ADVERTISEMENT

ಯುಎಇ ಕ್ರಿಕೆಟ್‌ ತಂಡದ ಮುಖ್ಯ ಕೋಚ್ ಆಗಿ ರಜಪೂತ್

ಪಿಟಿಐ
Published 21 ಫೆಬ್ರುವರಿ 2024, 15:53 IST
Last Updated 21 ಫೆಬ್ರುವರಿ 2024, 15:53 IST
ಕ್ರಿಕೆಟ್‌
ಕ್ರಿಕೆಟ್‌   

ದುಬೈ: ಭಾರತ ತಂಡದ ಮಾಜಿ ಆಟಗಾರ ಲಾಲ್‌ಚಂದ್ ರಜಪೂತ್ ಅವರು ಯುನೈಟೆಡ್‌ ಅರಬ್ ಎಮಿರೇಟ್ಸ್‌ (ಯುಎಇ) ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ಮೂರು ವರ್ಷಗಳ ಅವಧಿಗೆ ನೇಮಕಗೊಂಡಿದ್ದಾರೆ. ಪಾಕಿಸ್ತಾನದ ಮುದಸ್ಸರ್ ನಜರ್ ಸ್ಥಾನದಲ್ಲಿ ರಜಪೂತ್ ಅವರನ್ನು ನೇಮಕ ಮಾಡಲಾಗಿದೆ.

ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ನಲ್ಲಿ ಈ ವರ್ಷದ ಮಧ್ಯದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆಯಲು ಯುಎಇ ವಿಫಲವಾದ ಕಾರಣ ಆ ತಂಡಕ್ಕೆ 62 ವರ್ಷದ ರಜಪೂತ್‌ ಅವರನ್ನು ನೇಮಕ ಮಾಡಲಾಗಿದೆ.

ಐಸಿಸಿ ಕ್ರಿಕೆಟ್‌ ವಿಶ್ವಕಪ್ ಲೀಗ್‌2 ಮೂರು ರಾಷ್ಟ್ರಗಳ (ಸ್ಕಾಟ್ಲೆಂಡ್‌, ಕೆನಡ ಇನ್ನೆರಡು ತಂಡಗಳು) ಸರಣಿಗೆ ತಂಡವನ್ನು ಸಜ್ಜುಗೊಳಿಸುವುದು ರಜಪೂತ್ ಅವರ ಮೊದಲ ಪ್ರಮುಖ ಕೆಲಸವಾಗಿದೆ. ಈ ಟೂರ್ನಿಯ ಆತಿಥ್ಯವನ್ನು ಯುಎಇ ವಹಿಸಿದ್ದು ಇದೇ ತಿಂಗಳ 28ರಂದು ಆರಂಭವಾಗಲಿದೆ. ಇದರ ಬೆನ್ನಿಗೇ ಮುಂದಿನ ತಿಂಗಳು ತವರಿನಲ್ಲಿ ಸ್ಕಾಟ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಇದೆ.

ADVERTISEMENT

ರಜಪೂತ್ ಭಾರತ ತಂಡದ ಪರ ಎರಡು ಟೆಸ್ಟ್ ಮತ್ತು ನಾಲ್ಕು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

2007ರಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದುಕೊಂಡಾಗ ರಜಪೂತ್ ಅವರು ತಂಡದ ಕೋಚ್ ಆಗಿದ್ದರು. ಅವರು 2016–17ರಲ್ಲಿ ಅಫ್ಗಾನಿಸ್ತಾನ ತಂಡಕ್ಕೂ ಕೋಚ್‌ ಆಗಿದ್ದರು. ಆ ವೇಳೆಯೇ ಅಫ್ಗಾನಿಸ್ತಾನ ತಂಡಕ್ಕೆ ಐಸಿಸಿಯಿಂದ ಟೆಸ್ಟ್‌ ಸ್ಥಾನಮಾನ ದೊರಕಿತ್ತು.

ಇದಾದ ಬಳಿಕ ಅವರು ಜಿಂಬಾಬ್ವೆ (2018–22) ತಂಡಕ್ಕೂ ಕೋಚ್ ಆಗಿ ಕೆಲಸಮಾಡಿದ್ದು, ಆ ತಂಡ 2022ರ ಟಿ20 ವಿಶ್ವಕಪ್‌ನ ಸೂಪರ್ 12 ಹಂತಕ್ಕೆ ಅರ್ಹತೆ ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.