್‌ಗಳಲ್ಲಿ 1 ವಿಕೆಟ್‌ಗೆ 292 ರನ್ ಗಳಿಸಿ ಜಯಿಸಿತು. ಈ ಟೂರ್ನಿಯಲ್ಲಿ ಕರುಣ್ 7 ಪಂದ್ಯಗಳಿಂದ ಒಟ್ಟು 664 ರನ್ ಕಲೆಹಾಕಿದ್ದಾರೆ. ಇದರೊಂದಿಗೆ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ. ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ (619ರನ್) ನಾಲ್ಕು ಶತಕ ಗಳಿಸಿದ್ದಾರೆ. ಅವರನ್ನು ಕರುಣ್ ಹಿಂದಿಕ್ಕಿದರು. ಸಂಕ್ಷಿಪ್ತ ಸ್ಕೋರು: ರಾಜಸ್ಥಾನ: 50 ಓವರ್‌ಗಳಲ್ಲಿ 8ಕ್ಕೆ 291 (ಮಹಿಪಾಲ್ ಲೊಮ್ರೊರ್ 32 ದೀಪಕ್ ಹೂಡಾ 45 ಶುಭಂ ಗರ್ವಾಲ್ 59 ಕಾರ್ತಿಕ್ ಶರ್ಮಾ 62 ಸಂಪ್ರೀತ್ ಜೋಶಿ 23 ದೀಪಕ್ ಚಾಹರ್ 31 ಯಶ್ ಠಾಕೂರ್ 39ಕ್ಕೆ4) ವಿದರ್ಭ: 43.3 ಓವರ್‌ಗಳಲ್ಲಿ 1 ವಿಕಟ್‌ಗೆ 292 (ಧ್ರುವ ಶೋರೆ ಔಟಾಗದೇ 118 ಯಶ್ ರಾಥೋಡ್ 39 ಕರುಣ್ ನಾಯರ್ ಔಟಾಗದೇ 122) ಫಲಿತಾಂಶ: ವಿದರ್ಭ ತಂಡಕ್ಕೆ 9 ವಿಕೆಟ್‌ಗಳ ಜಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.