ADVERTISEMENT

ತವರಿನಂಗಳದಲ್ಲಿ ಕನಸು ಅರಳುವ ಹೊತ್ತು

ರಣಜಿ ಕ್ರಿಕೆಟ್: ಕರ್ನಾಟಕ–ಸೌರಾಷ್ಟ್ರ ಸೆಮಿಫೈನಲ್ ಇಂದಿನಿಂದ; ಮಯಂಕ್‌, ಪೂಜಾರ ಪ್ರಮುಖ ಆಕರ್ಷಣೆ

ಗಿರೀಶದೊಡ್ಡಮನಿ
Published 23 ಜನವರಿ 2019, 19:04 IST
Last Updated 23 ಜನವರಿ 2019, 19:04 IST
ಬುಧವಾರ ಅಭ್ಯಾಸದ ನಡುವೆ ಮಾತುಕತೆಯಲ್ಲಿ ನಿರತರಾಗಿರುವ ಕರ್ನಾಟಕ ತಂಡದ ಆರ್‌. ಸಮರ್ಥ್‌, ಡಿ. ನಿಶ್ಚಲ್‌ ಮತ್ತು ಮಯಂಕ್‌ ಅಗರ್‌ವಾಲ್‌ ಪ್ರಜಾವಾಣಿ ಚಿತ್ರ/ಶ್ರೀಕಂಠ ಶರ್ಮಾ
ಬುಧವಾರ ಅಭ್ಯಾಸದ ನಡುವೆ ಮಾತುಕತೆಯಲ್ಲಿ ನಿರತರಾಗಿರುವ ಕರ್ನಾಟಕ ತಂಡದ ಆರ್‌. ಸಮರ್ಥ್‌, ಡಿ. ನಿಶ್ಚಲ್‌ ಮತ್ತು ಮಯಂಕ್‌ ಅಗರ್‌ವಾಲ್‌ ಪ್ರಜಾವಾಣಿ ಚಿತ್ರ/ಶ್ರೀಕಂಠ ಶರ್ಮಾ   

ಬೆಂಗಳೂರು: ‘ಹೊಸ ಚಿಗುರು, ಹಳೆ ಬೇರು ಕೂಡಿರಲು ಮರ ಸೊಬಗು..’

ಈಗಿನ ಕರ್ನಾಟಕ ಕ್ರಿಕೆಟ್ ತಂಡವನ್ನು ನೋಡಿದಾಗ ‘ಮಂಕುತಿಮ್ಮನ ಕಗ್ಗ’ದ ಈ ಸಾಲು ನೆನಪಿಗೆ ಬರದಿರದು. ಇತಿಹಾಸದ ಪುಟ ಸೇರಿಹೋದ ಎಪ್ಪತ್ತು ದಿನಗಳಲ್ಲಿ ರಾಜ್ಯ ತಂಡದಲ್ಲಿ ಆಗಿರುವ ಬದಲಾವಣೆಗಳ ಫಲ ಇದು. ಹೋದ ನವೆಂಬರ್ 14ರಿಂದ ಈ ಬಾರಿಯ ರಣಜಿ ಟ್ರೋಫಿ ಕ್ರಿಕೆಟ್ ಅಭಿಯಾನ ಆರಂಭಿಸಿದ್ದ ರಾಜ್ಯ ತಂಡವು ಹಲವು ಏಳು–ಬೀಳುಗಳನ್ನು ಕಂಡು ನಾಲ್ಕರ ಘಟ್ಟಕ್ಕೆ ಬಂದು ನಿಂತಿದೆ. ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಹಣಾಹಣಿಯಲ್ಲಿ ಎಲೀಟ್ ಗುಂಪಿನ ಬಲಿಷ್ಠ ತಂಡವಾದ ಸೌರಾಷ್ಟ್ರವನ್ನು ಎದುರಿಸಲು ಸಿದ್ಧವಾಗಿದೆ.

