ADVERTISEMENT

ಐಪಿಎಲ್‌ನಿಂದ ನನ್ನ ಬದುಕು ಬದಲಾಗಿಲ್ಲ ಎಂದ ಕಮಿನ್ಸ್

ಪಿಟಿಐ
Published 5 ಜುಲೈ 2020, 15:20 IST
Last Updated 5 ಜುಲೈ 2020, 15:20 IST
ಪ್ಯಾಟ್‌ ಕಮಿನ್ಸ್‌–ಎಎಫ್‌ಪಿ ಚಿತ್ರ
ಪ್ಯಾಟ್‌ ಕಮಿನ್ಸ್‌–ಎಎಫ್‌ಪಿ ಚಿತ್ರ   

ನವದೆಹಲಿ: ಸಫಲತೆ ಮತ್ತು ವೈಫಲ್ಯಗಳನ್ನು ಸಮನಾಗಿ ಸ್ವೀಕರಿಸುವ ಗುಣ ಇರುವುದರಿಂದ ಐಪಿಎಲ್‌ನಲ್ಲಿ ದೊಡ್ಡ ಮೊತ್ತ ಸಿಕ್ಕಾಗಲೂ ತಮ್ಮ ಜೀವನದಲ್ಲಿ ಯಾವುದೇ ದೊಡ್ಡ ಬದಲಾವಣೆಯಾಗಲಿಲ್ಲ. ಎಲ್ಲವೂ ಸಹಜವಾಗಿಯೇ ಇದೆ ಎಂದು ಆಸ್ಟ್ರೇಲಿಯಾ ತಂಡದ ಬೌಲರ್ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.

ಟೆಸ್ಟ್‌ ಮಾದರಿಯಲ್ಲಿ ವಿಶ್ವದ ಅಗ್ರ ಕ್ರಮಾಂಕದ ಬೌಲರ್‌ ಆಗಿರುವ ಕಮಿನ್ಸ್‌ ಅವರನ್ನು ಐಪಿಎಲ್‌ ಫ್ರಾಂಚೈಸ್‌ ಕೋಲ್ಕತ್ತ ನೈಟ್‌ ರೈಡರ್ಸ್, 2019ರ ಡಿಸೆಂಬರ್‌ನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ದಾಖಲೆಯ ₹ 15.5 ಕೋಟಿ ನೀಡಿ ಖರೀದಿಸಿದೆ. ಅವರು ಲೀಗ್‌ನ ಇತಿಹಾಸದಲ್ಲೇ ಅತಿ ಹೆಚ್ಚು ‘ಮೌಲ್ಯ’ ಪಡೆದ ವಿದೇಶಿ ಆಟಗಾರ ಎನಿಸಿಕೊಂಡಿದ್ದಾರೆ.

‘ನನ್ನ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳೇನೂ ಆಗಿಲ್ಲ. ಪ್ರತಿ ಪಂದ್ಯದಲ್ಲೂ ಸಾಧ್ಯವಾದಷ್ಟು ಉತ್ತಮ ಆಟವಾಡಲು ಪ್ರಯತ್ನಿಸುತ್ತೇನೆ. ಯಶಸ್ಸು ಅಥವಾ ವೈಫಲ್ಯಗಳ ಬಗ್ಗೆ ಚಿಂತಿಸುವುದಿಲ್ಲ’ ಎಂದು ಐಪಿಎಲ್‌ ಕುರಿತು ಕಮಿನ್ಸ್‌ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ADVERTISEMENT

ಖಾಸಗಿ ಟ್ವೆಂಟಿ–20 ಲೀಗ್‌ಗಳು ಕಾಲಿಟ್ಟ ಬಳಿಕ ಹೆಚ್ಚಿನ ಆಟಗಾರರು ತಮ್ಮ ಆದ್ಯತೆಗಳನ್ನು ಬದಲಾಯಿಸಿಕೊಂಡಿದ್ದಾರೆ. ಆದರೆ ಕಮಿನ್ಸ್‌ ಇದಕ್ಕೆ ಹೊರತಾಗಿದ್ದಾರೆ. ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಅವರಂತೆಯೇ ಟೆಸ್ಟ್‌ ಕ್ರಿಕೆಟ್‌ ಸ್ವರೂಪವನ್ನು ಗೌರವಿಸುತ್ತಾರೆ.

‘ಬಾಲ್ಯದಿಂದಲೇ ಟೆಸ್ಟ್‌ ಕ್ರಿಕೆಟ್‌ ನೋಡುತ್ತಲೇ ಅದರ ಮೇಲೆ ಒಲವು ಬೆಳೆಸಿಕೊಂಡೆ. ಆ ಭಾವನೆ ಇನ್ನೂ ಬದಲಾಗಿಲ್ಲ. ನಮ್ಮ ಕೌಶಲ, ಮಾನಸಿಕ ಸಾಮರ್ಥ್ಯಕ್ಕೆ ಟೆಸ್ಟ್‌ ಮಾದರಿಯುಸವಾಲು ಎಸೆಯುತ್ತಲೇ ಇರುತ್ತದೆ’ ಎಂದು ಕಮಿನ್ಸ್‌ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.