ADVERTISEMENT

ನೇಪಾಳ ವಿರುದ್ಧ ಟಿ20 ಪಂದ್ಯ: ಮೂರನೇ ಸೂಪರ್ ಓವರಿನಲ್ಲಿ ಗೆದ್ದ ನೆದರ್ಲೆಂಡ್ಸ್!

ಪಿಟಿಐ
Published 17 ಜೂನ್ 2025, 13:33 IST
Last Updated 17 ಜೂನ್ 2025, 13:33 IST
<div class="paragraphs"><p>ನೇಪಾಳದ ತಂಡದ ಆಸಿಫ್‌ ಶೇಖ್‌ ಅವರು ಬ್ಯಾಟ್‌ ಬೀಸಿದರು</p></div>

ನೇಪಾಳದ ತಂಡದ ಆಸಿಫ್‌ ಶೇಖ್‌ ಅವರು ಬ್ಯಾಟ್‌ ಬೀಸಿದರು

   

ಪಿಟಿಐ ಚಿತ್ರ

ಗ್ಲಾಸ್ಗೊ: ಟಿ20 ಅಂತರರಾಷ್ಟ್ರೀಯ ಅಥವಾ ಲಿಸ್ಟ್‌ ಎ ಕ್ರಿಕೆಟ್‌ ಇತಿಹಾಸದಲ್ಲೇ  ಮೊದಲ ಬಾರಿ ಪಂದ್ಯವೊಂದು ಮೂರು ಸೂಪರ್‌ ಓವರ್‌ಗಳನ್ನು ಕಂಡಿದೆ. ಸೋಮವಾರ ರಾತ್ರಿ ನಡೆದ ಟಿ20 ಅಂತರರಾಷ್ಟ್ರೀಯ ತ್ರಿಕೋನ ಸರಣಿಯ ಪಂದ್ಯದಲ್ಲಿ ನೆದರ್ಲೆಂಡ್ಸ್‌ ಮೂರನೇ ಸೂಪರ್‌ ಓವರ್‌ನಲ್ಲಿ ನೇಪಾಳ ತಂಡವನ್ನು ಸೋಲಿಸಿತು.

ADVERTISEMENT

ಮೊದಲು ಆಡಿದ ಡಚ್‌ ತಂಡ 20 ಓವರುಗಳಲ್ಲಿ 7 ವಿಕೆಟ್‌ಗೆ 152 ರನ್ ಬಾರಿಸಿತು. ನೇಪಾಳ ಹೋರಾಟ ತೋರಿದ್ದು, ಕೊನೆಯ ಓವರಿನಲ್ಲಿ 16 ರನ್ ಗಳಿಸಬೇಕಿತ್ತು. ಕೈಲ್‌ ಕ್ಲೀನ್ ಬೌಲಿಂಗ್‌ನಲ್ಲಿ ನಂದನ್ ಯಾದವ್‌ ಅವರ ಬಿರುಸಿನ ಆಟದಿಂದ (ಕೊನೆಯ 4 ಎಸೆತಗಳಲ್ಲಿ 4,2,2,4)  ನೇಪಾಳ ಕೂಡ 8 ವಿಕೆಟ್‌ಗೆ 152 ರನ್ ಗಳಿಸಿತು.ಹೀಗಾಗಿ ಸ್ಕೋರ್ ಸಮನಾಯಿತು.

ಕುಶಲ್ ಭುರ್ತೆಲ್ ಅವರ ಅಜೇಯ 18 ರನ್‌ ನೆರವಿನಿಂದ ನೇಪಾಳ ಮೊದಲ ಸೂಪರ್‌ ಓವರಿನಲ್ಲಿ 19 ರನ್ ಗಳಿಸಿತು. ಆದರೆ ಮ್ಯಾಕ್ಸ್‌ ಓ ಡೌಡ್‌ ಅವರ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿಯ ಸಹಾಯದಿಂದ ಡಚ್ಚರ ತಂಡ ಕೂಡ 19 ರನ್ ಗಳಿಸಿತು.

ಎರಡನೇ ಸೂಪರ್‌ ಓವರಿನಲ್ಲಿ ಮೊದಲು ಆಡಿದ ನೆದರ್ಲೆಂಡ್ಸ್‌ 17 ರನ್ ಗಳಿಸಿತು. ಆದರೆ ದೀಪೇಂದ್ರ ಸಿಂಗ್ ಐರಿ ಅವರು ಕೈಲ್‌ ಕ್ಲೀನ್ಸ್ ಅವರ ಬೌಲಿಂಗ್‌ ಕೊನೆಯ ಎಸೆತವನ್ನು ಮಿಡ್‌ವಿಕೆಟ್‌ಗೆ ಸಿಕ್ಸರ್‌ಗಟ್ಟಿದರಿಂದ ನೇಪಾಳ ಕೂಡ 17 ರನ್ ಗಳಿಸಿದ್ದರಿಂದ ಪಂದ್ಯ ಮೊದಲ ಬಾರಿ ಮೂರನೇ ಸೂಪರ್‌ ಓವರಿಗೆ ಬೆಳೆಯಿತು.

ಆದರೆ ಮೂರನೇ ಸೂಫರ್‌ ಓವರಿನಲ್ಲಿ ಡಚ್‌ ಆಫ್‌ ಸ್ಪಿನ್‌ ಆಲ್‌ರೌಂಡರ್‌ ಝ್ಯಾಕ್ ಲಯನ್‌– ಕ್ಯಾಷೆ ಅವರು ನಾಲ್ಕು ಎಸೆತಗಳಲ್ಲಿ ಒಂದೂ ರನ್ ನೀಡದೇ ಎರಡು ವಿಕೆಟ್‌ ಪಡೆದ ಕಾರಣ ನೇಪಾಳ ಆಲೌಟ್‌ ಆಯಿತು. ಹೀಗಾಗಿ ಡಚ್‌ ತಂಡದ ಗೆಲುವಿಗೆ ಒಂದು ರನ್ ಸಾಕಿತ್ತು. ಮೈಕೆಲ್‌ ಲೆವಿಟ್‌ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಈ ರೋಮಾಂಚಕ ಪಂದ್ಯಕ್ಕೆ ಕೊನೆಗೂ ತೆರೆಯೆಳೆದರು.

ಆತಿಥೇಯ ಸ್ಕಾಟ್ಲೆಂಡ್‌, ತ್ರಿಕೋನ ಸರಣಿಯಲ್ಲಿ ಆಡುತ್ತಿರುವ ಮೂರನೇ ತಂಡವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.