ADVERTISEMENT

ಪ್ರೇಕ್ಷಕರಿಲ್ಲದೇ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ ನಡೆಸೋದು ಸರಿಯಲ್ಲ

ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮಾರ್ಕ್‌ ಟೇಲರ್‌ ಅಭಿಪ್ರಾಯ

ಪಿಟಿಐ
Published 28 ಜೂನ್ 2020, 12:39 IST
Last Updated 28 ಜೂನ್ 2020, 12:39 IST
ಮಾರ್ಕ್‌ ಟೇಲರ್
ಮಾರ್ಕ್‌ ಟೇಲರ್   

ಮೆಲ್ಬರ್ನ್‌: ‘ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯವು ಅಸಂಖ್ಯ ಅಭಿಮಾನಿಗಳ ಸಮ್ಮುಖದಲ್ಲಿ ನಡೆದರೇ ಉತ್ತಮ’ ಎಂದು ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಮಾರ್ಕ್‌ ಟೇಲರ್‌ ಅಭಿಪ್ರಾಯಪಟ್ಟಿದ್ದಾರೆ.

ಉಭಯ ತಂಡಗಳ ನಡುವಣ ಈ ಹಣಾಹಣಿಯು ಡಿಸೆಂಬರ್‌ 26ರಿಂದ 30ರವರೆಗೆ ವಿಕ್ಟೋರಿಯಾದ ಮೆಲ್ಬರ್ನ್‌ ಕ್ರಿಕೆಟ್‌ ಮೈದಾನದಲ್ಲಿ (ಎಂಸಿಜಿ) ಆಯೋಜನೆಯಾಗಿದೆ.

ವಿಕ್ಟೋರಿಯಾದಲ್ಲಿ ಕೆಲ ದಿನಗಳಿಂದ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಮೆಲ್ಬರ್ನ್‌ನ ಕೆಲ ಪ್ರದೇಶಗಳಲ್ಲಿ ಲಾಕ್‌ಡೌನ್‌ ಜಾರಿಗೊಳಿಸಲಾಗಿದೆ.

ADVERTISEMENT

‘ಕ್ರಿಸ್‌ಮಸ್‌ ವೇಳೆ ಕೇವಲ 20 ಸಾವಿರ ಮಂದಿಗೆ ಎಂಸಿಜಿಯೊಳಗೆ ಪ್ರವೇಶ ನೀಡುವ ಸಾಧ್ಯತೆ ಇದೆ. ಪ್ರತಿಷ್ಠಿತ ಟೆಸ್ಟ್‌ ಪಂದ್ಯವೊಂದನ್ನು ಇಷ್ಟು ಕಡಿಮೆ ಸಂಖ್ಯೆಯ ಅಭಿಮಾನಿಗಳ ಎದುರು ಆಯೋಜಿಸುವುದು ಸರಿಯಲ್ಲ.ಅಗತ್ಯ ಬಿದ್ದರೆ ಅಧಿಕಾರಿಗಳು ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ತೀರ್ಮಾನ ಕೈಗೊಳ್ಳಬೇಕು’ ಎಂದು ಅವರು ಹೇಳಿದ್ದಾರೆ.

‘ಪರ್ತ್‌ನ ಆಪ್ಟಸ್‌ ಅಥವಾ ಅಡಿಲೇಡ್‌ ಓವಲ್‌ ಮೈದಾನಗಳಿಗೆ ‘ಬಾಕ್ಸಿಂಗ್‌ ಡೇ’ ಟೆಸ್ಟ್‌ ಪಂದ್ಯದ ಆತಿಥ್ಯ ನೀಡಬಹುದು. ಆ ಭಾಗಗಳಲ್ಲಿ ಕೊರೊನಾ ಪ್ರಕರಣಗಳೂ ಕಡಿಮೆ ಇವೆ. ಆಸನ ಸಾಮರ್ಥ್ಯಕ್ಕೆ ಅನುಗುಣವಾಗಿ ಅಭಿಮಾನಿಗಳಿಗೂ ಕ್ರೀಡಾಂಗಣ ಪ್ರವೇಶ ನೀಡಬಹುದು. ಅಡಿಲೇಡ್‌ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಣ ಏಕದಿನ ವಿಶ್ವಕಪ್‌ ಪಂದ್ಯ ಆಯೋಜನೆಯಾಗಿದ್ದಾಗ ಒಂದೇ ಗಂಟೆಯೊಳಗೆ ಟಿಕೆಟ್‌ಗಳು ಬಿಕರಿಯಾಗಿದ್ದವು. ಭಾರತ ತಂಡವು ಆ ಮೈದಾನದಲ್ಲಿ ಪಂದ್ಯ ಆಡಿದರೆ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ’ ಎಂದೂ55 ವರ್ಷ ವಯಸ್ಸಿನ ಟೇಲರ್‌ ನುಡಿದಿದ್ದಾರೆ.

ಆಪ್ಟಸ್‌ ಕ್ರೀಡಾಂಗಣವು ಒಟ್ಟು 60,000 ಆಸನ ಸಾಮರ್ಥ್ಯ ಹೊಂದಿದೆ. ಅಡಿಲೇಡ್‌ ಓವಲ್‌ ಮೈದಾನದ ಆಸನ ಸಾಮರ್ಥ್ಯ 53,500.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.