ADVERTISEMENT

ಬ್ಯಾಡ್ಮಿಂಟನ್‌ ಅಸೋಸಿಯೇಷನ್ ಕ್ಷಮೆ ಯಾಚಿಸಿದ ಪ್ರಣಯ್‌

ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡದ ಹಿನ್ನೆಲೆ: ಬಿಎಐ ವಿರುದ್ಧ ಕಿಡಿ ಕಾರಿದ್ದ ಆಟಗಾರ

ಪಿಟಿಐ
Published 23 ಜೂನ್ 2020, 13:03 IST
Last Updated 23 ಜೂನ್ 2020, 13:03 IST
ಎಚ್‌.ಎಸ್‌. ಪ್ರಣಯ್‌– ಎಎಫ್‌ಪಿ ಚಿತ್ರ
ಎಚ್‌.ಎಸ್‌. ಪ್ರಣಯ್‌– ಎಎಫ್‌ಪಿ ಚಿತ್ರ   

ನವದೆಹಲಿ: ತಮ್ಮನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡದ ಹಿನ್ನೆಲೆಯಲ್ಲಿ ಭಾರತ ಬ್ಯಾಡ್ಮಿಂಟನ್‌ ಅಸೋಸಿಯೇಷನ್‌ (ಬಿಎಐ) ವಿರುದ್ಧ ಕಿಡಿ ಕಾರಿದ್ದ ಆಟಗಾರ ಎಚ್‌.ಎಸ್‌.ಪ್ರಣಯ್‌ ಮಂಗಳವಾರ ಕ್ಷಮೆ ಯಾಚಿಸಿದ್ದಾರೆ. ಪ್ರಣಯ್‌ ಅವರ ಟೀಕೆಯನ್ನು ಅಶಿಸ್ತು ಎಂದು ಪರಿಗಣಿಸಿ ಬಿಎಐ, ಅವರಿಗೆ ಕಾರಣ ಕೇಳಿ ನೋಟಿಸ್‌ ನೀಡಿತ್ತು.

ಆದರೆ ರಾಷ್ಟ್ರೀಯ ಬ್ಯಾಡ್ಮಿಂಟನ್‌ ತಂಡದ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರು‌ ಅರ್ಜುನ ಪ್ರಶಸ್ತಿಗೆ ಪ್ರಣಯ್‌ ಅವರ ಹೆಸರು ಶಿಫಾರಸು ಮಾಡಿದ್ದರು.

ವಿಶ್ವದ 28ನೇ ಕ್ರಮಾಂಕದ ಆಟಗಾರ ಪ್ರಣಯ್‌, ಬಿಎಐ ಕ್ರಮದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕಾರಣಕ್ಕಾಗಿ ಹಾಗೂ ಹಿಂದಿನ ಕೆಲವು ಅಶಿಸ್ತಿನ ವರ್ತನೆಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಂಡಳಿ 15 ದಿನಗಳೊಳಗೆ ಉತ್ತರಿಸುವಂತೆ ಅವರಿಗೆ ನೋಟಿಸ್‌ ನೀಡಿತ್ತು.

ADVERTISEMENT

ಬಿಎಐ ಅಧ್ಯಕ್ಷ ಹಿಮಂತ್ ಬಿಸ್ವಾಸ್‌ ಅವರು ಪ್ರಣಯ್‌ ಅವರ ಕ್ಷಮೆಯಾಚನೆಯನ್ನು ಸ್ವೀಕರಿಸಿದ್ದಾರೆ.

‘ಇಂಥ ಘಟನೆ ನಡೆಯಬಾರದಿತ್ತು. ಪ್ರಣಯ್‌ ನಮ್ಮನ್ನು ಸಂಪರ್ಕಿಸಿ ಕ್ಷಮೆ ಕೋರಿದ್ದಾರೆ. ಆಟಗಾರರಿಗೆ ಯಾವುದೇ ವಿಷಯದ ಕುರಿತು ತಕರಾರುಗಳಿದ್ದರೆ ಇನ್ನು ಮುಂದೆ ಮಂಡಳಿಯ ಗಮನಕ್ಕೆ ತರುವ ವಿಶ್ವಾಸವಿದೆ’ ಎಂದು ಬಿಎಐ ಪ್ರಧಾನ ಕಾರ್ಯದರ್ಶಿ ಅಜಯ್‌ ಸಿಂಘಾನಿಯಾ ತಿಳಿಸಿದ್ದಾರೆ.

ಜೂನ್‌ 2ರಂದು ಬಿಎಐ, ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಣಕಿ ರೆಡ್ಡಿ, ಚಿರಾಗ್‌ ಶೆಟ್ಟಿ ಹಾಗೂ ಸಮೀರ್‌ ವರ್ಮಾ ಅವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.