ADVERTISEMENT

IND vs AUS | ಕೊಹ್ಲಿ ಬಳಗಕ್ಕೆ ಕನಿಷ್ಠ ಮೊತ್ತದ ಕಳಂಕ

ಪಿಟಿಐ
Published 19 ಡಿಸೆಂಬರ್ 2020, 19:24 IST
Last Updated 19 ಡಿಸೆಂಬರ್ 2020, 19:24 IST
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ   
""
""

ಅಡಿಲೇಡ್: ಶನಿವಾರ ಅಡಿಲೇಡ್ ಓವಲ್ ಮೈದಾನದಲ್ಲಿ ಹೊನಲು ಬೆಳಕು ಪ್ರಜ್ವಲಿಸುವ ಮುನ್ನವೇ ಭಾರತ ತಂಡದಲ್ಲಿ ಹೀನಾಯ ಸೋಲಿನ ಕರಿನೆರಳು ಆವರಿಸಿತು.

ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಮತ್ತು ಪ್ಯಾಟ್‌ ಕಮಿನ್ಸ್ ಅವರ ಬಿರುಗಾಳಿ ವೇಗದ ಬೌಲಿಂಗ್ ಮುಂದೆ ವಿರಾಟ್ ಬಳಗವು ಚೆಲ್ಲಾಪಿಲ್ಲಿಯಾಯಿತು. ಐಸಿಸಿ ಶ್ರೇಯಾಂಕದಲ್ಲಿ ಎರಡನೇ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಸೇರಿದಂತೆ ಯಾವ ಆಟಗಾರನೂ ಎರಡಂಕಿ ಮೊತ್ತ ಮುಟ್ಟಲಿಲ್ಲ. ಕ್ರಮವಾಗಿ 4,9,2,0,4,0,8,4,0,4* ಮತ್ತು 1 ರನ್ ಗಳಿಸಿದರು. ಇದರಿಂದಾಗಿ ತನ್ನ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿಯೇ ಇನಿಂಗ್ಸ್‌ವೊಂದರಲ್ಲಿ ಅತ್ಯಂತ ಕನಿಷ್ಠ ಮೊತ್ತ (21.1 ಓವರ್‌ಗಳಲ್ಲಿ 36) ದಾಖಲಿಸಿದ ಕುಖ್ಯಾತಿಗೆ ತಂಡ ಗುರಿಯಾಯಿತು. ಮೊಹಮ್ಮದ್ ಶಮಿ ಮುಂಗೈಗೆ ಗಾಯವಾಗಿದ್ದರಿಂದ ಅವರು ನಿವೃತ್ತರಾದರು.

ಮೊದಲ ಇನಿಂಗ್ಸ್‌ನಲ್ಲಿ53 ರನ್‌ಗಳ ಮುನ್ನಡೆ ಗಳಿಸಿದ್ದ ಕೊಹ್ಲಿ ಪಡೆಯು ಎರಡನೇ ಇನಿಂಗ್ಸ್‌ನಲ್ಲಿ ಕೇವಲ 36 ರನ್‌ ಗಳಿಸಿತು. 90 ರನ್‌ಗಳ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ 21 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 93 ರನ್ ಗಳಿಸಿ, 8 ವಿಕೆಟ್‌ಗಳಿಂದ ಜಯಿಸಿತು. ಅದರೊಂದಿಗೆ ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿ 1–0 ಮುನ್ನಡೆ ಸಾಧಿಸಿತು.

ADVERTISEMENT

ಕೇವಲ ಎರಡೂವರೆ ದಿನಗಳಲ್ಲಿಯೇ ಪಂದ್ಯ ಮುಗಿಯಿತು.ಶುಕ್ರವಾರ ರಾತ್ರಿ ಬ್ಯಾಟಿಂಗ್ ಆರಂಭಿಸಿದ್ದ ಭಾರತ ತಂಡವು 9 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿತ್ತು. ಮೂರನೇ ದಿನದ ಆರಂಭದಲ್ಲಿ ಎರಡು ರನ್ ಗಳಿಸಿದ ಜಸ್‌ಪ್ರೀತ್ ಬೂಮ್ರಾ ಔಟಾಗಿದ್ದೇ ತಡ. ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ಆರಂಭವಾಯಿತು. ಕೇವಲ 16 ರನ್‌ಗಳ ಅಂತರದಲ್ಲಿ ಎಂಟು ವಿಕೆಟ್‌ಗಳು ಪತನವಾದವು. ಅದರಲ್ಲಿ ಐದು ಜೋಶ್ ಹ್ಯಾಜಲ್‌ವುಡ್ ಪಾಲಾದವು. ಅಡಿಲೇಡ್ ಮೈದಾನದಲ್ಲಿ ಅತಿ ಹೆಚ್ಚು (509 ರನ್) ಮತ್ತು ಮೊದಲ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದ ವಿರಾಟ್ ಕೂಡ ಲಯ ಕಂಡುಕೊಳ್ಳಲು ಪರದಾಡಿದರು. ಎಂಟು ಎಸೆತಗಳಲ್ಲಿ ಒಂದು ಬೌಂಡರಿ ಗಳಿಸಿದ ಅವರು ಕ್ಯಾಮರೂನ್ ಗ್ರೀನ್ ಪಡೆದ ಅದ್ಭುತ ಕ್ಯಾಚ್‌ಗೆ ನಿರ್ಗಮಿಸಬೇಕಾಯಿತು.

