ADVERTISEMENT

ಕೋವಿಡ್–19 | ದುರ್ಬಲ ಮಕ್ಕಳ ಸಂಕಷ್ಟಕ್ಕೆ ಮಿಡಿದ ಕನ್ನಡಿಗ ರಾಹುಲ್

ಸಹಾಯ ಹಸ್ತ ಚಾಚಿದ ಕ್ರಿಕೆಟಿಗ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 12:30 IST
Last Updated 20 ಏಪ್ರಿಲ್ 2020, 12:30 IST
ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ಬ್ಯಾಟಿಂಗ್‌ ವೈಖರಿ –ಸಂಗ್ರಹ ಚಿತ್ರ 
ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಕೆ.ಎಲ್‌.ರಾಹುಲ್‌ ಬ್ಯಾಟಿಂಗ್‌ ವೈಖರಿ –ಸಂಗ್ರಹ ಚಿತ್ರ    

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್‌ ಅವರು ದುರ್ಬಲ ಮಕ್ಕಳ ಸಂಕಷ್ಟಕ್ಕೆ ಮಿಡಿದಿದ್ದಾರೆ.

ಈ ಮಕ್ಕಳಿಗೆ ನೆರವಾಗುವ ಸಲುವಾಗಿ ಹೋದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಬಳಸಿದ್ದ ಬ್ಯಾಟ್‌ ಹಾಗೂ ಇತರೆ ಕ್ರಿಕೆಟ್‌ ಪರಿಕರಗಳನ್ನು ಹರಾಜಿಗಿಡಲು ತೀರ್ಮಾನಿಸಿದ್ದಾರೆ.

‘ವಿಶ್ವಕಪ್‌ನಲ್ಲಿ ಬಳಸಿದ್ದ ಬ್ಯಾಟ್‌, ಕೈಗವಸು, ಹೆಲ್ಮೆಟ್‌ಗಳು, ಪ್ಯಾಡ್‌ಗಳು ಹಾಗೂ ವಿಶ್ವಕಪ್‌ ಮತ್ತು ಟೆಸ್ಟ್‌, ಏಕದಿನ ಸರಣಿಗಳಲ್ಲಿ ಧರಿಸಿದ್ದ ಕೆಲ ಜೆರ್ಸಿಗಳನ್ನು ಭಾರತ್‌ ಆರ್ಮಿಗೆ ನೀಡಿದ್ದೇನೆ. ಅವರು ಈ ಪರಿಕರಗಳನ್ನೆಲ್ಲಾ ಹರಾಜಿಗಿಡಲಿದ್ದಾರೆ. ಅದರಿಂದ ಸಂಗ್ರಹವಾಗುವ ಮೊತ್ತವನ್ನು ಅವಾರೆ ಫೌಂಡೇಷನ್‌ಗೆ ನೀಡಲಿದ್ದಾರೆ’ ಎಂದು ರಾಹುಲ್‌, ಟ್ವಿಟರ್‌ನಲ್ಲಿ ಹೇಳಿದ್ದಾರೆ.

ADVERTISEMENT

ಹೋದ ಶನಿವಾರ 28ನೇ ವಸಂತಕ್ಕೆ ಕಾಲಿಟ್ಟಿದ್ದ ಕನ್ನಡಿಗ ರಾಹುಲ್‌, ಬಳಿಕ ವಿಡಿಯೊವೊಂದನ್ನು ಮಾಡಿ ಟ್ವಿಟರ್‌ನಲ್ಲಿ ಹಾಕಿದ್ದರು. ಇದರಲ್ಲಿ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

‘ಅವಾರೆ ಫೌಂಡೇಷನ್‌, ದುರ್ಬಲ ಮಕ್ಕಳ ಸರ್ವತೋಮುಖ ಕಲ್ಯಾಣಕ್ಕಾಗಿ ಶ್ರಮಿಸುತ್ತಿದೆ. ಆ ಮಕ್ಕಳಿಗೆ ನನ್ನಿಂದಾದ ಸಹಾಯ ಮಾಡಬೇಕು ಅನಿಸಿತು. ಅದಕ್ಕಾಗಿ ಈ ಮಾರ್ಗವನ್ನು ಆಯ್ಕೆ ಮಾಡಿಕೊಂಡೆ. ಇದೊಂದು ವಿಶೇಷ ಕಾರ್ಯ. ಜನ್ಮದಿನದಂದೇ ಈ ಕೆಲಸ ಮಾಡುವ ತೀರ್ಮಾನ ಕೈಗೊಂಡಿದ್ದೇನೆ. ಇದು ತುಂಬಾ ಖುಷಿ ಹಾಗೂ ಸಂತೃಪ್ತಿಯನ್ನು ನೀಡಿದೆ’ ಎಂದೂ ರಾಹುಲ್‌ ತಿಳಿಸಿದ್ದಾರೆ.

‘ಎಲ್ಲರೂ ಹರಾಜಿನಲ್ಲಿ ಪಾಲ್ಗೊಳ್ಳಿ. ಸಾಧ್ಯವಾದಷ್ಟು ಹೆಚ್ಚು ಬಿಡ್‌ ಮಾಡಿ. ಸಂಕಷ್ಟದ ಈ ಸಮಯದಲ್ಲಿ ಎಲ್ಲರೂ ಧೈರ್ಯದಿಂದಿರಿ. ನಾವೆಲ್ಲರೂ ಒಗ್ಗಟ್ಟಾಗಿ ಕೊರೊನಾ ವಿರುದ್ಧ ಹೋರಾಡೋಣ. ಶೀಘ್ರವೇ ಈ ಬಿಕ್ಕಟ್ಟನ್ನು ಮೆಟ್ಟಿನಿಲ್ಲೋಣ’ ಎಂದಿದ್ದಾರೆ.

ಹರಾಜು ಪ್ರಕ್ರಿಯೆಗೆ ಸೋಮವಾರ ಚಾಲನೆ ನೀಡಲಾಗಿದೆ. ವಿಶ್ವಕಪ್‌ನಲ್ಲಿ ಒಟ್ಟು ಒಂಬತ್ತು ಪಂದ್ಯಗಳನ್ನು ಆಡಿದ್ದ ಬಲಗೈ ಬ್ಯಾಟ್ಸ್‌ಮನ್‌ ರಾಹುಲ್‌, 45.12ರ ಸರಾಸರಿಯಲ್ಲಿ 361ರನ್‌ ದಾಖಲಿಸಿದ್ದರು. ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನೂ ಸಿಡಿಸಿದ್ದರು. 111 ಅವರ ಗರಿಷ್ಠ ಸ್ಕೋರ್‌ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.