ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳ ಆಯ್ಕೆಗಾಗಿ ನವೆಂಬರ್ 20ರಂದು ಚುನಾವಣೆ ನಡೆಯಲಿದೆ.
ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ, ಖಜಾಂಚಿ, ಜಂಟಿ ಕಾರ್ಯದರ್ಶಿ ಹಾಗೂ ಆಡಳಿತ ಸಮಿತಿ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ.
ನಾಮಪತ್ರ ಸಲ್ಲಿಕೆಗೆ ನ.5 ಕೊನೆಯ ದಿನವಾಗಿದೆ. ನ.7ರಂದು ಮಧ್ಯಾಹ್ನ ಮೂರರವರೆಗೆ ನಾಮಪತ್ರಗಳ ಪರಿಶೀಲನೆ ಮಾಡಲಾಗುವುದು ಹಾಗೂ ಅಭ್ಯರ್ಥಿಗಳ ಅಂತಿಮಪಟ್ಟಿ ಪ್ರಕಟಿಸಲಾಗುವುದು. ನ.8 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನ.9ರಂದು ಸ್ಪರ್ಧಿಗಳ ಅಂತಿಮ ಪಟ್ಟಿ ಪ್ರಕಟವಾಗಲಿದೆ. ನ.20ರಂದು ಚುನಾವಣೆ ನಡೆಯುವುದು. ಅದೇ ದಿನ ರಾತ್ರಿ 7 ಗಂಟೆಗೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ಕೆಎಸ್‌ಸಿಎ ವೆಬ್‌ಸೈಟ್‌ನಲ್ಲಿ ಹಾಕಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಎಂ.ಆರ್. ಹೆಗಡೆ ಅವರು ಚುನಾವಣಾಧಿಕಾರಿಯಾಗಿದ್ದಾರೆ.
2019ರಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ ನೂತನ ನಿಯಮಾವಳಿ ಜಾರಿಯಾದಾಗ ಚುನಾವಣೆ ನಡೆದಿತ್ತು. ಆ ಸಮಿತಿಯ ಮೂರು ವರ್ಷಗಳ ಅವಧಿಯು ಈಗ ಪೂರ್ಣವಾಗಿದೆ. ಆಗ ಅಧ್ಯಕ್ಷರಾಗಿ ರೋಜರ್ ಬಿನ್ನಿ ಆಯ್ಕೆಯಾಗಿದ್ದರು. ಅವರೊಂದಿಗೆ ಜೆ.ಅಭಿರಾಮ್ (ಉಪಾಧ್ಯಕ್ಷ), ಸಂತೋಷ್ ಮೆನನ್ (ಕಾರ್ಯದರ್ಶಿ), ವಿನಯ್ ಮೃತ್ಯುಂಜಯ (ಖಜಾಂಚಿ) ಹಾಗೂ ಶಾವೀರ್ ತಾರಾಪುರೆ (ಜಂಟಿ ಕಾರ್ಯದರ್ಶಿ) ಆಯ್ಕೆಯಾಗಿದ್ದರು.
ಇತ್ತೀಚೆಗೆ ಬಿನ್ನಿ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಅವಿರೋಧ ಆಯ್ಕೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.