ಕೊಹ್ಲಿಯದ್ದು ಸೇರಿ ಇಡೀ ಇನಿಂಗ್ಸ್‌ನಲ್ಲಿ ದಾಖಲಾಗಿದ್ದ ನಾಲ್ಕು ಬೌಂಡರಿಗಳು ಮಾತ್ರ. ಮಯಂಕ್ ಅಗರವಾಲ್, ಹನುಮವಿಹಾರಿ ಮತ್ತು ಉಮೇಶ್ ಯಾದವ್ ತಲಾ ಒಂದು ಬಾರಿ ಚೆಂಡನ್ನು ಬೌಂಡರಿಗೆರೆ ದಾಟಿಸಿದರು. ಅಮೋಘ ಬೌಲಿಂಗ್ ಮಾಡಿದ ಆತಿಥೇಯ ವೇಗಿಗಳ ಅಸ್ತ್ರಗಳಿಗೆ ಬ್ಯಾಟ್ಸ್‌ಮನ್‌ಗಳ ಬಳಿ ಪ್ರತಿತಂತ್ರವೇ ಇರಲಿಲ್ಲ. ಸ್ವಿಂಗ್, ಲೈನ್ ಮತ್ತು ಲೆಂಗ್ತ್ ನಿರ್ವಹಣೆಯ ಜೊತೆಗೆ ವೇಗವನ್ನೂ ಮಿಶ್ರ ಮಾಡಿದ ಹ್ಯಾಜಲ್‌ವುಡ್, ಕಮಿನ್ಸ್‌ ಮತ್ತು ಸ್ಟಾರ್ಕ್ ಬ್ಯಾಟ್ಸ್‌ಮನ್‌ಗಳಿಗೆ ಅಲುಗಾಡಲೂ ಆಸ್ಪದ ನೀಡಲಿಲ್ಲ. ಅದೇ ಪಿಚ್‌ನಲ್ಲಿ ಸಣ್ಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್ ಜೋ ಬರ್ನ್ಸ್ (ಔಟಾಗದೇ 51; 63ಎ) ಮತ್ತು ಮ್ಯಾಥ್ಯೂ ವೇಡ್ (33; 53 ಎ) ಭರ್ಜರಿ ಬ್ಯಾಟಿಂಗ್ ಮಾಡಿದರು.

ಕಡ್ಡಿಯನ್ನು ಗುಡ್ಡ ಮಾಡಬೇಡಿ: ವಿರಾಟ್ ಕೊಹ್ಲಿ
ಅಡಿಲೇಡ್: ‘ಹೌದು ನಮ್ಮ ಬ್ಯಾಟಿಂಗ್ ಕಳಪೆಯಾಗಿತ್ತು. ಆದರೆ ದಯವಿಟ್ಟು ಕಡ್ಡಿಯನ್ನು ಗುಡ್ಡ ಮಾಡಬೇಡಿ’ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಜನರಲ್ಲಿ ಮನವಿ ಮಾಡಿದ್ದಾರೆ.

ಶನಿವಾರ ಪಂದ್ಯ ಮುಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದಕ್ಕಿಂತ ಕೆಟ್ಟ ಬ್ಯಾಟಿಂಗ್ ನಮ್ಮ ತಂಡದಿಂದ ಈ ಹಿಂದೆಂದೂ ಆಗಿಲ್ಲ. ಆದರೆ, ಈಗ ಅದನ್ನು ಮರೆಯಬೇಕು. ಮುಂದಿನ ಹಾದಿಯಲ್ಲಿ ಸಾಗಬೇಕು. ಇಲ್ಲಿಂದ ಮೇಲೆ ಏರುವ ಪ್ರಯತ್ನ ನಡೆಯಬೇಕು. ನಮ್ಮ ಬ್ಯಾಟಿಂಗ್‌ನಲ್ಲಿ ಸ್ಥಿರತೆಯ ಕೊರತೆ ಇತ್ತು’ಎಂದರು.

‘ಕ್ರಿಕೆಟ್‌ನಲ್ಲಿ ಈ ರೀತಿಯ ಕುಸಿತಗಳು ಹಿಂದೆಯೂ ಘಟಿಸಿವೆ. ಮುಂದೆಯೂ ಆಗಬಹುದು. ಆದರೆ ನಮ್ಮ ತಪ್ಪುಗಳನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಮುನ್ನಡೆಯಬೇಕು. ಆದ್ದರಿಂದ ಆಗಿ ಹೋಗಿದ್ದರ ಬಗ್ಗೆ ಹೆಚ್ಚು ಚಿಂತೆ ಮಾಡಿದರೆ ಯಾವ ಲಾಭವೂ ಇಲ್ಲ. ಮುಂದೆ ಸಾಧಿಸಬೇಕಾಗಿರುವ ಬಗ್ಗೆ ಕೆಲಸ ಮಾಡುವುದು ಉತ್ತಮ. ತಪ್ಪುಗಳಿಂದ ಕಲಿತು ಮುಂದುವರಿಯಬೇಕು’ಎಂದು ವಿರಾಟ್ ಹೇಳಿದರು.

2018ರಲ್ಲಿ ವಿರಾಟ್ ನಾಯಕತ್ವದ ಭಾರತ ತಂಡವು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯಿಸಿ ಇತಿಹಾಸ ರಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.