ADVERTISEMENT

ನನ್ನ ಸ್ಥಾನದ ಬಗ್ಗೆ ಆತಂಕವಿಲ್ಲ: ರಾಹುಲ್

ವೆಸ್ಟ್ ಇಂಡೀಸ್ ಎದುರಿನ ಟಿ20 ಪಂದ್ಯದಲ್ಲಿ

ಪಿಟಿಐ
Published 12 ಡಿಸೆಂಬರ್ 2019, 19:30 IST
Last Updated 12 ಡಿಸೆಂಬರ್ 2019, 19:30 IST
ಕೆ.ಎಲ್. ರಾಹುಲ್
ಕೆ.ಎಲ್. ರಾಹುಲ್   

ಮುಂಬೈ: ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯುವುದು ಇವತ್ತಿನ ಪೈಪೋಟಿಯಲ್ಲಿ ಯಾರಿಗೂ ಸುಲಭವಿಲ್ಲ. ಅದರಲ್ಲೂ ಒಮ್ಮೆ ಕಳೆದುಕೊಂಡ ಸ್ಥಾನವನ್ನು ಮತ್ತೆ ಪಡೆದು ಗಟ್ಟಿಯಾಗಿ ಹೆಜ್ಜೆಯೂರುವುದು ಇನ್ನೂ ದೊಡ್ಡ ಸವಾಲು. ಇದೀಗ ಅಂತಹ ಸವಾಲನ್ನು ಗೆದ್ದಿರುವ ಖುಷಿಯಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಇದ್ದಾರೆ.

ವೆಸ್ಟ್ ಇಂಡೀಸ್ ಎದುರಿನ ಟ್ವೆಂಟಿ–20 ಸರಣಿಯಲ್ಲಿ ಎರಡು ಅರ್ಧಶತಕಗಳನ್ನು ಹೊಡೆದು ಭಾರತವು ಸರಣಿಯನ್ನು 2–1ರಿಂದ ಜಯಿಸಲು ಪ್ರಮುಖ ಪಾತ್ರ ವಹಿಸಿದರು. ಅದರಲ್ಲೂ ಸರಣಿಯ ‘ಫೈನಲ್‌’ ಎಂದೇ ಬಿಂಬಿತವಾಗಿದ್ದ ಬುಧವಾರದ ಪಂದ್ಯದಲ್ಲಿ ಅವರು 91 ರನ್ ಗಳಿಸಿದ್ದರು. ಭಾರತ 67 ರನ್‌ಗಳಿಂದ ಗೆದ್ದಿತ್ತು. 2–1ರಿಂದ ಸರಣಿ ಜಯಿಸಿತು. ರಾಹುಲ್ ಪಂದ್ಯ ಶ್ರೇಷ್ಠ ಗೌರವ ಗಳಿಸಿದರು. ಗಾಯದಿಂದ ಚೇತರಿಸಿಕೊಳ್ಳದ ಶಿಖರ್ ಧವನ್ ಬದಲಿಗೆ ರೋಹಿತ್ ಜೊತೆಗೆ ರಾಹುಲ್ ಈ ಸರಣಿಯಲ್ಲಿ ಇನಿಂಗ್ಸ್ ಆರಂಭಿಸಿದ್ದರು.

‘ನಾನು ಒತ್ತಡದಲ್ಲಿರಲಿಲ್ಲ ಎಂದು ಹೇಳುವುದಿಲ್ಲ. ಸಹಜವಾಗಿಯೇ ಒತ್ತಡ ಇತ್ತು. ತಂಡದಲ್ಲಿ ಸ್ಥಾನವನ್ನು ಮರಳಿ ಗಳಿಸಿಕೊಳ್ಳುವುದು ಯಾವುದೇ ಆಟಗಾರನಿಗೂ ಸುಲಭವಲ್ಲ. ಅಂತರರಾಷ್ಟ್ರೀಯ ಮಟ್ಟದ ಕ್ರಿಕೆಟ್‌ನಲ್ಲಿರುವ ಸವಾಲನ್ನು ಅರ್ಥ ಮಾಡಿಕೊಂಡು ಸ್ಥಿರವಾಗಿ ನಿಲ್ಲಲು ಸ್ವಲ್ಪ ಸಮಯ ಬೇಕಾಗುತ್ತದೆ. ಈ ಹಂತದಲ್ಲಿ ಎದುರಾಳಿ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಕೂಡ ಅಗತ್ಯ’ ಎಂದು ಪಂದ್ಯದ ನಂತರ ಸುದ್ದಿಗೋಷ್ಠಿಯಲ್ಲಿ ರಾಹುಲ್ ಹೇಳಿದರು.

