
ನವಿ ಮುಂಬೈ (ಪಿಟಿಐ): ಭಾರತ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ ಎಂಬ ಕೊರಗು ಅಮೋಲ್ ಮಜುಂದಾರ್ ಅವರನ್ನು ದೀರ್ಘಕಾಲ ಕಾಡುತ್ತ ಇತ್ತು. ಆದರೆ ಆ ನೋವಿನಿಂದ ಹೊರಬಂದಿರುವ ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಈಗ ಸಂತೃಪ್ತ ವ್ಯಕ್ತಿ.
ಅವರ ಮಾರ್ಗದರ್ಶನದಲ್ಲಿ ಭಾರತದ ಮಹಿಳಾ ತಂಡ ವಿಶ್ವಕಪ್ ಗೆದ್ದಾಗ ಕೆಲಕ್ಷಣ ಏನೂ ತೋಚದೇ ತಮ್ಮದೇ ಲೋಕದಲ್ಲಿ ಕಳೆದುಹೋಗಿದ್ದರು. ಆಮೇಲಷ್ಟೇ ವಾಸ್ತವ ಸಂಭ್ರಮಕ್ಕೆ ಮರಳಿದ್ದರು.
ಫೈನಲ್ ಪಂದ್ಯದ ಕೊನೆಯಲ್ಲಿ ಹರ್ಮನ್‌ಪ್ರೀತ್ ಕೌರ್ ಅವರು ಓಡಿ ಪಡೆದ ಕ್ಯಾಚಿಗೆ ನದಿನ್ ಡಿ ಕ್ಲರ್ಕ್ ಔಟಾಗಿ ಭಾರತ ಗೆದ್ದಾಗ, ಮಜುಂದಾರ್ ಅವರ ಹಲವು ವರ್ಷಗಳಿಂದ ಮನಸ್ಸಿನಲ್ಲೇ ಅನುಭವಿಸಿದ ಯಾತನೆಗೆ ಹಿತಾನುಭವದ ಮುಲಾಮು ಹಚ್ಚಿದಂತಾಗಿತ್ತು.
‘ಆ ಕ್ಯಾಚ್ ಹಿಡಿದ ನಂತರ ನನಗೇನಾಯಿತೆಂದು ಗೊತ್ತೇ ಆಗಲಿಲ್ಲ. ಮುಂದಿನ ಐದು ನಿಮಿಷ ನಾನು ಕಳೆದುಹೋಗಿದ್ದೆ. ಡಗ್ಔಟ್‌ನಲ್ಲೇ ಇದ್ದು ಮುಗಿಲಿನತ್ತ ನೋಡುತ್ತಿದ್ದೆ. ಏನಾಯಿತು ಎಂದೇ ಗೊತ್ತಾಗಲಿಲ್ಲ’ ಎಂದು ಅವರು ಸೋಮವಾರ ಆಯ್ದ ಪತ್ರಕರ್ತರೊಂದಿಗೆ ಸಂವಾದದಲ್ಲಿ ತಿಳಿಸಿದರು.
ಕೇವಲ ಮೂವರಷ್ಟೇ ಮುಖ್ಯ ಕೋಚ್ ಆಗಿ ಇಂಥ ಯಶಸ್ಸು ಸಾಧಿಸಿದ್ದಾರೆ. ಗ್ಯಾರಿ ಕರ್ಸ್ಟೆನ್ ಮತ್ತು ರಾಹುಲ್ ದ್ರಾವಿಡ್ ಮೊದಲ ಇಬ್ಬರು. 1983ರಲ್ಲಿ ಕಪಿಲ್ ದೇವ್ ವಿಶ್ವಕಪ್ ಎತ್ತಿ ಹಿಡಿದಾಗ ತಂಡದಲ್ಲಿ ಮ್ಯಾನೇಜರ್ ಅಷ್ಟೇ ಇದ್ದರು. 2011ರಲ್ಲಿ ಲಾಲ್‌ಚಂದ್ ರಜಪೂತ್ ಅವರು ಹಂಗಾಮಿ ಕೋಚ್ ಆಗಿದ್ದರು.
1990ರ ದಶಕದಲ್ಲಿ ದೇಶಿ ಕ್ರಿಕೆಟ್‌ನಲ್ಲಿ ಛಾಪು ಮೂಡಿಸಿದ್ದ ಕಲಾತ್ಮಕ ಬ್ಯಾಟರ್‌ಗಳಲ್ಲಿ ಅಮೋಲ್ ಒಬ್ಬರು. ಆದರೆ ಅವರು ಆಡುತ್ತಿದ್ದ ಕಾಲಘಟ್ಟದಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮೊದಲಾದ ಘಟಾನುಘಟಿ ಆಟಗಾರರು ತಂಡದಲ್ಲಿದ್ದರು. ಹೀಗಾಗಿ ಅವರಿಗೆ ಸೀನಿಯರ್ ತಂಡದಲ್ಲಿ ಸ್ಥಾನ ಸಿಗಲಿಲ್ಲ.
ಹ್ಯಾರಿಸ್ ಶೀಲ್ಡ್ ಫೈನಲ್‌ನಲ್ಲಿ ಶಾರದಾಶ್ರಮ ಶಾಲಾ ತಂಡದಲ್ಲಿದ್ದ ಅವರು ಪ್ಯಾಡ್ ಕಟ್ಟಿ ತಮ್ಮ ಸರದಿಗೆ ಕಾಯುತ್ತಿದ್ದರು. ಆದರೆ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ದಾಖಲೆಯ 664 ರನ್‌ಗಳ ಜೊತೆಯಾಟದಿಂದ ಅವರಿಗೆ ಬ್ಯಾಟಿಂಗ್ ಮಾಡುವ ಅವಕಾಶವೇ ಸಿಗಲಿಲ್ಲ.
ಶಾಂತಸ್ವಭಾವ, ಸಂಯಮ ಮತ್ತು ಹಸನ್ಮುಖಿ ಅಮೋಲ್ ದೇಶಿ ಕ್ರಿಕೆಟ್‌ನಲ್ಲಿಯೇ ತಮ್ಮ ಸಾಮರ್ಥ್ಯ ತೋರಿದರು. ಮುಂಬೈ ತಂಡವನ್ನು ಕೆಲವು ವರ್ಷ ಮುನ್ನಡೆಸಿದವರು. ದೇಶಿ ಕ್ರಿಕೆಟ್‌ನಲ್ಲಿ 11,000ಕ್ಕೂ ಅಧಿಕ ರನ್ ಗಳಿಸಿದವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.