ADVERTISEMENT

ನ್ಯೂಜಿಲೆಂಡ್‌ಗೆ ಇನಿಂಗ್ಸ್‌ ಜಯ

ಮೊದಲ ಕ್ರಿಕೆಟ್‌ ಟೆಸ್ಟ್‌: ವ್ಯಾಗ್ನರ್‌ಗೆ 5 ವಿಕೆಟ್‌;

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2019, 19:45 IST
Last Updated 25 ನವೆಂಬರ್ 2019, 19:45 IST

ವೆಲಿಂಗ್ಟನ್‌ (ರಾಯಿಟರ್ಸ್‌): ಎಡಗೈ ವೇಗಿನೀಲ್‌ ವ್ಯಾಗ್ನರ್‌ (44ಕ್ಕೆ5) ಎಂಟನೇ ಬಾರಿ ಐದು ವಿಕೆಟ್‌ಗಳ ಗೊಂಚಲಿನೊಡನೆ ಮಿಂಚಿದರು. ಇಂಗ್ಲೆಂಡ್‌ನ ಕೆಳಕ್ರಮಾಂಕ ಧ್ವಂಸ ಮಾಡಿದ ಅವರು ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯವನ್ನು ನ್ಯೂಜಿಲೆಂಡ್‌ ಇನಿಂಗ್ಸ್‌ ಮತ್ತು 65 ರನ್‌ಗಳಿಂದ ಗೆಲ್ಲಲು ನೆರವಾದರು.

ಮೌಂಟ್‌ ಮಾಂಗಾನೂಯಿಯ ಬೇ ಓವಲ್‌ ಪಿಚ್‌ನಲ್ಲಿ, ಅಂತಿಮ ದಿನವಾದ ಸೋಮವಾರ ಸುಮಾರು 90 ನಿಮಿಷಗಳ ಆಟ ಉಳಿದಿರುವಂತೆ ಇಂಗ್ಲೆಂಡ್‌ ತಂಡ ಎರಡನೇ ಇನಿಂಗ್ಸ್‌ನಲ್ಲಿ 197 ರನ್‌ಗಳಿಗೆ ಆಲೌಟ್‌ ಆಯಿತು.

ಜೋಫ್ರಾ ಆರ್ಚರ್‌ ಮತ್ತು ಸ್ಯಾಮ್‌ ಕರನ್‌ ನಡುವಣ 59 ರನ್‌ಗಳ ಜೊತೆಯಾಟವನ್ನು ಅವರು ಮುರಿಯುವುದರೊಡನೆ ವ್ಯಾಗ್ನರ್‌ ಇಂಗ್ಲೆಂಡ್‌ ಪತನ ತ್ವರಿತಗೊಳಿಸಿದರು.

ADVERTISEMENT

ಇದಕ್ಕೆ ಮೊದಲ ಅವರು 17 ರನ್‌ ಅಂತರದಲ್ಲಿ 3 ವಿಕೆಟ್‌ ಪಡೆದು, ಪ್ರವಾಸಿ ತಂಡದ ಕುಸಿತದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಒಂದು ಹಂತದಲ್ಲಿ 5 ವಿಕೆಟ್‌ಗೆ 132 ರನ್ ಗಳಿಸಿದ್ದ ಇಂಗ್ಲೆಂಡ್‌ ಟೀ ವೇಳೆಗೆ 138 ರನ್‌ಗಳಾಗುವಷ್ಟರಲ್ಲಿ 8 ವಿಕೆಟ್‌ ಕಳೆದುಕೊಂಡಿತ್ತು. ಆರ್ಚರ್‌ ಬೌಂಡರಿ ಲೈನ್‌ನಲ್ಲಿ ಕ್ಯಾಚ್‌ ಕೊಡುವಂತೆ ಪ್ರಲೋಭನೆ ಒಡ್ಡಿದ ಅವರು, ಕೊನೆಯ ಆಟಗಾರ ಬ್ರಾಡ್‌ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದರು. ಮಿಷೆಲ್‌ ಸ್ಯಾಂಟ್ನರ್‌ ಮೂರು ವಿಕೆಟ್‌ ಪಡೆದರು.

ಇಂಗ್ಲೆಂಡ್‌ ವಿರುದ್ಧ 104 ಟೆಸ್ಟ್‌ ಪಂದ್ಯಗಳಲ್ಲಿ ಇದು ನ್ಯೂಜಿಲೆಂಡ್‌ಗೆ 11ನೇ ಗೆಲುವು. ಈ ಹಿಂದೆ, 1984ರಲ್ಲಿ ಮಾತ್ರ ಇದಕ್ಕಿಂತ ದೊಡ್ಡ ಅಂತರದ (ಇನಿಂಗ್ಸ್‌ ಮತ್ತು 132) ಗೆಲುವನ್ನು ದಾಖಲಿಸಿತ್ತು.

205 ರನ್‌ ಗಳಿಸಿ ಆತಿಥೇಯ ತಂಡದ ಮುನ್ನಡೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿಕೆಟ್‌ ಕೀಪರ್‌ ಬಿ.ಜೆ.ವಾಟ್ಲಿಂಗ್‌ ‘ಪಂದ್ಯದ ಪುರುಷೋತ್ತಮ’ ಗೌರವಕ್ಕೆ ಪಾತ್ರರಾದರು.

ಸ್ಕೋರುಗಳು: ಇಂಗ್ಲೆಂಡ್‌: 353 ಮತ್ತು 197 (ಜೊ ಡೆನ್ಲಿ 35, ಬೆನ್‌ ಸ್ಟೋಕ್ಸ್‌ 28, ಸ್ಯಾಮ್‌ ಕರನ್‌ ಔಟಾಗದೇ 29, ಜೋಫ್ರಾ ಆರ್ಚರ್‌ 30; ಮಿಷೆಲ್‌ ಸ್ಯಾಂಟ್ನರ್‌ 53ಕ್ಕೆ3, ವ್ಯಾಗ್ನರ್‌ 44ಕ್ಕೆ5); ನ್ಯೂಜಿಲೆಂಡ್‌: 9 ವಿಕೆಟ್‌ಗೆ 615 ಡಿಕ್ಲೇರ್ಡ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.