ADVERTISEMENT

‘ಯಾವಾಗ ಅವಕಾಶ ಸಿಗುತ್ತದೋ ಆಗ ಸಂಪೂರ್ಣ ಸಾಮರ್ಥ್ಯದಿಂದ ಆಡಿ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವುದಷ್ಟೇ ನನ್ನ ನಿಯಂತ್ರಣದಲ್ಲಿದೆ. ನನ್ನ ಬ್ಯಾಟಿಂಗ್ ಅನ್ನು ಮನಸಾರೆ ಅನುಭವಿಸಿದೆ. ಆಡಿದ ರೀತಿಯನ್ನು ಸ್ವಯಂ ಆಸ್ವಾದಿಸಿದೆ. ಇದು ಆತ್ಮವಿಶ್ವಾಸ ಹೆಚ್ಚಿಸಿದೆ. ಯಾವಾಗ ಅವಕಾಶ ಒದಗಿಬಂದರೂ ಅದನ್ನು ಫಲಪ್ರದವಾಗಿಸಿಕೊಳ್ಳುತ್ತೇನೆ’ ಎಂದು 27 ವರ್ಷದ ರಾಹುಲ್ ಹೇಳಿದರು.

’ಕ್ರಿಕೆಟ್ ಎಂದರೆ ಆತ್ಮವಿಶ್ವಾಸದ ಆಟ. ಒಳ್ಳೆಯ ಲಯ ಮತ್ತು ಉತ್ತಮ ಆಟ ಎರಡೂ ಇದ್ದರೆ ಸರಾಗ. ತಂಡದಿಂದ ಹೊರಗಿದ್ದಾಗ ಅಭ್ಯಾಸ ಮಾಡುವ ಹೊತ್ತಿನಲ್ಲಿ ಪಂದ್ಯದಲ್ಲಿ ಆಡುತ್ತಿರುವ ಭಾವನೆಯಿಂದಿರುತ್ತಿದೆ. ಬಹಳಷ್ಟು ದೇಶಿ ಕ್ರಿಕೆಟ್‌ ಪಂದ್ಯಗಳಲ್ಲಿ ಆಡಿದೆ. ನೆಟ್ಸ್‌ನಲ್ಲಿ ಹೆಚ್ಚು ಸಮಯ ತಾಲೀಮು ನಡೆಸಿದೆ. ಬೇರೆ ಯಾವ ಕೆಟ್ಟ ಅಥವಾ ಕ್ಲಿಷ್ಟಕರವಾದ ಆಲೋಚನೆಗಳನ್ನು ಮಾಡಲಿಲ್ಲ. ನನ್ನ ಲೋಪಗಳನ್ನು ಸರಿಪಡಿಸಿಕೊಳ್ಳುವ ನೈಜಕ್ರಿಯೆ ರೂಢಿಸಿಕೊಂಡೆ’ ಎಂದು ಹೇಳಿದರು.

ರಾಹುಲ್ ಮತ್ತು ರೋಹಿತ್ ಶರ್ಮಾ ಅವರು ಮೊದಲ ವಿಕೆಟ್ ಜೊತೆಯಾಟದಲ್ಲಿ 135 ರನ್‌ ಸೇರಿಸಿದ್ದರು. ಇದರಿಂದಾಗಿ ಭಾರತ ತಂಡವು 3 ವಿಕೆಟ್‌ಗಳಿಗೆ 240 ರನ್‌ ಗಳಿಸಿತ್ತು. ಈ ಬೃಹತ್ ಗುರಿಯನ್ನು ಬೆನ್ನತ್ತಿದ್ದ ವೆಸ್ಟ್ ಇಂಡೀಸ್ ತಂಡವು 20 ಓವರ್‌ಗಳಲ್ಲಿ 8ಕ್ಕೆ 173 ರನ್ ಗಳಿಸಿ ಸೋತಿತು. ನಾಯಕ ಕೀರನ್ ಪೊಲಾರ್ಡ್ (68 ರನ್) ಅರ್ಧಶತಕ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.