ADVERTISEMENT

ಐಪಿಎಲ್‌ನಲ್ಲಿ ‘ವೇಗ’ದ ಶಕ್ತಿ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2019, 12:36 IST
Last Updated 20 ಏಪ್ರಿಲ್ 2019, 12:36 IST
ಜಸ್‌ಪ್ರೀತ್‌ ಬೂಮ್ರಾ
ಜಸ್‌ಪ್ರೀತ್‌ ಬೂಮ್ರಾ   

ಬ್ಯಾಟ್ಸ್‌ಮನ್‌ಗಳ ಮೇಲಾಟವೇ ಹೆಚ್ಚು ನಡೆಯುವ ಐಪಿಎಲ್‌ನಲ್ಲಿ ವೇಗದ ಬೌಲರ್‌ಗಳೂ ಮೋಡಿ ಮಾಡುತ್ತಿದ್ದಾರೆ. ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಕಡಿವಾಣ ಹಾಕಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡುತ್ತಿದ್ದಾರೆ. ಈ ಸಲದ ಲೀಗ್‌ನ ಫಲಿತಾಂಶಗಳ ಮೇಲೆ ಬೆಳಕು ಚೆಲ್ಲಿದರೆ ಅಂತಹ ಹಲವು ಉದಾಹರಣೆಗಳು ಕಾಣ ಸಿಗುತ್ತವೆ. –ಜಿ.ಶಿವಕುಮಾರ

***

ಮಾರ್ಚ್‌ 30ರಂದು ಫಿರೋಜ್‌ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯವದು. ಕೋಲ್ಕತ್ತ ನೈಟ್‌ರೈಡರ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ ನಡುವಣ ರೋಚಕ ಹೋರಾಟ ‘ಟೈ’ ಆಗಿತ್ತು. ಹೀಗಾಗಿ ಎಲ್ಲರ ಚಿತ್ತ ‘ಸೂಪರ್‌ ಓವರ್‌’ನತ್ತ ನೆಟ್ಟಿತ್ತು.

ADVERTISEMENT

ನೈಟ್‌ರೈಡರ್ಸ್‌ ‍ಪರ ಬೌಲ್‌ ಮಾಡಿದ ಕನ್ನಡಿಗ ಪ್ರಸಿದ್ಧ ಕೃಷ್ಣ, ಕೇವಲ 10ರನ್‌ ನೀಡಿದರು. ಈ ಗುರಿಯನ್ನು ಕೆಕೆಆರ್‌ ಸುಲಭವಾಗಿ ಮುಟ್ಟಲಿದೆ ಎಂಬುದು ಬಹುತೇಕರ ನಿರೀಕ್ಷೆಯಾಗಿತ್ತು. ಆದರೆ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು. ರಬಾಡ ಪ್ರಯೋಗಿಸಿದ ಯಾರ್ಕರ್ ಎಸೆತಗಳಿಗೆ ಆ್ಯಂಡ್ರೆ ರಸೆಲ್‌, ದಿನೇಶ್‌ ಕಾರ್ತಿಕ್‌ ಮತ್ತು ರಾಬಿನ್‌ ಉತ್ತಪ್ಪ ನಿರುತ್ತರರಾದರು. ಡೆಲ್ಲಿ ಮೂರು ರನ್‌ಗಳಿಂದ ಗೆದ್ದಿತು.

ಐಪಿಎಲ್‌ ಅಂದಾಕ್ಷಣ, ಕ್ರಿಸ್‌ ಗೇಲ್‌, ಆ್ಯಂಡ್ರೆ ರಸೆಲ್‌, ಎಬಿ ಡಿವಿಲಿಯರ್ಸ್‌, ಕೆ.ಎಲ್‌.ರಾಹುಲ್‌, ವಿರಾಟ್‌ ಕೊಹ್ಲಿ, ಕೀರನ್‌ ಪೊಲಾರ್ಡ್‌ ಮತ್ತು ಹಾರ್ದಿಕ್‌ ಪಾಂಡ್ಯ ಅವರ ಸ್ಫೋಟಕ ಬ್ಯಾಟಿಂಗ್‌ನ ಝಲಕ್‌ ಕಣ್ಣ ಮುಂದೆ ಹಾದು ಹೋಗುತ್ತದೆ. ಇವರು ಚೆಂಡನ್ನು ಬೌಂಡರಿ, ಸಿಕ್ಸರ್‌ಗೆ ಅಟ್ಟಿದಾಗಲೆಲ್ಲಾ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯಲ್ಲಿ ಮೆಕ್ಸಿಕನ್‌ ಅಲೆ ಏಳುತ್ತದೆ.

ಬ್ಯಾಟ್ಸ್‌ಮನ್‌ಗಳ ಮೇಲಾಟವೇ ಹೆಚ್ಚು ನಡೆಯುವ ಐಪಿಎಲ್‌ನಲ್ಲಿ ವೇಗದ ಬೌಲರ್‌ಗಳೂ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡಬಲ್ಲರು ಎಂಬುದನ್ನು ರಬಾಡ, ಕೆಕೆಆರ್‌ ಎದುರಿನ ಹೋರಾಟದಲ್ಲಿ ನಿರೂಪಿಸಿದ್ದಾರೆ.

