ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಇದೇ ಮೊದಲ ಬಾರಿಗೆ ಮಹಿಳೆಯರಿಗಾಗಿ ‘ಮಹಾರಾಣಿ ಟ್ರೋಫಿ‘ ಲೀಗ್ ಕ್ರಿಕೆಟ್ ಟೂರ್ನಿಯ ಆಯೋಜಿಸಲು ಸಿದ್ದತೆ ನಡೆಸಿದೆ.
ಈ ಆರಂಭಿಕ ಟಿ20 ಲೀಗ್‌ನಲ್ಲಿ ಐದು ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಟೂರ್ನಿಯ ಪಂದ್ಯಗಳನ್ನು ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಫೈನಲ್ ಮಾತ್ರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲಾಗುವುದು ಎಂದು ಸಂಸ್ಥೆಯ ಉನ್ನತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
‘ಭಾನುವಾರದಿಂದ ಟೂರ್ನಿಯ ಕೆಲವು ಫ್ರ್ಯಾಂಚೈಸಿಗಳು ಪ್ರತಿಭಾಶೋಧ ಆರಂಭಿಸಲಿವೆ. ಅದಕ್ಕಾಗಿ ಟ್ರಯಲ್ಸ್‌ಗಳನ್ನು ಆಯೋಜಿಸಲಾಗುತ್ತಿದೆ. ಪುರುಷರ ವಿಭಾಗದಲ್ಲಿ ಗ್ರಾಮಾಂತರ ಪ್ರದೇಶದ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲು ಮಹಾರಾಜ ಟ್ರೋಫಿ ಟೂರ್ನಿಯು ಕೆಲವು ವರ್ಷಗಳಿಂದ ನಡೆಯುತ್ತಿದೆ. ರಾಜ್ಯದ ಮಹಿಳಾ ಕ್ರಿಕೆಟ್ ಪ್ರತಿಭಾನ್ವಿತರಿಗೂ ಅವಕಾಶ ಕೊಡುವ ಉದ್ದೇಶದಿಂದ ಈ ಟೂರ್ನಿ ಆರಂಭಿಸಲಾಗುತ್ತಿದೆ‘ ಎಂದು ಮೂಲಗಳು ತಿಳಿಸಿವೆ.
ರಾಜನುಕುಂಟೆಯಲ್ಲಿರುವ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ಭಾನುವಾರ ಮೈಸೂರು ವಾರಿಯರ್ಸ್ ತಂಡವು ಪ್ರತಿಭಾ ಶೋಧ ಆಯೋಜಿಸಿದೆ.
ಪುರುಷರಿಗಾಗಿ ‘ಮಹಾರಾಜ ಟ್ರೋಫಿ’ ಕ್ರಿಕೆಟ್ ಟೂರ್ನಿಯು ಆಗಸ್ಟ್ 11ರಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.