ADVERTISEMENT

ಐಪಿಎಲ್‌ನಲ್ಲಿ ಸಿಗದ ಅವಕಾಶದ ಬಗ್ಗೆ ಸಿಟ್ಟು ಇಲ್ಲ: ಪೂಜಾರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 15:33 IST
Last Updated 8 ಸೆಪ್ಟೆಂಬರ್ 2020, 15:33 IST
ಚೇತೇಶ್ವರ್ ಪೂಜಾರ
ಚೇತೇಶ್ವರ್ ಪೂಜಾರ   

ನವದೆಹಲಿ: ತಮಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಅವಕಾಶ ಸಿಗದಿರುವುದರಿಂದ ನಿರಾಸೆ ಮತ್ತು ಸಿಟ್ಟು ಇಲ್ಲ ಎಂದು ಭಾರತ ಕ್ರಿಕೆಟ್ ತಂಡದ ಆಟಗಾರ ಚೇತೇಶ್ವರ್ ಪೂಜಾರ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ಪರಿಣತ ಬ್ಯಾಟ್ಸ್‌ಮನ್ ಎಂದು ಬಿಂಬಿತರಾಗಿರುವ ಪೂಜಾರ ಅವರನ್ನು ಐಪಿಎಲ್‌ನ ಯಾವುದೇ ಫ್ರ್ಯಾಂಚೈಸಿಯೂ ಖರೀದಿಸಿಲ್ಲ. ಈ ಕುರಿತು ಸುದ್ದಿಸಂಸ್ಥೆಯು ನಡೆಸಿದ ಸಂದರ್ಶನದಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ.

‘ಒಬ್ಬ ಕ್ರಿಕೆಟಿಗನಾಗಿ ಐಪಿಎಲ್ ಹರಾಜು ಪ್ರಕ್ರಿಯೆ ಕುರಿತು ಯಾವುದೇ ಪೂರ್ವಗ್ರಹ ಭಾವನೆ ನನಗಿಲ್ಲ. ನಾನು ಈ ಕುರಿತು ಹೆಚ್ಚು ಯೋಚನೆಯನ್ನೂ ಮಾಡಿಲ್ಲ’ ಎಂದಿದ್ದಾರೆ.

ADVERTISEMENT

‘ಕೆಲವು ವಿಶ್ವ ದರ್ಜೆಯ ಆಟಗಾರರಿಗೂ ಐಪಿಎಲ್‌ನಲ್ಲಿ ಅವಕಾಶ ಸಿಕ್ಕಿಲ್ಲ. ದಕ್ಷಿಣ ಆಫ್ರಿಕಾದ ಅನುಭವಿ ಮತ್ತು ಶ್ರೇಷ್ಠ ಬ್ಯಾಟ್ಸ್‌ಮನ್ ಹಾಶೀಂ ಆಮ್ಲಾ ಅವರಿಗೂ ಹರಾಜು ಪ್ರಕ್ರಿಯೆಯಲ್ಲಿ ಮನ್ನಣೆ ಸಿಕ್ಕಿರಲಿಲ್ಲ. ಟಿ20 ಮಾದರಿಯಲ್ಲಿ ಉತ್ತಮವಾಗಿರುವ ಎಷ್ಟೋ ಆಟಗಾರರಿಗೆ ಅವಕಾಶವೇ ಸಿಕ್ಕಿಲ್ಲ. ಆದ್ದರಿಂದ ನನಗೆ ನನ್ನ ಬಗ್ಗೆ ಯಾವುದೇ ಬೇಸರವಿಲ್ಲ. ಆದರೆ ಅವಕಾಶ ಸಿಕ್ಕರೆ ಐಪಿಎಲ್‌ನಲ್ಲಿ ಆಡಲು ಸಿದ್ಧ’ ಎಂದು ಹೇಳಿದ್ದಾರೆ.

