ADVERTISEMENT

ಐಪಿಎಲ್‌ನಲ್ಲಿ ಎಸಿಯು ಕಾರ್ಯನಿರ್ವಹಣೆ ಸುಲಭ

ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್‌ ಸಿಂಗ್ ಅಭಿಮತ

ಪಿಟಿಐ
Published 26 ಜುಲೈ 2020, 12:45 IST
Last Updated 26 ಜುಲೈ 2020, 12:45 IST
ಐಪಿಎಲ್‌ ಲೋಗೊ
ಐಪಿಎಲ್‌ ಲೋಗೊ   

ನವದೆಹಲಿ: ಈ ಬಾರಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್‌) ಕ್ರಿಕೆಟ್‌ ಟೂರ್ನಿಯು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯಲಿರುವುದರಿಂದ ಟೂರ್ನಿಯ ಮೇಲೆ ನಿಗಾ ಇಡುವುದು ಸುಲಭವಾಗಲಿದೆ ಎಂದು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕದ ಮುಖ್ಯಸ್ಥ ಅಜಿತ್‌ ಸಿಂಗ್‌ ಹೇಳಿದ್ದಾರೆ.

ಯುಇಎಯಲ್ಲಿ ಸೆಪ್ಟೆಂಬರ್‌ 19ರಿಂದ ಐಪಿಎಲ್‌ ನಿಗದಿಯಾಗಿದೆ. ನವೆಂಬರ್ 8ರಂದು ಫೈನಲ್‌ ಪಂದ್ಯ ನಡೆಯಲಿದೆ. ದುಬೈ, ಶಾರ್ಜಾ ಹಾಗೂ ಅಬುಧಾಬಿ ಕ್ರೀಡಾಂಗಣಗಳು 51 ದಿನಗಳ ಕಾಲ 60 ಪಂದ್ಯಗಳಿಗೆ ಆತಿಥ್ಯ ವಹಿಸಲಿವೆ.

‘ಯುಎಇಯಲ್ಲಿ ನಮ್ಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವುದು ಸ್ವಲ್ಪ ಸುಲಭವಾಗಲಿದೆ. ಭಾರತದಲ್ಲಿ ಎಂಟು ಕ್ರೀಡಾಂಗಣಗಳಲ್ಲಿ ಪಂದ್ಯಗಳು ನಡೆಯುತ್ತಿದ್ದವು. ಆದರೆ ಅಲ್ಲಿ ಮೂರರಲ್ಲಿ ಮಾತ್ರ. ಹೀಗಾಗಿ ಹೆಚ್ಚೇನೂ ಸಮಸ್ಯೆಯಾಗದು. ಟೂರ್ನಿಯ ವೇಳಾಪಟ್ಟಿಯ ಬಿಡುಗಡೆಯಾದ ಬಳಿಕ ಕಾರ್ಯಪಡೆ ರಚಿಸುವ ಕುರಿತು ನಿರ್ಧರಿಸಲಾಗುವುದು‘ ಎಂದು ಅಜಿತ್‌ ಸಿಂಗ್‌ ತಿಳಿಸಿದ್ದಾರೆ.

ADVERTISEMENT

2014ರಲ್ಲಿ ಭಾರತದಲ್ಲಿ ಸಾರ್ವತ್ರಿಕ ಚುನಾವಣೆಗಳು ಇದ್ದ ಕಾರಣ ಐಪಿಎಲ್‌ನ ಕೆಲವು ಪಂದ್ಯಗಳನ್ನು ಯುಎಇನಲ್ಲಿ ಆಡಿಸಲಾಗಿತ್ತು.

‘ಬಿಸಿಸಿಐ ಅಡಿಯಲ್ಲಿ ಸದ್ಯ ಎಂಟು ಮಂದಿ ಎಸಿಯು ಅಧಿಕಾರಿಗಳು ಕಾರ್ಯನಿರ್ಹಿಸುತ್ತಿದ್ದಾರೆ. 60 ಪಂದ್ಯಗಳ ಮೇಲೆ ನಿಗಾ ಇಡಲು ಇಷ್ಟು ಜನ ಸಾಕು. ಆದರೂ ಟೂರ್ನಿಯಲ್ಲಿ ಜೀವ ಸುರಕ್ಷಾ ವಾತಾವರಣ ಹೇಗೆ ರೂಪಿಸಲಾಗುತ್ತದೆ ಎಂಬುದರ ಮೇಲೆನಮ್ಮ ಕಾರ್ಯ ಅವಲಂಬಿತವಾಗಿದೆ. ಅಗತ್ಯ ಎನಿಸಿದರೆ ಇನ್ನಷ್ಟು ಅಧಿಕಾರಿಗಳನ್ನು ನೇಮಿಸಿಕೊಳ್ಳಲಾಗುವುದು‘ ಎಂದು ಸಿಂಗ್‌ ನುಡಿದರು.

ಐಸಿಸಿಯ ಮುಖ್ಯ ಕಚೇರಿಯು ಯುಎಇಯ ದುಬೈನಲ್ಲೇ ಇದೆ. ಹೀಗಾಗಿ ಒಂದು ವೇಳೆ ಅಗತ್ಯ ಬಿದ್ದರೆಬಿಸಿಸಿಐ, ಐಸಿಸಿಯ ಎಸಿಯು ಅಧಿಕಾರಿಗಳ ಸಹಾಯ ಪಡೆಯಬಹುದು‘ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದರು.

’ಇದು ಖಾಸಗಿ ಲೀಗ್‌ ಆಗಿರುವುದರಿಂದ ಸಂಘಟಕರು ಐಸಿಸಿಯ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಬಹುದು. ಬಳಿಕ ಅವರಿಗೆ ಸಂಭಾವನೆ ಪಾವತಿಸಬೇಕಾಗುತ್ತದೆ‘ ಎಂದು ಅಧಿಕಾರಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.