ADVERTISEMENT

ಮಾನಸಿಕ ಯಾತನೆಯಿಂದ ಹೊರಬಂದ ಟಿಮ್ ಪೇನ್ ಕಥೆ

ಏಜೆನ್ಸೀಸ್
Published 12 ಜುಲೈ 2020, 15:36 IST
Last Updated 12 ಜುಲೈ 2020, 15:36 IST
ಟಿಮ್ ಪೇನ್
ಟಿಮ್ ಪೇನ್   

ಮೆಲ್ಬರ್ನ್: ಹತ್ತು ವರ್ಷಗಳ ಹಿಂದೆ ಆಗಿದ್ದ ಗಾಯದ ಕಾರಣ ತಮ್ಮ ವೃತ್ತಿಜೀವನವೇ ಮುಗಿದುಹೋಯಿತೆಂದು ಮಾನಸಿಕವಾಗಿ ಜರ್ಜರಿತರಾಗಿದ್ದ ಟಿಮ್ ಪೇನ್ ಮನೋವೈದ್ಯರೊಬ್ಬರ ನೆರವಿನಿಂದ ಮತ್ತೆ ಬೆಳೆದು ನಿಂತರು.

ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಸದ್ಯ ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕರಾಗಿದ್ದಾರೆ. ’ಬೌನ್ಸ್‌ ಬ್ಯಾಕ್‌‘ ಪಾಡ್‌ಕಾಸ್ಟ್‌ನಲ್ಲಿ ಅವರು ತಾವು ಪುಟಿದೆದ್ದು ಬಂದ ಯಶೋಗಾಥೆಯನ್ನು ಹೇಳಿಕೊಂಡಿದ್ದಾರೆ.

’ಆಗ ಗಾಯದಿಂದ ಚೇತರಿಸಿಕೊಂಡ ನಂತರ ತರಬೇತಿ ಮರಳಿದೆ. ಎಲ್ಲ ಚೆನ್ನಾಗಿಯೇ ಇದ್ದೆ. ಆದರೆ ವೇಗಿಗಳ ಎಸೆತಗಳು ನನಗೆ ಘಾಸಿ ಮಾಡಲು ಪ್ರಯೋಗವಾಗುತ್ತಿವೆ ಎಂಬ ಭಾವ ಮನದಲ್ಲಿ ಮೂಡಿತ್ತು. ಅದರಿಂದ ಒತ್ತಡವಾಗಿತ್ತು. ನನ್ನ ಆಟದ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಆತ್ಮವಿಶ್ವಾಸ ಕುಂದಿತ್ತು. ನಿದ್ದೆ ಬರುತ್ತಿರಲಿಲ್ಲ. ಅಳುತ್ತಿದ್ದೆ. ಸಿಟ್ಟು ಬರುತ್ತಿತ್ತು. ಸಂಗಾತಿಯೊಂದಿಗೂ (ಈಗ ಪತ್ನಿ) ಅಷ್ಟಕ್ಕಷ್ಟೇ ಆಗಿದೆ‘ ಎಂದು ನೆನಪಿಸಿಕೊಂಡರು.

ADVERTISEMENT

’ಆಗಲೂ ನನಗೆ ಕ್ರಿಕೆಟ್‌ ಮೇಲಿನ ಪ್ರೀತಿ ಕಮ್ಮಿಯಾಗಿರಲಿಲ್ಲ. ವೀಕ್ಷಿಸುತ್ತಿದ್ದೆ ಮತ್ತು ತರಬೇತಿಗೂ ಹೋಗುತ್ತಿದ್ದೆ. ಆದರೆ ಪಂದ್ಯಗಳಲ್ಲಿ ಆಡುವಾಗ ಮಾತ್ರ ಭಯ ಕಾಡುತ್ತಿತ್ತು. ನಾನು ವಿಫಲನಾಗುತ್ತೇನೆಂದು ನನ್ನೊಳಗೇ ಖಚಿತ ಮಾಡಿಕೊಂಡಿದ್ದೆ. ಆದರೆ ನಾನು ಅನುಭವಿಸುತ್ತಿದ್ದ ಯಾತನೆಯ ಅರಿವು ಯಾರಿಗೂ ಗೊತ್ತಿರಲಿಲ್ಲ‘ ಎಂದಿದ್ದಾರೆ.

’ಪರಿಸ್ಥಿತಿ ಕೈಮೀರತೊಡಗಿದಾಗ ಕ್ರಿಕೆಟ್ ಟಾಸ್ಮೆನಿಯಾದ ಕ್ರೀಡಾ ಮನೋಚಿಕಿತ್ಸಕರನ್ನು ಭೇಟಿಯಾದೆ. ಸುಮಾರು 20 ನಿಮಿಷಗಳ ಕಾಲ ಅವರೊಂದಿಗೆ ಮಾತನಾಡಿದ್ದೆ. ವೈದ್ಯರನ್ನು ಭೇಟಿಯಾಗಿ ಹೊರಬಂದಾಗ ನಾನು ಹೊಸ ಮನುಷ್ಯನಾಗಿದ್ದೆ. ಮನಸ್ಸು ಹಗುರವಾಗಿತ್ತು. ಅದು ಜೀವನಕ್ಕೆ ಸಿಕ್ಕ ತಿರುವು‘ ಎಂದು ಟಿಮ್ ಪೇನ್ ಹೇಳಿದ್ದಾರೆ.‌

’ಮನಸಿಕ ಸಮಸ್ಯೆಗಳ ಕುರಿತು ಬಹಳಷ್ಟು ಜನರು ವೈದ್ಯರ ಬಳಿಗೆ ಹೋಗಲು ಹಿಂಜರಿಯುತ್ತಾರೆ. ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸಬೇಕು. ಅದರಿಂದ ಬಹಳ ಉಪಯೋಗವಾಗುತ್ತದೆ‘ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.