ಈ ಋತುವಿನಲ್ಲಿ ಎಂಟು ಯುವಪ್ರತಿಭೆಗಳ ಪದಾರ್ಪಣೆ, ನಾಯಕತ್ವದ ಬದಲಾವಣೆಗಳನ್ನು ಕಂಡಿರುವ ಮನೀಷ್ ಪಾಂಡೆ ಬಳಗಕ್ಕೆ ಈ ಪಂದ್ಯವು ಅಗ್ನಿಪರೀಕ್ಷೆಯೇ ಸರಿ. ಅನುಭವದ ಗಟ್ಟಿ ಬೇರುಗಳಾದ ಮಯಂಕ್ ಅಗರವಾಲ್, ಮನೀಷ್, ಕರುಣ್ ನಾಯರ್, ಆರ್. ವಿನಯಕುಮಾರ್, ಅಭಿಮನ್ಯು ಮಿಥುನ್, ಹೊಸಚಿಗುರುಗಳಾದ ಕೆ.ವಿ. ಸಿದ್ಧಾರ್ಥ್, ಡೇಗಾ ನಿಶ್ಚಲ್, ಬಿ.ಆರ್. ಶರತ್ ಅವರ ಬಲ ತಂಡಕ್ಕೆ ಇದೆ. ಈ ಸಮೀಕರಣಕ್ಕೆ ಸಿಹಿಫಲ ಸಿಗುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

ADVERTISEMENT

ಆದರೆ ಫೈನಲ್ ಪ್ರವೇಶದ ಹಾದಿ ಸುಲಭವಾಗಿಲ್ಲ. ಲಖನೌನಲ್ಲಿ ನಡೆದಿದ್ದ ಕ್ವಾರ್ಟರ್‌ಫೈನಲ್‌ನಲ್ಲಿ ಉತ್ತರಪ್ರದೇಶ ಒಡ್ಡಿದ್ದ ಕಠಿಣ ಗುರಿಯನ್ನು(372 ರನ್) ಯಶಸ್ವಿಯಾಗಿ ಮುಟ್ಟಿದ್ದ ಸೌರಾಷ್ಟ್ರ ದಾಖಲೆ ಬರೆದಿತ್ತು. ಆಸ್ಟ್ರೇಲಿಯಾದ ಟೆಸ್ಟ್‌ ಸರಣಿ ಜಯದ ರೂವಾರಿಯಾಗಿದ್ದ ಚೇತೇಶ್ವರ್ ಪೂಜಾರ ಅವರ ಬಲವೂ ಈ ತಂಡಕ್ಕೆ ಇದೆ. ಅದೇ ಸರಣಿಯಲ್ಲಿ ಪದಾರ್ಪಣೆ ಮಾಡಿ ಮಿಂಚಿ ಬಂದಿದ್ದ ಕರ್ನಾಟಕದ ಮಯಂಕ್ ಅಗರವಾಲ್ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದಾರೆ.

ಆದರೆ ಅವರಿಗಾಗಿ ಸ್ಥಾನ ಬಿಟ್ಟುಕೊಡುವವರು ಯಾರು? ಎಂಬ ಕುತೂಹಲ ಈಗ ಇದೆ. ಮಯಂಕ್ ಇಲ್ಲದ ಸಂದರ್ಭದಲ್ಲಿ ಸ್ಥಾನ ಪಡೆದಿದ್ದ ಡೇಗಾ ನಿಶ್ಚಲ್ ಒಟ್ಟು 620 ರನ್‌ಗಳನ್ನು ಪೇರಿಸಿದ್ದಾರೆ. ಅದರಲ್ಲಿ ಮೂರು ಶತಕಗಳು ಇವೆ. ಆದರೆ ಆರು ಪಂದ್ಯಗಳಲ್ಲಿ 163 ರನ್‌ಗಳನ್ನು ಗಳಿಸಿರುವ ಆರ್. ಸಮರ್ಥ್ ಬೆಂಚ್ ಕಾಯುವ ಸಾಧ್ಯತೆ ಹೆಚ್ಚಿದೆ. ಅವರು ಹೋದ ವರ್ಷಗಳಲ್ಲಿ ತಂಡಕ್ಕೆ ನೀಡಿರುವ ಕಾಣಿಕೆಗಳನ್ನು ತಂಡದ ಆಡಳಿತ ಪರಿಗಣಿಸಿದರೆ ನಿಶ್ಚಲ್ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ.

