ADVERTISEMENT

ಮಾನಸಿಕ ಆರೋಗ್ಯ ಸಮಸ್ಯೆ: ವಿಶ್ರಾಂತಿಗೆ ಮ್ಯಾಕ್ಸ್‌ವೆಲ್‌ ನಿರ್ಧಾರ

ಲಂಕಾ ವಿರುದ್ಧ ಆಂತಿಮ ಟಿ–20 ಪಂದ್ಯಕ್ಕೆ ಡಿ’ಆರ್ಸಿ

ರಾಯಿಟರ್ಸ್
Published 31 ಅಕ್ಟೋಬರ್ 2019, 14:31 IST
Last Updated 31 ಅಕ್ಟೋಬರ್ 2019, 14:31 IST
   

ಮೆಲ್ಬರ್ನ್: ಮಾನಸಿಕ ಆರೋಗ್ಯ ಸಮಸ್ಯೆ ತಲೆದೋರಿದ ಕಾರಣ ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕ್ರಿಕೆಟ್‌ನಿಂದ ಅನಿರ್ದಿಷ್ಟ ಅವಧಿಗೆ ವಿಶ್ರಾಂತಿ ಪಡೆದುಕೊಳ್ಳಲಿದ್ದಾರೆ ಎಂದು ತಂಡದ ಕೋಚ್‌ ಜಸ್ಟಿನ್‌ ಲ್ಯಾಂಗರ್ ತಿಳಿಸಿದ್ದಾರೆ.

ಪ್ರಸಕ್ತ ಶ್ರೀಲಂಕಾ ವಿರುದ್ಧದ ಟಿ–20 ಸರಣಿಯ ಎರಡು ಪಂದ್ಯಗಳಲ್ಲಿ ಅವರು ಆಡಿದ್ದರು. ಮೊದಲ ಪಂದ್ಯದಲ್ಲಿ ಬಿರುಸಿನ 62 ರನ್‌ (29 ಎಸೆತಗಳಲ್ಲಿ) ಬಾರಿಸಿದ್ದರು. ಶುಕ್ರವಾರ ನಡೆಯಲಿರುವ ಸರಣಿಯ ಅಂತಿಮ ಪಂದ್ಯದಲ್ಲಿ ಅವರ ಬದಲು ಬ್ಯಾಟ್ಸ್‌ಮನ್‌ ಡಿ’ಆರ್ಸಿ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಸರಣಿಯ ಎರಡನೇ ಪಂದ್ಯಕ್ಕೆ ಮೊದಲು, 31 ವರ್ಷದ ಮ್ಯಾಕ್ಸ್‌ವೆಲ್‌ ವರ್ತನೆಯಲ್ಲಿ ಬದಲಾವಣೆ ಕಂಡುಬಂದ ಕಾರಣ ಸಮಸ್ಯೆ ಗ್ರಹಿಸಿ ಅವರ ಜೊತೆ ಮಾತನಾಡಿರುವುದಾಗಿ ಲ್ಯಾಂಗರ್ ತಿಳಿಸಿದ್ದಾರೆ.

ADVERTISEMENT

ಎದುರಾಳಿ ಬೌಲಿಂಗ್‌ ದಾಳಿಯನ್ನು ದೂಳೀಪಟ ಮಾಡಬಲ್ಲ ಸಮರ್ಥ ಮ್ಯಾಕ್ಸ್‌ವೆಲ್‌, 110 ಏಕದಿನ ಮತ್ತು 61 ಟಿ–20 ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‌ ತಂಡದಲ್ಲಿ ಕಾಯಂ ಸ್ಥಾನ ಪಡೆಯುವ ಅವರ ಆಸೆ ಇನ್ನೂ ಕೈಗೂಡಿಲ್ಲ. ಇದುವರೆಗೆ ಏಳು ಟೆಸ್ಟ್‌ಗಳಲ್ಲಿ ಆಡಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾದ ಆಟಗಾರರು ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.