ADVERTISEMENT

ಇಂಗ್ಲೆಂಡ್ ವಿರುದ್ಧದ ಆಘಾತಕಾರಿ ಸೋಲಿನ ಹೊಣೆ ಹೊರುವೆ: ಸ್ಮೃತಿ ಮಂದಾನ

ಪಿಟಿಐ
Published 20 ಅಕ್ಟೋಬರ್ 2025, 13:38 IST
Last Updated 20 ಅಕ್ಟೋಬರ್ 2025, 13:38 IST
<div class="paragraphs"><p>ಸ್ಮೃತಿ ಮಂದಾನ</p></div>

ಸ್ಮೃತಿ ಮಂದಾನ

   

ಇಂದೋರ್‌: ಇಂಗ್ಲೆಂಡ್ ವಿರುದ್ಧ ನಾಲ್ಕು ರನ್‌ಗಳ ಆಘಾತಕಾರಿ ಸೋಲಿನ ಹೊಣೆಯನ್ನು ತಾವೇ ಹೊರುವುದಾಗಿ ಭಾರತ ತಂಡದ ಉಪ ನಾಯಕಿ ಸ್ಮೃತಿ ಮಂದಾನ ಹೇಳಿದ್ದಾರೆ. ತಮ್ಮ ವಿಕೆಟ್‌ ಪತನವಾಗಿದ್ದು ಬ್ಯಾಟಿಂಗ್ ಕುಸಿತಕ್ಕೆ ಕಾರಣವಾಯಿತು ಎಂದೂ ಹೇಳಿದ್ದಾರೆ.

‘ಹೊಡೆತಗಳ ಆಯ್ಕೆ ಇನ್ನೂ ಉತ್ತಮವಾಗಿರಬಹುದಿತ್ತು ಎಂದೂ ಅವರು ಹೇಳಿದ್ದಾರೆ. ಗೆಲುವಿಗೆ 289 ರನ್ ಗಳಿಸಬೇಕಾಗಿದ್ದ ಭಾರತ ತಂಡವು ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. ನಾಯಕಿ ಹರ್ಮನ್‌ಪ್ರೀತ್ ಜೊತೆ 125 ರನ್ ಮತ್ತು ದೀಪ್ತಿ ಶರ್ಮಾ ಜೊತೆ 67 ರನ್ ಜೊತೆಯಾಟವಾಡಿದ್ದ ಮಂದಾನ (88) ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದರು.

ADVERTISEMENT

ಆದರೆ ಲಾಂಗ್‌ಆನ್‌ ಮೇಲೆ ಚೆಂಡನ್ನು ಎತ್ತುವ ಯತ್ನದಲ್ಲಿ ಮಂದಾನ ನಿರ್ಗಮಿಸಿದ ನಂತರ ಇಂಗ್ಲೆಂಡ್‌ ಮರಳಿ ಹಿಡಿತಪಡೆಯಿತು.

‘ಹೊಡೆತಗಳ ಆಯ್ಕೆ ಉತ್ತಮವಾಗಿರಬೇಕಿತ್ತು. ಈ ತಪ್ಪು ನನ್ನಿಂದಲೇ ಶುರುವಾಯಿತು’ ಎಂದು ಎಡಗೈ ಆಟಗಾರ್ತಿ ಪಂದ್ಯದ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಬರೇ ಐದು ಮಂದಿ ಬೌಲರ್‌ಗಳ ಆಯ್ಕೆಯೊಡನೆ ಕಣಕ್ಕಿಳಿದರೆ ಸಾಲದು ಎಂಬುದು ಕಳೆದ ಎರಡು ಪಂದ್ಯಗಳಲ್ಲಿ ಅರಿವಿಗೆ ಬಂದಿತ್ತು. ನಮ್ಮಲ್ಲಿ ಕೆಲವು ಓವರುಗಳನ್ನು ಮಾಡಬಲ್ಲ ಪರಿಣತ ಬ್ಯಾಟರ್‌ಗಳಿಲ್ಲ’ ಎಂದರು. ‘ಜೆಮಿ (ಜೆಮಿಮಾ ರಾಡ್ರಿಗಸ್‌) ಅಂಥ ಆಟಗಾರ್ತಿಯನ್ನು ಕೈಬಿಡುವುದು ತುಂಬಾ ಕಠಿಣ ನಿರ್ಧಾರ ಎನಿಸುತ್ತದೆ. ಆದರೆ ತಂಡದ ಸಮತೋಲನ ಕಾಪಾಡಲು ಇಂಥ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದರು.

ಸತತ ಮೂರನೇ ಸೋಲಿನಿಂದ ಭಾರತದ ಸೆಮಿಫೈನಲ್ ಹಾದಿ ದುರ್ಗಮವಾಗತೊಡಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.