‘ಜನರು ನನಗೆ ಟೆಸ್ಟ್ ಆಟಗಾರನೆಂಬ ಹಣೆಪಟ್ಟಿ ಕಟ್ಟಿರುವುದು ನಿಜ. ಇದರ ಬಗ್ಗೆ ನಾನೇನೂ ಮಾಡಲು ಸಾಧ್ಯವಿಲ್ಲ. ಆದರೆ ನನಗೆ ಅವಕಾಶಗಳು ಸಿಕ್ಕರೆ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಸಾಮರ್ಥ್ಯ ತೋರಿಸಲು ಸಿದ್ಧ. ಲಿಸ್ಟ್ ಎ ಕ್ರಿಕೆಟ್‌ನಲ್ಲಿ ನಾನು ಚೆನ್ನಾಗಿಯೇ ಆಡಿದ್ದೇನೆ. ದೇಶಿ ಟಿ20 ಟೂರ್ನಿಯಲ್ಲಿ (ಸೈಯದ್ ಮುಷ್ತಾಕ್ ಅಲಿ ಟ್ರೋಫಿ) ಶತಕ ಕೂಡ ದಾಖಲಿಸಿದ್ದೇನೆ. ಇಂಗ್ಲೆಂಡ್‌ನಲ್ಲಿ ಲಿಸ್ಟ್ ಎ ಪಂದ್ಯಗಳಲ್ಲಿಯೂ ಚೆನ್ನಾಗಿ ಆಡಿರುವೆ’ ಎಂದು ಸೌರಾಷ್ಟ್ರದ ಪೂಜಾರ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

‘ಸಾಮರ್ಥ್ಯವನ್ನು ಸಾಬೀತುಮಾಡುವುದು ನನ್ನ ಕೈಯಲ್ಲಿದೆ. ಆದರೆ ಅವಕಾಶ ಸಿಗುವವರೆಗೂ ಕಾಯಬೇಕು. ಕ್ರಿಕೆಟ್‌ನ ಎಲ್ಲ ಮಾದರಿಗಳಲ್ಲಿ ಆಡಬೇಕು ಎನ್ನುವುದು ಮೊದಲಿನಿಂದಲೂ ನನ್ನ ಗುರಿಯಾಗಿದೆ. ನಾನು ಕ್ರಿಕೆಟ್ ಆಡುವಷ್ಟು ಕಾಲವೂ ಈ ಆಟದ ವಿಧೇಯ ವಿದ್ಯಾರ್ಥಿಯಾಗಿರುತ್ತೇನೆ. ಪ್ರತಿಯೊಂದು ಹಂತದಲ್ಲಿಯೂ ಕಲಿಯುತ್ತೇನೆ’ ಎಂದು ಹೇಳಿದರು.

ಈ ಹಿಂದೆ ಐಪಿಎಲ್ ನಡೆಯುವ ಸಂದರ್ಭದಲ್ಲಿ ಪೂಜಾರ ಇಂಗ್ಲಿಷ್ ಕೌಂಟಿ ಆಡಲು ತೆರಳುತ್ತಿದ್ದರು. ಅಲ್ಲಿ ಡರ್ಬಿಶೈರ್, ಯಾರ್ಕ್‌ಶೈರ್ ಅಥವಾ ನಾಟಿಂಗ್‌ಹ್ಯಾಮ್‌ನಲ್ಲಿ ಆಡುತ್ತಿದ್ದರು. ಆದರೆ ಭಾರತ ತಂಡದ ತಮ್ಮ ಸಹ ಆಟಗಾರರು ಐಪಿಎಲ್‌ ಆಡುವಾಗ ತಮಗೆ ಬೇಸರವಾಗುತ್ತಿರಲಿಲ್ಲವೇ ಎಂಬ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.

‘ನಿರಾಶೆಯಾಗಿದ್ದು ನಿಜ. ಆದರೆ ತೀರಾ ಹತಾಶೆಯೇನೂ ಆಗಿಲ್ಲ. ಈ ಬಾರಿ ಇಂಗ್ಲೆಂಡ್‌ಗೆ ತೆರಳಲು ನನಗೂ ಸಾಧ್ಯವಾಗಿಲ್ಲ. ಈಗಿನ ಪರಿಸ್ಥಿತಿಯು ಬಹಳ ಚಿಂತಾಜನಕವಾಗಿದೆ. ಸದ್ಯ ಕುಟುಂಬದೊಂದಿಗೆ ಇರುವುದು ಕೂಡ ಮುಖ್ಯವಾಗಿದೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.