ಮತ್ತೊಬ್ಬ ಅನುಭವಿ ಕರುಣ್ ನಾಯರ್ ಹೋದವಾರ ಇಲ್ಲಿಯೇ ನಡೆದಿದ್ದ ರಾಜಸ್ಥಾನ ಎದುರಿನ ಕ್ವಾರ್ಟರ್‌ಫೈನಲ್‌ನ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿ ಲಯಕ್ಕೆ ಮರಳಿರುವುದು ತಂಡದ ಬಲ ಹೆಚ್ಚಿಸಿದೆ. ಆ ಪಂದ್ಯದ ಗೆಲುವಿನ ರೂವಾರಿ ಆರ್. ವಿನಯಕುಮಾರ್, ಶ್ರೇಯಸ್ ಗೋಪಾಲ್, ಕೃಷ್ಣಪ್ಪ ಗೌತಮ್ ಕೂಡ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ. ಅಭ್ಯಾಸದ ಸಂದರ್ಭದಲ್ಲಿ ಗೌತಮ್ ಕೈಗೆ ಪೆಟ್ಟಾಗಿತ್ತು. ಆದರೆ, ಅದೇನೂ ದೊಡ್ಡ ಗಾಯವಲ್ಲ ಎಂದು ತಂಡದ ಮೂಲಗಳು ಸ್ಪಷ್ಟಪಡಿಸಿವೆ.

ಹೋದ ತಿಂಗಳು ರಾಜ್‌ಕೋಟ್‌ನಲ್ಲಿ ಸೌರಾಷ್ಟ್ರ ಎದುರಿನ ಲೀಗ್ ಪಂದ್ಯದಲ್ಲಿ ಕರ್ನಾಟಕ ಸೋತಿತ್ತು. ‘ಕಳಪೆ ಪಿಚ್’ ಆರೋಪ ಕೇಳಿಬಂದಿತ್ತು. ಇದೀಗ ಮಂಜಿನ ಹನಿಗಳನ್ನು ಆಸ್ವಾದಿಸುತ್ತಿರುವ ಹಸಿರು ಗರಿಕೆಗಳ ಹೊದಿಕೆಯಲ್ಲಿ ಪವಡಿಸಿರುವ ಚಿನ್ನಸ್ವಾಮಿ ಅಂಗಳದ ಸ್ಪರ್ಧಾತ್ಮಕ ಪಿಚ್ ರೋಚಕ ಹೋರಾಟದ ರಸದೌತಣ ಬಡಿಸಲು ಸಿದ್ಧವಾಗಿದೆ. ತವರಿನ ಅಭಿಮಾನಿಗಳ ಹಾರೈಕೆ ಫಲಿಸಿದರೆ ಫೈನಲ್ ಕನಸು ಕೈಗೂಡುವುದು ಖಚಿತ.

ತಂಡಗಳು ಇಂತಿವೆ

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ಮಯಂಕ್ ಅಗರವಾಲ್, ಡೇಗಾ ನಿಶ್ಚಲ್, ಕರುಣ್ ನಾಯರ್, ಕೆ.ವಿ. ಸಿದ್ಧಾರ್ಥ್, ಬಿ.ಆರ್. ಶರತ್ (ವಿಕೆಟ್‌ಕೀಪರ್), ಆರ್. ವಿನಯಕುಮಾರ್, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಆರ್. ಸಮರ್ಥ್, ಜೆ ಸುಚಿತ್, ಪವನ್ ದೇಶಪಾಂಡೆ. ಯರೇಗೌಡ (ಮುಖ್ಯ ಕೋಚ್), ಎಸ್. ಅರವಿಂದ್ (ಬೌಲಿಂಗ್ ಕೋಚ್).

ಸೌರಾಷ್ಟ್ರ: ಜಯದೇವ್ ಉನದ್ಕತ್ (ನಾಯಕ), ಹರ್ವಿಕ್ ದೇಸಾಯಿ, ಸ್ನೆಲ್ ಪಟೇಲ್, ವಿಶ್ವರಾಜ್ ಜಡೇಜ, ಚೇತೇಶ್ವರ್ ಪೂಜಾರ, ಶೆಲ್ಡನ್ ಜ್ಯಾಕ್ಸನ್, ಅರ್ಪಿತ್ ವಾಸ್ವದಾ, ಪ್ರೇರಕ್ ಮಂಕಡ್, ಕಮಲೇಶ್ ಮಕ್ವಾನಾ, ಧರ್ಮೇಂದ್ರಸಿಂಹ ಜಡೇಜ, ಚೇತನ್ ಸಕಾರಿಯಾ. ಸಿತಾಂಶು ಕೋಟಕ್ (ಮುಖ್ಯ ಕೋಚ್), ನೀರಜ್ ವದೇದ್ರಾ (ಸಹಾಯಕ ಕೋಚ್).

ಸ್ಥಳ: ಚಿನ್ನಸ್ವಾಮಿ ಕ್ರೀಡಾಂಗಣ

ಪಂದ್ಯ ಆರಂಭ: ಬೆಳಿಗ್ಗೆ 9.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.