ADVERTISEMENT

ಪಿಸಿಬಿ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ವಹಾಬ್ ರಿಯಾಜ್ ನೇಮಕ

ಪಿಟಿಐ
Published 17 ನವೆಂಬರ್ 2023, 13:52 IST
Last Updated 17 ನವೆಂಬರ್ 2023, 13:52 IST
ವಿಕೆಟ್ ಗಳಿಸಿದಾಗ ಸಂಭ್ರಮಿಸಿದ ವಹಾಬ್ ರಿಯಾಜ್ (ಎಡ) –ರಾಯಿಟರ್ಸ್ ಚಿತ್ರ
ವಿಕೆಟ್ ಗಳಿಸಿದಾಗ ಸಂಭ್ರಮಿಸಿದ ವಹಾಬ್ ರಿಯಾಜ್ (ಎಡ) –ರಾಯಿಟರ್ಸ್ ಚಿತ್ರ   

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ಮಂಡಳಿಯ(ಪಿಸಿಬಿ) ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಮಾಜಿ ವೇಗದ ಬೌಲರ್ ವಹಾಬ್ ರಿಯಾಜ್ ಅವರನ್ನು ನೇಮಕ ಮಾಡಲಾಗಿದೆ. ವಾರದ ಹಿಂದಷ್ಟೇ ಮಾಜಿ ಕ್ರಿಕೆಟಿಗ ಇಂಜಮಮ್ ಉಲ್ ಹಕ್ ಈ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ರಾಷ್ಟ್ರೀಯ ತಂಡದ ಆಟಗಾರರನ್ನು ನಿರ್ವಹಿಸುವ ಕಂಪನಿಯೊಂದರ ಜೊತೆಗಿನ ಅವರ ಸಂಬಂಧವು ಹಿತಾಸಕ್ತಿ ಸಂಘರ್ಷಕ್ಕೆ ಕಾರಣವಾಗುತ್ತದೆಯೇ ಎಂಬ ಕುರಿತು ತನಿಖೆ ನಡೆಸಲು ಪಿಸಿಬಿ ಪ್ರಾರಂಭಿಸಿದ ನಂತರ ಇಂಜಮಾಮ್ ಅಕ್ಟೋಬರ್ 30ರಂದು ರಾಷ್ಟ್ರೀಯ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

38 ವರ್ಷದ ವಹಾಬ್ ರಿಯಾಜ್ ಅವರ ಮುಂದಿರುವ ಮೊದಲ ಸವಾಲೆಂದರೆ, ಆಸ್ಟ್ರೇಲಿಯಾದ ಟೆಸ್ಟ್ ಪ್ರವಾಸ ಮತ್ತು ನ್ಯೂಜಿಲೆಂಡ್‌ನ ಟಿ20 ಸರಣಿಗೆ ತಂಡವನ್ನು ಆಯ್ಕೆ ಮಾಡುವುದಾಗಿದೆ.

ADVERTISEMENT

ರಿಯಾಜ್ ಜೊತೆಗಿನ ಚರ್ಚೆ ಬಳಿಕ ಆಯ್ಕೆ ಸಮಿತಿಯ ಇತರೆ ಸದಸ್ಯರನ್ನು ಪಿಸಿಬಿ ಕೆಲ ದಿನಗಳಲ್ಲಿ ಘೋಷಿಸುವ ಸಾಧ್ಯತೆ ಇದೆ.

ರಿಯಾಜ್ ಅವರು ಪಾಕಿಸ್ತಾನದ ಪಂಜಾಬ್ ರಾಜ್ಯ ಸರ್ಕಾರದ ಕ್ರೀಡಾ ಸಲಹೆಗಾರರಾಗಿದ್ದಾರೆ. 2020ರಿಂದ ಅವರು ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ಆಡಿಲ್ಲ. ಆದರೆ, ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಸಕ್ರಿಯರಾಗಿದ್ದಾರೆ.

ಏಕದಿನ ವಿಶ್ವಕಪ್‌ನಲ್ಲಿ ವೈಫಲ್ಯದ ಹಿನ್ನೆಲೆಯಲ್ಲಿ ಇತ್ತೀಚೆಗೆ ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.