ಈ ಸಲದ ಐಪಿಎಲ್‌ ಪಂದ್ಯಗಳ (ಗುರುವಾರದವರೆಗೆ) ಫಲಿತಾಂಶಗಳ ಮೇಲೆ ಬೆಳಕು ಚೆಲ್ಲಿದರೆ ಇಂತಹ ಹಲವು ಉದಾಹರಣೆಗಳು ಕಾಣ ಸಿಗುತ್ತವೆ.

ಮುಂಬೈ ಇಂಡಿಯನ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌ ನಡುವಣ ಹಣಾಹಣಿಯಲ್ಲಿ 22 ವರ್ಷದ ಅಲ್ಜರಿ ಜೋಸೆಫ್‌ ಮೋಡಿ ಮಾಡಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು.

ಏಪ್ರಿಲ್‌ 6ರಂದು ಉಪ್ಪಳದ ರಾಜೀವ್‌ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೋಸೆಫ್ ಆರು ವಿಕೆಟ್‌ ಉರುಳಿಸಿ ದಾಖಲೆ ನಿರ್ಮಿಸಿದ್ದರು. 3.4 ಓವರ್‌ ಬೌಲ್‌ ಮಾಡಿದ್ದ ಅವರು ಕೇವಲ 12ರನ್‌ ನೀಡಿದ್ದರು. ಜೋಸೆಫ್‌ ದಾಳಿಗೆ ಕಂಗೆಟ್ಟಿದ್ದ ಸನ್‌ರೈಸರ್ಸ್‌ 96ರನ್‌ಗಳಿಗೆ ಆಲೌಟ್‌ ಆಗಿತ್ತು. ಐಪಿಎಲ್‌ನಲ್ಲಿ ಈ ತಂಡ ದಾಖಲಿಸಿದ ಅತೀ ಕಡಿಮೆ ಮೊತ್ತ ಅದಾಗಿತ್ತು.

ಕ್ರಿಸ್‌ ಮೊರಿಸ್‌, ಜೊಫ್ರಾ ಆರ್ಚರ್‌, ಲಸಿತ್‌ ಮಾಲಿಂಗ, ಸ್ಯಾಮ್‌ ಕರನ್, ಜೇಸನ್‌ ಬೆಹ್ರೆನ್‌ಡೋರ್ಫ್‌, ಮಿಷೆಲ್‌ ಮೆಕ್‌ಲೆನಗಾನ್‌ ಅವರ ವೇಗದ ಶಕ್ತಿಯೂ ಈ ಸಲದ ಲೀಗ್‌ನಲ್ಲಿ ಅನಾವರಣಗೊಳ್ಳುತ್ತಿದೆ. ಇವರ ಪ್ರತಿ ಪಂದ್ಯದಲ್ಲೂ ವಿಕೆಟ್‌ ಉರುಳಿಸಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ.

ಶ್ರೀಲಂಕಾದ 35 ವರ್ಷ ವಯಸ್ಸಿನ ಮಾಲಿಂಗ, ಬೌಲಿಂಗ್ ಮಾಡಲು ಬಂದರೆ ಎದುರಾಳಿ ಪಾಳಯದಲ್ಲಿ ನಡುಕ ಶುರುವಾಗುತ್ತದೆ. ಅವರ ಆಫ್‌ ಬ್ರೇಕ್‌ ಮತ್ತು ಯಾರ್ಕರ್‌ ಎಸೆತಗಳನ್ನು ಎದುರಿಸಲು ಬ್ಯಾಟ್ಸ್‌ಮನ್‌ಗಳು ಪರದಾಡುತ್ತಾರೆ. ಈ ಸಲದ ಲೀಗ್‌ನಲ್ಲೂ ಇದು ಸಾಬೀತಾಗಿದೆ.

ಇಂಗ್ಲೆಂಡ್‌ನ ಜೊಫ್ರಾ ಆರ್ಚರ್‌ ಮತ್ತು ಕರನ್‌ ಕೂಡಾ ಗಮನ ಸೆಳೆಯುತ್ತಿದ್ದಾರೆ.

ಭಾರತದ ಬೌಲರ್‌ಗಳೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ. ‘ಡೆತ್‌ ಓವರ್‌’ ಪರಿಣತ ಜಸ್‌ಪ್ರೀತ್‌ ಬೂಮ್ರಾ, ಸ್ವಿಂಗ್‌ ಪರಿಣತರಾದ ಭುವನೇಶ್ವರ್‌ ಕುಮಾರ್‌ ಮತ್ತು ಮೊಹಮ್ಮದ್‌ ಶಮಿ ಅವರು ತಾವು ಪ್ರತಿನಿಧಿಸುವ ತಂಡಗಳ ಆಸ್ತಿಗಳಾಗಿದ್ದಾರೆ.

ಹೊಸ ಅಲೆಯ ಹುಡುಗರಾದ ಪ್ರಸಿದ್ಧ ಕೃಷ್ಣ, ನವದೀಪ್‌ ಸೈನಿ, ದೀಪಕ್ ಚಾಹರ್‌, ಸಂದೀಪ್‌ ಶರ್ಮಾ, ಮೊಹಮ್ಮದ್‌ ಸಿರಾಜ್‌, ಸಿದ್ಧಾರ್ಥ್‌ ಕೌಲ್‌, ಶಾರ್ದೂಲ್‌ ಠಾಕೂರ್‌, ಖಲೀಲ್‌ ಅಹ್ಮದ್‌ ಅವರೂ ಭರವಸೆ ಹೆಚ್ಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.