ವೆಂಕಟೇಶ್ ಪ್ರಸಾದ್ , ವಿನಯ್ ಮೃತ್ಯುಂಜಯ್
ಬೆಂಗಳೂರು: ಇನ್ನೆರಡು ತಿಂಗಳಲ್ಲಿ ನಡೆಯಲಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಹಾಗೂ ಮಾಜಿ ಖಜಾಂಚಿ ವಿನಯ್ ಮೃತ್ಯುಂಜಯ ಅವರು ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ.
‘ಸ್ವಾತಂತ್ರ್ಯ ಕೇವಲ ಇತಿಹಾಸವಲ್ಲ. ಅದೊಂದು ಆಯ್ಕೆ. ಮುಂಬರುವ ಚುನಾವಣೆಯಲ್ಲಿ ಮುಂಚೂಣಿಯಲ್ಲಿದ್ದು ಕಾರ್ಯನಿರ್ವಹಿಸುವ ನಾಯಕರನ್ನು ಆಯ್ಕೆ ಮಾಡಿ’ ಎಂಬ ಘೋಷಣೆಯೊಂದಿಗೆ ಪ್ರಸಾದ್ ಮತ್ತು ವಿನಯ್ ಅವರ ತಂಡವು ಕಣಕ್ಕಿಳಿಯಲಿದೆ ಎಂದು ಮೂಲಗಳು ತಿಳಿಸಿವೆ.
ವೆಂಕಟೇಶ್ ಪ್ರಸಾದ್ ಅವರು ಭಾರತ ತಂಡದಲ್ಲಿ ಮಧ್ಯಮವೇಗಿ ಬೌಲರ್ ಆಗಿ 33 ಟೆಸ್ಟ್, 161 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 96 ಮತ್ತು ಏಕದಿನ ಮಾದರಿಯಲ್ಲಿ 196 ವಿಕೆಟ್‌ಗಳನ್ನು ಗಳಿಸಿದ್ದಾರೆ. 123 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ನಿವೃತ್ತಿ ನಂತರ ಭಾರತ ತಂಡದಲ್ಲಿ ಕೆಲಕಾಲ ಬೌಲಿಂಗ್ ಕೋಚ್ ಕೂಡ ಆಗಿದ್ದವರು.
2013 ರಿಂದ 2016 ಅವಧಿಯಲ್ಲಿ ಪ್ರಸಾದ್ ಅವರು ಕೆಎಸ್‌ಸಿಎ ಉಪಾಧ್ಯಕ್ಷರಾಗಿದ್ದರು. ಆಗ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರು ಧ್ಯಕ್ಷ ಮತ್ತು ಕಾರ್ಯದರ್ಶಿಯಾಗಿದ್ದರು.
56 ವರ್ಷ ವಯಸ್ಸಿನ ಪ್ರಸಾದ್ ಅವರು ಪ್ರಸ್ತುತ ಬ್ಯಾಂಕ್ ಅಧಿಕಾರಿಯಾಗಿದ್ದಾರೆ. ಟಿ.ವಿ. ವೀಕ್ಷಕ ವಿವರಣೆಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ವಿನಯ್ ಮೃತ್ಯುಂಜಯ್ ಅವರು 2019 ರಿಂದ 2022ರ ಅವಧಿಯಲ್ಲಿ ಕೆಎಸ್‌ಸಿಎ ಖಜಾಂಚಿಯಾಗಿದ್ದರು.
2022ರಲ್ಲಿ ರಘುರಾಮ್ ಭಟ್ ಅಧ್ಯಕ್ಷತೆಯ ತಂಡವು ಮಾಜಿ ಕ್ರಿಕೆಟಿಗ ಬ್ರಿಜೇಶ್ ಪಟೇಲ್ ಅವರ ಬೆಂಬಲದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಿತು. ಕಳೆದ ಜೂನ್ 4ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವ ಸಂದರ್ಭದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿತ್ತು. 11 ಮಂದಿ ದುರ್ಮರಣಕ್ಕೀಡಾಗಿದ್ದರು. ಹಲವರು ಗಾಯಗೊಂಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಸಂಸ್ಥೆಯ ಪದಾಧಿಕಾರಿಗಳನ್ನು ವಿಚಾರಣೆಗೊಳಪಡಿಸಿದರು. ಕೆಎಸ್‌ಸಿಎ ಕಾರ್ಯದರ್ಶಿ ಎ. ಶಂಕರ್ ಮತ್ತು ಖಜಾಂಚಿ ಎ.ಎಸ್. ಜಯರಾಮ್ ಅವರು ರಾಜೀನಾಮೆ ನೀಡಿದ್ದರು.
ಸೆಪ್ಟೆಂಬರ್ ಕೊನೆಯ ವಾರ ಮತ್ತು ನವೆಂಬರ್‌ನಲ್ಲಿ ಕೆಎಸ್‌ಸಿಎ ಚುನಾವಣೆಗಳು ನಡೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.