
ದುಬೈ: ಭಾರತ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಐಸಿಸಿ ಏಕದಿನ ಕ್ರಿಕೆಟ್ ಬ್ಯಾಟಿಂಗ್ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ತವರಿನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಮಿಂಚುತ್ತಿರುವ ಅವರು ತಮ್ಮ ವೃತ್ತಿಜೀವನದಲ್ಲೇ ಅತ್ಯುತ್ತಮ ರೇಟಿಂಗ್ ಪಾಯಿಂಟ್ಸ್ ಗಳಿಸಿದ್ದಾರೆ.
29 ವರ್ಷದ ಎಡಗೈ ಬ್ಯಾಟರ್ ಮಂದಾನ ತಮ್ಮ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ ನ್ಯೂಜಿಲೆಂಡ್ ವಿರುದ್ಧ 109 ರನ್ ಮತ್ತು ಬಾಂಗ್ಲಾದೇಶ ವಿರುದ್ಧ ಔಟಾಗದೇ 34 ರನ್ ಗಳಿಸಿದ್ದಾರೆ. ಇದರೊಂದಿಗೆ ರೇಟಿಂಗ್ ಪಾಯಿಂಟ್ಸ್‌ಗಳನ್ನು 828ಕ್ಕೆ ಹೆಚ್ಚಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ಧ ಅಜೇಯ ಶತಕ (104*) ದಾಖಲಿಸಿದ ಆಸ್ಟ್ರೇಲಿಯಾದ ಆ್ಯಷ್ಲೆ ಗಾರ್ಡನರ್ (731) ಆರು ಸ್ಥಾನಗಳ ಜಿಗಿತದೊಂದಿಗೆ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಆದರೆ, ಮಂದಾನ ಅವರಿಗಿಂತ 97 ಪಾಯಿಂಟ್ಸ್ ಹಿಂದಿದ್ದಾರೆ.
ವಿಶ್ವಕಪ್ ಟೂರ್ನಿಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಘವಾಗಿ ಆಡಿದ್ದ ಮಂದಾನ, ಐಸಿಸಿ ಸೆಪ್ಟೆಂಬರ್ ತಿಂಗಳ ಆಟಗಾರ್ತಿ ಗೌರವಕ್ಕೂ ಭಾಜನರಾಗಿದ್ದರು.
ದಕ್ಷಿಣ ಆಫ್ರಿಕಾ ತಂಡದ ನಾಯಕಿ ಲಾರಾ ವೋಲ್ವಾರ್ಟ್ ಕೊನೆಯ ಎರಡು ಪಂದ್ಯಗಳಲ್ಲಿ ಕ್ರಮವಾಗಿ 90 ಮತ್ತು 31 ರನ್ ಗಳಿಸಿದ್ದು, ರ‍್ಯಾಂಕಿಂಗ್‌ನಲ್ಲಿ ಎರಡು ಸ್ಥಾನಗಳ ಬಡ್ತಿಯೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ.
ಭಾರತದ ಮತ್ತೊಬ್ಬ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್ 564 ರೇಟಿಂಗ್ (27ನೇ) ಅಂಕಗಳೊಂದಿಗೆ ಅಗ್ರ 30ರಲ್ಲಿ ಸ್ಥಾನ ಪಡೆದರು. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ಅವರು ವಿಶ್ವಕಪ್ ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
ಏಕದಿನ ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್ (747) ಅಗ್ರಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಏಳು ವಿಕೆಟ್‌ಗಳ ಗೊಂಚಲು ಪಡೆದ ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಅಲನಾ ಕಿಂಗ್ 689 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನಕ್ಕೇರಿದ್ದಾರೆ. ಇದು ಅವರ ವೃತ್ತಿಜೀವನದ ಶ್ರೇಷ್ಠ ಸಾಧನೆಯಾಗಿದೆ. ಆಸ್ಟ್ರೇಲಿಯಾದ ಗಾರ್ಡನರ್ (689) ಮೂರನೇ ಸ್ಥಾನದಲ್ಲಿದ್ದಾರೆ.
ಆಲ್‌ರೌಂಡರ್‌ಗಳ ರ‍್ಯಾಂಕಿಂಗ್‌ನಲ್ಲಿ ಗಾರ್ಡನರ್ (503) ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ಮರೈಝಾನ್ ಕಾಪ್ (422) ಮತ್ತು ವೆಸ್ಟ್ ಇಂಡೀಸ್‌ನ ಹೇಲಿ ಮ್ಯಾಥ್ಯೂಸ್ (420) ಕ್ರಮವಾಗಿ ನಂತರದ ಸ್ಥಾನದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.